ಲಕ್ನು: ದಿಲ್ಲಿಯ ಕೇಂದ್ರ ನಾಯಕತ್ವದ ಮಧ್ಯಪ್ರವೇಶದ ಬಳಿಕ ಶಮನಗೊಂಡಿದ್ದ ಉತ್ತರ ಪ್ರದೇಶ ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯಗಳು ಈಗ ಮತ್ತೊಮ್ಮೆ ಗರಿಗೆದರಿವೆ. ಬಿಜೆಪಿ ಪ್ರಾಬಲ್ಯದ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟ ನಜೂಲ್ ಆಸ್ತಿ(ನಿರ್ವಹಣೆ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿ ಬಳಕೆ) ಮಸೂದೆ 2024ನ್ನು ವಿಧಾನ ಪರಿಷತ್ತಿಗೆ ಕಳುಹಿಸಲಾಗಿದ್ದು, ಅಲ್ಲಿರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸದನದ ಸದಸ್ಯ ಭೂಪೇಂದ್ರ ಚೌಧರಿಯವರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಯೋಗಿ ಸರಕಾರವು ನಜೂಲ್ ಆಸ್ತಿಗಳ ಅತಿಕ್ರಮಣವನ್ನು ತಡೆಯಲು ಈ ಮಸೂದೆಯನ್ನು ತಂದಿದೆ. ಮಸೂದೆಯನ್ನು ಈಗ ಸದನದ ಆಯ್ಕೆ ಸಮಿತಿಗೆ ಉಲ್ಲೇಖಿಸಲಾಗಿ ದ್ದು ಅದು ಮಸೂದೆಯ ಮೌಲ್ಯಮಾಪನ ನಡೆಸಿ ಎರಡು ತಿಂಗಳುಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ. ನಂತರ ಶಿಫಾರಸು ಮಾಡಲಾದ ತಿದ್ದುಪಡಿ ಗಳೊಂದಿಗೆ ಮಸೂದೆಯನ್ನು ಚರ್ಚೆಗಾಗಿ ಮತ್ತೆ ವಿಧಾನ ಪರಿಷತ್ತಿಗೆ ಕಳುಹಿಸಲಾಗುವುದು.
ನಜೂಲ್ ಜಮೀನು ಅಥವಾ ಕಟ್ಟಡವನ್ನು ಮೋಸದಿಂದ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ಕಂಡುಬಂದರೆ ಅದನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಸರಕಾರಕ್ಕೆ ನೀಡಲು ಮಸೂದೆಯು ಉದ್ದೇಶಿಸಿದೆ. ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ಮಸೂದೆಯನ್ನು ವಿರೋಧಿಸಿದ್ದವು. ಪ್ರಯಾಗರಾಜ್‌ನ ಸಿದ್ದಾರ್ಥನಾಥ ಮತ್ತು ಹರ್ಷವರ್ಧನ ಬಾಜಪೈ ಅವರಂತಹ ಕೆಲವು ಆಡಳಿತ ಪಕ್ಷದ ಶಾಸಕರೂ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದರು.