ಭಟ್ಕಳ, ಮಾರ್ಚ್ 8; ಮುಸ್ಲಿಮ್ ಸಮುದಾಯಕ್ಕೆ ಮೀಸಲಾತಿ ಯನ್ನು ಕಲ್ಪಿಸುವಂತೆ ಆಗ್ರಹಿಸಿ ಪಾಪ್ಯುಲರ?? ಫ್ರಂಟ್ ಆಫ್ ಇಂಡಿಯಾವು ನಡೆಸುತ್ತಿರುವ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಸೋಮವಾರ ಸಂಜೆ ಇಲ್ಲಿನ ರಾ.ಹೆ.೧೭ ರ ಪಕ್ಕದಲ್ಲಿರುವ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಿತು.
ಸಭೆಯನ್ನುದ್ದೇಶಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯ ಸದಸ್ಯ ಹಾಗೂ ಮಾನವ ಹಕ್ಕು ಹೋರಾಟಗಾರ ಮುಹಮ್ಮದ್ ತಾಹಿರ್ ಮಾತನಾಡಿ ನಮ್ಮ ದೇಶದಲ್ಲಿ ಲೆಕ್ಕವಿಲ್ಲದಷ್ಟು ಆಯೋಗಗಳು ರಚನೆಗೊಂಡಿವೆ ಆದರೆ ಅವುಗಳೆಲ್ಲ ಕಡತಗಳಲ್ಲಿಯೆ ಕೊಳೆಯುತ್ತಿವೆ ಮುಸ್ಲಿಮರ ಮೀಸಲಾತಿ ಕುರಿತಂತೆ ರಚನೆಗೊಂಡ ನ್ಯಾ.ರಂಗನಾಥ್ ಮಿಶ್ರ ಆಯೋಗವನ್ನು ಕೂಡಲೆ ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿ ಮೀಸಲಾತಿ ಎಂದರೆ ಅದು ದುರ್ಬಲ ವರ್ಗದವರು ಎಲ್ಲ ಜನರೊಂದಿಗೆ ಸರಿಸಮಾನವಾಗಿ ಬಾಳಲು ಅವರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಸಂವಿಧಾನವು ನೀಡುವ ನೆರವು ಆಗಿದೆ ಎಂದರು. ಮುಸ್ಲಿಮರ ಕುರಿತಂತೆ ಸರಕಾರವು ಹಲವಾರು ಆಯೋಗಗಳನ್ನು ರಚಿಸಿದೆ ಆದರೆ ಯಾವುದನ್ನು ಸಮರ್ಪಕವಾಗಿ ಜಾರಿಗೊಳಿಸಿಲ್ಲ ಎಂದರು. ರಂಗನಾಥಮಿಶ್ರ ಆಯೋಗವು ಹಿಂದುಳಿದವರ ಹಕ್ಕನ್ನು ಕಸಿದು ಅಲ್ಪ ಸಂಖ್ಯಾತರಿಗೆ ನೀಡಿದೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದ ಅವರು ಮುಸ್ಲಿಮ್ ಮೀಸಲಾತಿ ಕುರಿತಂತೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ದೇಶದ ಇತರ ಸಮುದಾಯದಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತಿದ್ದಾರೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಉಡುಪಿ ಜಿಲ್ಲಾಧ್ಯಕ್ಷ ಅಮೀರ್ ಹಮ್ಝಾ ಮಾತನಾಡಿ ದೇಶದ ಮುಸ್ಲಿಮ ಸಮುದಾಯಕ್ಕೆ ನ್ಯಾಯಯುತವಾಗಿ ಮೀಸಲಾತಿ ದೊರಕಬೇಕು, ಪೂರ್ಣ ಶೇ೧೦% ಮೀಸಲಾತಿಯನ್ನೊಳಗೊಂಡಂತೆ ಅಲ್ಪಸಂಖ್ಯಾತರಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಶೇ೧೫ ಮೀಸಲಾತಿಯನ್ನು ನೀಡಬೇಕೆಂದು ಮಿಶ್ರ ಆಯೋಗವು ತನ್ನ ವರದಿಯಲ್ಲಿ ತಿಳಿಸಿದೆ ಈ ಆಯೋಗವು ಒಂದು ಮೈಲಿಗಲ್ಲಾಗಿದ್ದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ರಾಷ್ಟ್ರವ್ಯಾಪಿ ಚಳುವಳಿಯ ಮೂಲಕದ ಜನರಲ್ಲಿ ಮೀಸಲಾತಿಯ ಕುರಿತಂತೆ ಜಾಗೃತಿಯನ್ನು ಮೂಡಿಸುತ್ತಿದೆ ಎಂದರು.
ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಮೌಲಾನ ಮುಅಝ್ಝಮ್ ಪ್ರಸ್ತಾವಿಕವಾಗಿ ಮಾತನಾಡಿ ಭಾರತದ ಮುಸ್ಲಿಮರು ದೇಶದ ಸ್ವಾತಂತ್ಯ್ರಕ್ಕಾಗಿ ಬಹಳಷ್ಟು ತ್ಯಾಗಮಾಡಿದ್ದಾರೆ. ಈಗ ಅದು ಅಭಿವೃದ್ಧಿ ಪಥದಲ್ಲಿದೆ ಆದರೆ ದೇಶಕ್ಕಾಗಿ ತ್ಯಾಗಬಲಿದಾನಗಳನ್ನು ಮಾಡಿದ ಮುಸ್ಲಿಮ್ ಸಮುದಾಯವು ಇಂದು ಅತ್ಯಂತ ಶೋಚನೀಯ ಸ್ಥಿತಿಯಲ್ಲಿರುವುದನ್ನು ವಿವಿಧ ಅಯೋಗಗಳು ಬೆಟ್ಟು ಮಾಡಿ ತೋರಿಸಿವೆ ಆಯೋಗಗಳ ವರದಿಯು ಕಡತಗಳಲ್ಲಿ ಕೊಳೆಯದೆ ಜಾರಿಯಾಗಬೇಕು ಮುಸ್ಲಿಮರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿಯನ್ನು ನಿಡಬೇಕು ಎಂದು ಅವರು ಆಗ್ರಹಿಸಿದರು.
ವೇದಿಕೆಯಲ್ಲಿ ರಾಬಿತಾ ಸೂಸೈಟಿಯ ಮಾಜಿ ಕಾರ್ಯದರ್ಶಿ ಯಾಸಿನ್ ಅಸ್ಕರಿ, ದಕ್ಕನ್ ವೆಲ್ಫೆರ್ ಅಸೋಸಿಯೇಶನ್ ಫಾರೂಖ್ ಮಾಸ್ಟರ್,ಉಡುಪಿ ಜಿಲ್ಲಾ ರಾಜಕೀಯ ಫ್ರಂಟ್ ನ ಅಬ್ದುಲ್ ರಹ್ಮಾನ್,ಉಡುಪಿ ಜಾಮಿಯ ಮಸೀದಿಯ ಖತೀಬ್ ಅಬ್ದುಲ್ ರಹೀಮ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.
ಪಾಪ್ಯುಲರ್ ಫ್ರಂಟ್ ಭಟ್ಕಳ ಶಾಖೆಯ ಕಾರ್ಯದರ್ಶಿ ಡಾ. ಆಫಾಖ್ ಲಂಕಾ ಸ್ವಾಗತಿಸಿದರು. ಅಧ್ಯಕ್ಷ ಅಮ್ಜದ್ ಹುಸೇನ್ ಶಿರಾಲಿ ಧನ್ಯವಾದವಿತ್ತರು. ಸಿರಾಜುದ್ದೀನ್ ಕಾರ್ಯಕ್ರಮವನ್ನು ನಿರೂಪಿಸಿದರು.