ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮೈಸೂರು: ಹಣಬಲವಾಗಲೀ ತೋಳ್ಬಲವಾಗಲಿ ನನ್ನನ್ನು ಜಗ್ಗಲು ಸಾಧ್ಯವಿಲ್ಲ - ಯಡಿಯೂರಪ್ಪ ಗುಡುಗು

ಮೈಸೂರು: ಹಣಬಲವಾಗಲೀ ತೋಳ್ಬಲವಾಗಲಿ ನನ್ನನ್ನು ಜಗ್ಗಲು ಸಾಧ್ಯವಿಲ್ಲ - ಯಡಿಯೂರಪ್ಪ ಗುಡುಗು

Wed, 11 Nov 2009 02:31:00  Office Staff   S.O. News Service
ಮೈಸೂರು, ನ.೧೦ ಯಾವುದೇ ಶಕ್ತಿ, ಹಣಬಲ, ತೋಳ್ಬಲಕ್ಕೆ ಈ ಯಡಿಯೂರಪ್ಪ ಬಗ್ಗುವುದಿಲ್ಲ...  - ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಡಿದ ಘೋಷಣೆ ಇದು.

ರೆಡ್ಡಿ ಬ್ರದರ್ಸ್ ನೇತೃತ್ವದ ಬಂಡಾಯ ಸುಖಾಂತ್ಯ ಕಂಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀ ಚಾಮುಂಡೇಶ್ವರಿ ದೇವಿಗೆ ಚಂಡಿಕಾ ಹೋಮ ನಡೆಸಿ, ಪೂರ್ಣಾಹುತಿಯಲ್ಲಿ ಭಾಗವಹಿಸಿದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. 

ಬಿಜೆಪಿ ಹೈಕಮಾಂಡ್ ಹಣಬಲ, ತೋಳ್ಬಲಕ್ಕೆ ಮಣಿದಿದೆಯೇ ಎಂಬ ಪ್ರಶ್ನೆಗೆ, ನಮ್ಮದು ತತ್ವ- ಸಿದ್ಧಾಂತವಿರುವ ಪಕ್ಷ. ವರಿಷ್ಠರು ಯಾವುದೇ ಶಕ್ತಿಗಳಿಗೆ ಮಣಿದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಹಿತದೃಷ್ಟಿಯಿಂದ ಕೆಲವೊಮ್ಮೆ ಹೊಂದಾಣಿಕೆಯಿಂದ ಹೋಗಬೇಕಾಗುತ್ತದೆ. ಈಗ ನಾನು ಅದೇ ಮಾಡುತ್ತಿದ್ದೇನೆ. ವರಿಷ್ಠರು ಪೂರ್ಣ ಅವಧಿಗೆ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಹೇಳಿರುವ ಕಾರಣ ನನಗೆ ಭೀಮಬಲ ಬಂದಂತಾಗಿದೆ. ಎಲ್ಲರ ಸಹಕಾರ ಪಡೆದು ಕೆಲಸ ಮಾಡುತ್ತೇನೆ ಎಂದರು. 

ವರಿಷ್ಠರಿಗೆ ತಲೆ ಬಾಗಿದ್ದೇನೆ: ನಾನು ವರಿಷ್ಠರ ತೀರ್ಮಾನಗಳಿಗೆ ತಲೆ ಬಾಗಿದ್ದೇನೆ. ವರಿಷ್ಠರ ನಿರ್ದೇಶನದಂತೆ ನಡೆದುಕೊಳ್ಳುತ್ತೇನೆ. ಸಂಪುಟದಲ್ಲಿರುವ ಇನ್ನೂ ಕೆಲವರಿಂದ ರಾಜೀನಾಮೆ ಪಡೆಯುವ, ಮತ್ತೆ ಕೆಲವರನ್ನು ಸೇರ್ಪಡೆ ಮಾಡಿಕೊಳ್ಳುವ ವಿಷಯ ವರಿಷ್ಠರಿಗೆ ಬಿಟ್ಟಿದ್ದು. ಇದಕ್ಕೂ ಮೊದಲೇ ಸಮನ್ವಯ ಸಮಿತಿ ರಚನೆಯಾಗುತ್ತದೆ. ಈ ಸಮಿತಿಯಲ್ಲಿ ಈ ಎಲ್ಲ ವಿಷಯಗಳು ತೀರ್ಮಾನವಾಗುತ್ತವೆ ಎಂದು ವಿವರಿಸಿದರು. 

