ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಜಾಗತಿಕ ಸುದ್ದಿ / ಮೊರೊಕ್ಕೋದ ಮರ ಹತ್ತುವ ಕುರಿಗಳು

ಮೊರೊಕ್ಕೋದ ಮರ ಹತ್ತುವ ಕುರಿಗಳು

Thu, 21 Jan 2010 10:07:00  Office Staff   S.O. News Service

ಆಡು ಮುಟ್ಟದ ಸೊಪ್ಪಿಲ್ಲ ಎನ್ನುತ್ತಾರೆ. ಆದರೆ ಮೊರೊಕ್ಕೋ ದೇಶದ ಕುರಿಗಳನ್ನು ಪರಿಗಣಿಸಿ ಇದನ್ನು ಸ್ವಲ್ಪ ವ್ಯತ್ಯಾಸ ಮಾಡಿ ಆಡು ಏರದ ಮರವಿಲ್ಲ ಎಂದು ತಿದ್ದಿಕೊಳ್ಳಬಹುದು.

 

 

amazing-goats.jpg 

tree-goats.jpg 

 

ಹೇಳಿ ಕೇಳಿ ಮೊರೊಕ್ಕೋ ಒಂದು ಮರುಭೂಮಿ ದೇಶ. ಸುಡುವ ನೆಲದ ಮೇಲೆ ಹುಲ್ಲು ಬೆಳೆಯುವುದು ದುಸ್ತರ. ಅಂದ ಮೇಲೆ ಜೀವನಕ್ಕೆ ಅಗತ್ಯವಾಗಿರುವ ಕುರಿಗಳಿಗೆ ಮೇವು ಎಲ್ಲಿಂದ ಬರಬೇಕು?

 

ಮರುಭೂಮಿಯಲ್ಲಿ ವ್ಯಾಪಕವಾಗಿ ಬೆಳೆಯುವ ಸಸ್ಯಗಳ ಸಂಕುಲವೇ ಬೇರೆ ಇವೆ. ಹೆಚ್ಚಿನವು ಮುಳ್ಳುಗಳಿಂದ ಕೂಡಿರುವುವು ಅಥವಾ ವರ್ಷಕ್ಕೊಂದು ಬಾರಿ ಬೀಳುವ ಮಳೆನೀರನ್ನು ಹೀರಿ ಅಲ್ಪಕಾಲ ಜೀವಿಸಿ ಒಣಗುವಂಥವು. ಮರ ಎಂದು ಏನಾದರೂ ಇದ್ದರೆ ಅದು ಮುಳ್ಳುಗಳಿರುವ ಕುಬ್ಜ ಅರ್ಗಾನ್ ಮರ (ಆಲಿವ್ ಜಾತಿಯ ಒಂದು ಮರ) ಮಾತ್ರ. ಇಲ್ಲಿರುವ ಕುರಿಗಳಿಗೆ ಮರವೇರಿ ಸೊಪ್ಪು ತಿನ್ನದೇ ಅನ್ಯಮಾರ್ಗವಿಲ್ಲವಾದುದರಿಂದ ಕುರಿ ಮರಿಯಾಗಿದ್ದಾಗಿನಿಂದಲೇ ಕುರಿಗಾಹಿಗಳು ಮರಏರಿಸುವ ತರಬೇತಿ ನೀಡುತ್ತಾರೆ. ಚಿಕ್ಕಮರಿಯಾಗಿದ್ದಿಂದಿನಿಂದಲೇ ಮರಹತ್ತಿ ಅಭ್ಯಾಸವಾಗುವ ಕುರಿ ಪ್ರೌಢಾವಸ್ಥೆಯಲ್ಲಿ ಮರದ ಮೇಲೆ ಮಂಗ ಜಿಗಿದಷ್ಟೇ ಸಲೀಸಾಗಿ ಸುಮಾರು ಮೂವತ್ತು ಅಡಿ ಎತ್ತರವಿರುವ ಮರದ ಕೊಂಬೆಯಿಂದ ಕೊಂಬೆಗೆ ಜಿಗಿಯುವ ನಿಪುಣತೆ ಪಡಿದಿರುತ್ತದೆ.

 

ಈ ತರಬೇತಿಯಲ್ಲಿ ಕುರಿಗಾಹಿಗಳ ಸ್ವಾರ್ಥವೂ ಇದೆ. ಅರ್ಗಾನ್ ಮರದ ಹಣ್ಣುಗಳಲ್ಲಿ ಒಂದರಿಂದ ಮೂರು ಬೀಜಗಳಿರುತ್ತವೆ. ಈ ಬೀಜಗಳು ಧೃಢವಾಗಿರುವುದರಿಂದ ಕುರಿಗಳು ಅವನ್ನು ತಿನ್ನದೇ ಕೇವಲ ಹಣ್ಣಿನ ಮೃದುಭಾಗವನ್ನು ತಿಂದು ಬೀಜಗಳನ್ನು ಉಗುಳುತ್ತವೆ. ದಿನವಿಡೀ ಹೀಗೆ ಉಗುಳಿದ ಬೀಜಗಳನ್ನು ಕುರಿಗಾಹಿಗಳು ಸಂಜೆ ಸಂಗ್ರಹಿಸುತ್ತಾರೆ. ಈ ಬೀಜಗಳನ್ನು ತೊಳೆದು ಒಣಗಿಸಿ ಬಳಿಕ ಇದರಿಂದ ಎಣ್ಣೆ ತೆಗೆಯಲಾಗುತ್ತದೆ. ಈ ಎಣ್ಣೆಯನ್ನು ಅಡುಗೆಗೂ, ಮೈಕೈಗೆ ಮಾಲಿಷ್ ಮಾಡಲೂ ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತದೆ.

 

ಈ ಪ್ರಕ್ರಿಯೆ ನೂರಾರು ವರ್ಷಗಳಿಂದ ನೆಡೆದು ಬರುತ್ತಿದ್ದು ಇತ್ತೀಚೆಗೆ ಕುರಿಗಳ ಪ್ರಮಾಣ ತೀರಾ ಹೆಚ್ಚಾಗಿರುವುದರಿಂದ ಅರ್ಗಾನ್ ಮರಗಳು ಅಳಿವಿನಂಚಿನಲ್ಲಿವೆ.

 

 

 

 

 

ಮೇಲಿನ ಲಿಂಕ್ ಮೂಲಕ ಮರವೇರುವ ಕುರಿಗಳ ವೀಡಿಯೋದೃಶ್ಯವನ್ನು ವೀಕ್ಷಿಸಬಹುದು.

 

ಅರ್ಶದ್ ಹುಸೇನ್ ದುಬೈ.

 


Share: