ಭಟ್ಕಳ, ಜನವರಿ 19:ತಾಲೂಕಿನ ಕಿತ್ರೆಯಲ್ಲಿ ನೂತನವಾಗಿ ರಚಿಸಲಾದ ಸ್ಪಂದನಾ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ ಮತ್ತು ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಶಾಸಕ ಜೆ ಡಿ ನಾಯ್ಕ ನಿನ್ನೆ ಮಧ್ಯಾಹ್ನ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಯುವಕರು ಗ್ರಾಮದ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಯುವಕರು ಸಂಘಟಿತರಾದರೆ ಏನನ್ನೂ ಸಾಧಿಸಬಹುದು. ಯುವಕರು ಕ್ರೀಯಾಶೀಲತೆಯಿಂದ ಕಾರ್ಯನಿರ್ವಹಿಸಬೇಕು. ಇಂತಹ ಸಂಘಗಳಿಂದ ಸಂಘಟನೆಗೆ ಅನುಕೂಲವಾಗಿದೆ. ಸಂಘವನ್ನು ಸಮಾಜಮುಖಿಯಾಗಿ ಬೆಳೆಸುವ ಅಗತ್ಯವಿದೆ ಎಂದ ಅವರು ಯುವಕರು ಗ್ರಾಮದ ಸಮಸ್ಯೆಗಳ ಕಡೆಗೆ ಸ್ಪಂದಿಸಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆವಹಿಸಿದ್ದ ಜಯಲಕ್ಷ್ಮೀ ಗೊಂಡ,ಮುಖ್ಯ ಅತಿಥಿಯಾಗಿದ್ದ ಎಸ್ ವಿ ಹೆಬ್ಬಾರ ಮಾತನಾಡಿದರು. ವೇದಿಕೆಯಲ್ಲಿ ಊರಿನ ಮುಖಂಡ ಗಣಪಯ್ಯ ಗೊಂಡ, ಗ್ರಾಪಂ ಅಧ್ಯಕ್ಷೆ ನಿರ್ಮಲಾ ಮೊಗೇರ,ಉಪಾಧ್ಯಕ್ಷೆ ರೇವತಿ ನಾಯ್ಕ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಕೃಷ್ಣ ಗೊಂಡ ವಂದಿಸಿದರು. ಗಣಪತಿ ಗೊಂಡ ಸ್ವಾಗತಿಸಿ, ನಿರೂಪಿಸಿದರು.