ಬೆಂಗಳೂರು,ಜನವರಿ 15:ಅಕ್ರಮ ಸಕ್ರಮ ಯೋಜನೆಯ ಸುಗ್ರಿವಾಜ್ಞೆಗೆ ಅಂಕಿತ ಹಾಕದೆ ಸರ್ಕಾರಕ್ಕೆ ವಾಪಸ್ಸ್ ಕಳಿಸಿರುವ ತಮ್ಮ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ರಾಜ್ಯಪಾಲ ಹೆಚ್.ಆರ್. ಭಾರಧ್ವಾಜ್ ಬಹುಜನರಿಗೆ ಸಂಬಂಧಪಟ್ಟ ಯೋಜನೆಯಾದ ಕಾರಣ ವಿಧಾನ ಸಭೆಯಲ್ಲಿ ಚರ್ಚೆನಡೆದ ನಂತರವೇ ಅನುಷ್ಠಾನಗೊಳ್ಳಲಿ ಎಂದಿದ್ದಾರೆ.
ನಗರದಲ್ಲಿ ಇಂದು ನಡೆದ ಗುಣ ಮಟ್ಟ ಕುರಿತ ಸಮಾವೇಶದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ಆಗಿನ ರಾಜ್ಯಪಾಲರಾಗಿದ್ದ ಟಿ.ಎನ್. ಚತುರ್ವೇದಿ ಅಕ್ರಮ ಸಕ್ರಮ ಯೋಜನೆಯ ಸುಗ್ರಿವಾಜ್ಞೆಯನ್ನ ವಾಪಸ್ಸು ಕಳುಹಿಸಿದ್ದರು ಎಂದರು.
ಈ ಹಿಂದಿನ ಸರ್ಕಾರ ಅಕ್ರಮ ಸಕ್ರಮ ಯೋಜನೆಯ ಕಾನೂನನ್ನು ರೂಪಿಸಿತ್ತು. ಆದರೆ, ನ್ಯಾಯಾಲಯ ಈ ಕಾನೂನು ಜಾರಿಗೆ ತಡೆನೀಡಿತ್ತು ಎಂದು ಅವರು ಹೇಳಿದರು.
ಈಗ ಅಕ್ರಮ ಸಕ್ರಮ ಸುಗ್ರಿವಾಜ್ಞೆಯನ್ನ ವಾಪಸ್ಸ್ ಮಾಡಿರುವ ತಮ್ಮ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡ ಅವರು ಸರ್ಕಾರ ಒಂದು ತಿಂಗಳು ಕಾಯ್ದ ಮುಂದಿನ ವಿಧಾನ ಸಭಾ ಅಧಿವೇಶನದಲ್ಲಿ ಈ ಯೋಜನೆಯ ಮಸೂದೆಯನ್ನು ಮಂಡಿಸಿ ಈ ಯೋಜನೆಯನ್ನು ಜಾರಿಮಾಡಲು ತಮ್ಮ ಬಳಿ ಬರುವುದು ಸರಿಯಾದ ಕ್ರಮ ಎಂದರು.
ವಿಧಾನ ಸಭಾ ಅಧಿವೇಶನದಲ್ಲಿ ಚರ್ಚಿಸಿದೆ, ಶಾಸಕಾಂಗವನ್ನ ಮೀರಿ ಸುಗ್ರಿವಾಜ್ಞೆಯ ಮೂಲಕ ಅಕ್ರಮ ಸಕ್ರಮ ಯೋಜನೆಯನ್ನು ಜಾರಿ ತರಲು ಮುಂದಾದುದರಿಂದ ಸುಗ್ರಿವಾಜ್ಞೆಯನ್ನು ವಾಪಸ್ಸ್ ಕಳುಹಿಸಿದ್ದಾಗಿ ಹೇಳಿದರು.