ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಚಿಕ್ಕಬಳ್ಳಾಪುರ:ಅಧಿಕಾರಿಗಳು ಜನರ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಪರಿಹರಿಸಬೇಕು-ಸಚಿವ ಮುಮ್ತಾಜ್ ಅಲಿ ಖಾನ್

ಚಿಕ್ಕಬಳ್ಳಾಪುರ:ಅಧಿಕಾರಿಗಳು ಜನರ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಪರಿಹರಿಸಬೇಕು-ಸಚಿವ ಮುಮ್ತಾಜ್ ಅಲಿ ಖಾನ್

Sun, 20 Dec 2009 03:05:00  Office Staff   S.O. News Service
ಚಿಕ್ಕಬಳ್ಳಾಪುರ, ಡಿಸೆಂಬರ್ 19:  ಅಧಿಕಾರಿಗಳು ಜನ ಸಾಮಾನ್ಯರ ಸಮಸ್ಯೆಗಳನ್ನು ಅರಿತು ಸರಿಯಾದ ರೀತಿಯಲ್ಲಿ ಸ್ಪಂದಿಸಿ ಅವರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಕ್ಫ್ ಮತ್ತು ಅಲ್ಪಸಂಖ್ಯಾತರ ಖಾತೆ ಸಚಿವ ಡಾ. ಮುಮ್ತಾಜ್ ಅಲಿ ಖಾನ್ ರವರು ತಿಳಿಸಿದರು.
  
ಅವರು ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ಏರ್ಪಡಿಸಿದ್ದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
  
ಕೈವಾರದ ಶ್ರೀ ಅಮರನಾರಾಯಣ ದೇವಸ್ಥಾನದಲ್ಲಿ ಏನಾದರು ಕುಂದುಕೊರತೆಗಳು ಇದ್ದಲ್ಲಿ ಅದನ್ನು ಪರಿಹರಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರಲ್ಲದೆ. ಪುಣ್ಯಕ್ಷೇತ್ರವಾದ ಕೈವಾರದಲ್ಲಿ ಸುಸಜ್ಜಿತವಾದ ಪ್ರವಾಸಿ ಮಂದಿರದ ಅಗತ್ಯ ಇದೆ ಎಂದು ಹೇಳಿದರು.
  
ಕೈವಾರದಲ್ಲಿ ಐದು ಕೋಟಿ ರೂಗಳ ವೆಚ್ಚದಲ್ಲಿ ಮೂರಾರ್ಜಿ ದೇಸಾಯಿ ವಸತಿ ನಿಲಯ ನಿರ್ಮಾಣವಾಗಲಿದೆ ಎಂದರು.ಶಾಸಕ ಡಾ|| ಎಂ.ಸಿ.ಸುಧಾಕರ್ ಮಾತನಾಡಿ ತಾಲ್ಲೂಕಿನಲ್ಲಿ ಜನಸ್ಪಂದನ ಕಾರ್ಯಕ್ರಮಗಳು ಅರ್ಥ ಪೂರ್ಣವಾಗಿ ನಡೆಯುತ್ತಿದ್ದು  ಸಾಕಷ್ಟು ಜನರಿಗೆ ಇದರಿಂದ ಪ್ರಯೋಜನವಾಗಿದೆ ಎಂದು ತಿಳಿಸಿದರು.
  
ಜನರು ತಮ್ಮ ಕುಂದುಕೊರತೆಗಳೇನೆ ಇದ್ದರೂ ಅದನ್ನು ಈ ವೇದಿಕೆಯಲ್ಲಿ ನೇರವಾಗಿ ಬಗೆಹರಿಸಿಕೊಳ್ಳಬಹುದು. ಅಧಿಕಾರಿಗಳು ಕೆಲಸವನ್ನು ಚುರುಕಾಗಿ ಮಾಡಬೇಕು. ಯಾವುದೇ ಅರ್ಜಿ ಬಂದರೆ ಅದನ್ನು ನಿರ್ಲಕ್ಷ್ಯ ತೋರದೆ ಅವರಿಗೆ ಸೂಕ್ತ ಪರಿಹಾರವನ್ನು ಕಲ್ಪಿಸಿಕೊಡಬೇಕೆಂದರು.
  
ಜಿಲ್ಲಾಧಿಕಾರಿ ಅನ್ವರ್‌ಪಾಷ ಮಾತನಾಡಿ ನ್ಯಾಯ ಬೆಲೆ ಅಂಗಡಿಗಳು ಹಾಗೂ ಚಿಲರೆ ಸೀಮೆ ಎಣ್ಣೆ ಮಾರಾಟಗಾರರು ಸರ್ಕಾರ ನಿಗದಿ ಪಡಿಸಿರುವ ವೇಳೆಯಲ್ಲಿ ನಿಗದಿತ ದರ ಮತ್ತು ಪ್ರಮಾಣದಲ್ಲಿ ಪಡಿತರರಿಗೆ ಅಹಾರ ವಿತರಿಸಬೇಕು ಹಾಗೂ ಗ್ರಾಹಕರಿಗೆ ತೊಂದರೆಯಾಗದಂತೆ ಸೌಜನ್ಯದಿಂದ ವರ್ತಿಸಬೇಕು ಇದನ್ನು ಉಲ್ಲಂಘಿಸಿದರೆ ಅಂತಹವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
  
ತಹಸೀಲ್ದಾರ್ ಹೆಚ್.ಎನ್.ನಾಗರಾಜ್ ಮಾತನಾಡಿ ಸಾರ್ವಜನಿಕರಿಂದ ೭೪ ಕುಂದುಕೊರತೆಗಳ ಅರ್ಜಿಗಳು ಬಂದಿದ್ದು ಆದಷ್ಟು ಬೇಗ ಅದನ್ನು ಇತ್ಯರ್ಥಪಡಿಸಿ ಅರ್ಹರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದರು.  
  
ಸಭೆಯಲ್ಲಿ ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ, ಉಪವಿಭಾಗಾಧಿಕಾರಿ ಜಿ.ವಿ.ಶೀನಪ್ಪ ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


Share: