ಭಟ್ಕಳ : ಉತ್ತರಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಇಬ್ಬರೂ ಅಧಿಕಾರಿಗಳು ಕೇಂದ್ರ ಸರ್ಕಾರದ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಮಧ್ಯಪ್ರದೇಶ ಕೇಡರನ ಐ.ಎ.ಎಸ್ ಅಧಿಕಾರಿ ತೇಜಸ್ವಿ ನಾಯ್ಕ ಅವರು ಕೇಂದ್ರ ಬೃಹತ್ ಮತ್ತು ಮದ್ಯಮ ಕೈಗಾರಿಕೆ ಸಚಿವರಾದ ಎಚ್.ಡಿ ಕುಮಾರಸ್ವಾಮಿ ಅವರ ಆಪ್ತ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನವರಾದ ಇವರು ಮಧ್ಯಪ್ರದೇಶದ ರ‍್ವಾನಿ ಹಾಗೂ ಬೆತುಲನಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಮಧ್ಯಪ್ರದೇಶದಲ್ಲಿ ಆಡಳಿತ ಸುಧಾರಣೆಯಲ್ಲಿ ಖಡಕ್ ಅಧಿಕಾರಿಯೆಂದೇ ಹೆಸರುವಾಸಿಯಾಗಿದ್ದರು. ಕಳೆದ ಬಾರಿ ಮೋದಿ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದ ನರೇಂದ್ರ ಸಿಂಗ್ ತೋಮರ್ ಹಾಗೂ ಅರ್ಜುನ ಮುಂಡಾ ಅವರ ಆಪ್ತ ಸಹಾಯಕರಾಗಿ ಕೆಲಸ ನಿರ್ವಹಿಸಿದ್ದ ಅವರಿಗೆ ಈ ಬಾರಿ ಎಚ್.ಡಿ ಕುಮಾರಸ್ವಾಮಿ ಅವರ ಕೈಗಾರಿಕೆಗೆ ಖಾತೆಯ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ. ಇವರ ಪತ್ನಿ ಸ್ವಾತಿ ಮೀನಾ ನಾಯ್ಕ ಕೂಡ ಐ.ಎ.ಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಕೇಂದ್ರ ಸರ್ಕಾರದ ಜಲ್ ಜೀವನ್ ಮೀಷನ್ ಇದರ ಜೆ.ಎಸ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ನಿವಾಸಿಯಾಗಿರುವ ರಾಜೇಶ ನಾಯ್ಕ ಐ.ಎಪ್.ಎಸ್ ಶ್ರೇಣಿಯ ಅಧಿಕಾರಿಯಾಗಿದ್ದು, ಪ್ರಸ್ತುತ ಭಾರತದ ಉಪರಾಷ್ಟ್ರಪತಿ ಜಗದೀಪ ಧನಕರ್ ಅವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ ಜಪಾನ್ ಹಾಗೂ ಅಮೇರಿಕದಲ್ಲಿ ಕಾರ್ಯನಿರ್ವಹಿಸಿದ ಬಳಿಕ ರಿಜಿನಲ್ ಪಾಸ್ಪೋಟರ್ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಮೋದಿ ಅವರು ಜಪಾನ್ ಭೇಟಿ ಸಂದರ್ಭದಲ್ಲಿ ಅಲ್ಲಿನ ಭಾಷಾ ಪರಿವರ್ತಕರಾಗಿ ಅವರ ಜೊತೆ ಪ್ರಯಾಣ ಬೆಳೆಸಿದ್ದರು.