ಭಟ್ಕಳ,ಡಿಸೆಂಬರ್ 14: ಓವರ್ ಟೇಕ್ ಮಾಡುವ ಭರದಲ್ಲಿ ಮೀನು ಲಾರಿಯೊಂದು ಟೆಂಪೋ ಟ್ರ್ಯಾಕ್ಸ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮವಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದು ಎಂಟು ಮಂದಿಗೆ ಗಂಭೀರ ಗಾಯಗೊಂಡ ಘಟನೆ ಇಂದು ಮದ್ಯಾಹ್ನ ಹೊನ್ನವರ ತಾಲೂಕಿನ ಮಂಕಿ ಅನಂತವಾಡಿ ರಾ.ಹೆ.17 ರಲ್ಲಿ ಜರುಗಿದೆ.
ಮೃತ ವ್ಯಕ್ತಿಯನ್ನು ಹಾವೇರಿಯ ಬಾಬುರಾವ್ ನೀಲಕಂಠಪ್ಪ ತಲಾಲ್(60) ಎಂದು ಗುರುತಿಸಲಾಗಿದೆ. ಇತರ ಗಾಯಗೊಂಡ ೮ ಜನರಲ್ಲಿ ಮೂವರ ಸ್ಥಿತಿಯು ಚಿಂತಾಜನಕವಾಗಿದೆ ಎನ್ನಲಾಗಿದ್ದು ಅವರನ್ನು ರುಕ್ಮಾಜಿ, ಲಕ್ಷ್ಮೀ, ಟ್ರ್ಯಾಕ್ಸ್ ಚಾಲಕ ರಘುವೇಂದ್ರನ್ ಎಂದು ಗುರುತಿಸಲಾಗಿದೆ. ಇವರನ್ನು ತಕ್ಷಣವೇ ಅರ್.ಎನ್.ಎಸ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಟ್ಕಳದಿಂದ ಸುಮಾರು 22ಕಿ.ಮಿ ದೂರವಿರುವ ಅನಂತವಾಡಿ ಎಂಬಲ್ಲಿ ಕಳೆದ ಹಲವಾರು ಬಾರಿ ಅಪಘಾತಗಳು ಜರುಗಿದ್ದು ಇಲ್ಲಿ ಹಲವಾರು ಜೀವಗಳು ಬಲಿಯಾಗಿವೆ. ಹಾವೇರಿಯ ಒಂದೇ ಕುಟುಂಬಕ್ಕೆ ಸೇರಿದ 11 ಜನರು ಟ್ರ್ಯಾಕ್ಸ್ವೊಂದರಲ್ಲಿ ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ಕುಂದಾಪುರಕ್ಕೆ ಹೋಗುತ್ತಿದ್ದರು ಎನ್ನಲಾಗಿದ್ದು ಹೊನ್ನಾವರದಿಂದ ಗಂಗಾವಳಿ ಕಡೆಗೆ ಮೀನು ಕೊಂಡೊಯ್ಯುತ್ತಿದ್ದ ಲಾರಿಯೊಂದು ವೇಗದ ಭರದಲ್ಲಿ ಓವರ್ ಟೇಕ್ ಮಾಡುತ್ತಿದ್ದಾಗ ಮುಂದಿನಿಂದ ಬಂದ ಲಾರಿಯನ್ನು ತಪ್ಪಿಸಲು ಹೋಗಿ ಈ ಅಪಘಾತ ಜರುಗಿದೆ ಎನ್ನಲಾಗಿದೆ.
ಚಿತ್ರ, ವರದಿ: ಎಮ್ಮಾರ್ ಮಾನ್ವಿ, ಭಟ್ಕಳ