ಸಮನ್ವಯ ಸಮಿತಿ ರಚನೆಯಿಂದ ತಮ್ಮ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡಿದಂತೆ ಆಗುತ್ತದೆ ಎಂಬುದನ್ನು ಯಡಿಯೂರಪ್ಪ ಒಪ್ಪಿಕೊಳ್ಳಲಿಲ್ಲ. 

ತಪ್ಪು ಮಾಡದಂತೆ ಶಕ್ತಿ ಕೊಡು: ಮತ್ತೆ ಇಂಥ ತಪ್ಪು ಮಾಡದಂತೆ ಶಕ್ತಿ ಕೊಡು ತಾಯೇ ಎಂದು ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯಲ್ಲಿ ತಾವು ಪ್ರಾರ್ಥನೆ ಸಲ್ಲಿಸಿದ್ದಾಗಿ ಯಡಿಯೂರಪ್ಪ ಹೇಳಿದರು. 

ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ ಕೆಲಸ ಮಾಡುತ್ತಿದ್ದರು. ಅವರ ಕೆಲಸದಲ್ಲಿ ನನಗೆ ದೋಷ ಕಂಡಿಲ್ಲ. ಆದರೂ ರಾಜೀನಾಮೆ ಪಡೆಯುವಂತಹ ಪರಿಸ್ಥಿತಿ ಉಂಟಾಯಿತು ಎಂದು ವಿಷಾದಿಸಿದರು. ಇದರಿಂದ ಧೃತಿಗೆಡದೆ ಸಮಾಜಸೇವೆ ಮತ್ತು ಪಕ್ಷದ ಸೇವೆ ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದರು. 

ಅಗ್ನಿಪರೀಕ್ಷೆಗೆ ತುತ್ತಾಗಿದ್ದೇನೆ: ಈಗ ಅಗ್ನಿಪರೀಕ್ಷೆಗೆ ತುತ್ತಾಗಿದ್ದೇನೆ. ಸಾರ್ವಜನಿಕ ಜೀವನದಲ್ಲಿ ಇವೆಲ್ಲಾ ಸರ್ವೇಸಾಮಾನ್ಯ. ಕಳೆದ ೧೮ ತಿಂಗಳಲ್ಲಿ ನಾಡಿನ ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ. ಈಗಿನ ಅಗ್ನಿಪರೀಕ್ಷೆಯಿಂದ ಪಾರಾಗುವಲ್ಲಿ ಪರಿಹಾರವನ್ನು ರಾಷ್ಟ್ರೀಯ ನಾಯಕರು ಹೇಳಿದ್ದಾರೆ. ಅವರ ಆದೇಶದಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಪ್ರಯತ್ನ ಮಾಡುತ್ತಿದ್ದೇನೆ. ನನ್ನಲ್ಲಿರುವ ಕೊರತೆಗಳನ್ನು ನೀಗಿಸಿಕೊಂಡು, ದೃಢ ಹೆಜ್ಜೆ ಇಡಬೇಕಾಗಿದೆ. ಇದಕ್ಕೆ ಹಾಗೂ ರಾಜ್ಯದ ಜನತೆಯ ಸೇವೆ ಮಾಡಲು ಚಾಮುಂಡೇಶ್ವರಿಯ ಆಶೀರ್ವಾದ ಬೇಡಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ದೊಡ್ಡ ಪ್ರಮಾಣದಲ್ಲಿ ಪರಿಹಾರ ಕಾರ್ಯ ಮಾಡಬೇಕಾಗಿದೆ. ಇದಕ್ಕೂ ಚಾಮುಂಡೇಶ್ವರಿ ತಾಯಿ ಕರುಣಿಸಲಿ ಎಂದು ಪ್ರಾರ್ಥಿಸಿದರು. ದುಷ್ಟ ಶಕ್ತಿಗಳನ್ನು ನಿಗ್ರಹಿಸು ಎಂದು ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದಿರಾ ಎಂಬ ಪ್ರಶ್ನೆಗೆ, ಈ ರೀತಿಯಲ್ಲದೇ ಇನ್ನೇನು ಕೇಳಲು ಸಾಧ್ಯ ಎಂದರು.

ಸೌಜನ್ಯ: ಕನ್ನಡಪ್ರಭ

Share: