ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಆಂಧ್ರಪ್ರದೇಶದ ಸಿಎಂ ಆಗಿ ನಾಯ್ಡು ಪ್ರಮಾಣ ಸಂಪುಟ ಸಚಿವರಾಗಿ 24 ಮಂದಿ ಪ್ರಮಾಣ ವಚನ

ಆಂಧ್ರಪ್ರದೇಶದ ಸಿಎಂ ಆಗಿ ನಾಯ್ಡು ಪ್ರಮಾಣ ಸಂಪುಟ ಸಚಿವರಾಗಿ 24 ಮಂದಿ ಪ್ರಮಾಣ ವಚನ

Thu, 13 Jun 2024 20:37:47  Office Staff   Vb

ವಿಜಯವಾಡ: ವಿಜಯವಾಡದ ಹೊರ ವಲಯದ ಗನ್ನಾವರಂ ಮಂಡಲದಲ್ಲಿರುವ ಕೇಸರಪಲ್ಲಿ ಐಟಿ ಪಾರ್ಕ್‌ನಲ್ಲಿ ಬುಧವಾರ ಬೆಳಗ್ಗೆ ನಡೆದ ಅದ್ದೂರಿ ಸಮಾರಂಭದಲ್ಲಿ ಟಿಡಿಪಿ ರಾಷ್ಟ್ರಾಧ್ಯಕ್ಷ ನಾರಾ ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿಯ ರಾಷ್ಟ್ರಾಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ, ಇತರ ರಾಷ್ಟ್ರ ಮಟ್ಟದ ನಾಯಕರು ಹಾಗೂ ಕೊನಿಡೇಲ ಚಿರಂಜೀವಿ, ರಜನಿಕಾಂತ್ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

ನಾಯ್ಡು ಅವರೊಂದಿಗೆ ಜನ ಸೇನಾ ಪಕ್ಷದ ಮೂವರು ಹಾಗೂ ಬಿಜೆಪಿಯ ಒಬ್ಬರು ಸೇರಿದಂತೆ ಇತರ 24 ಮಂದಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ನಾಯ್ಡು ಹಾಗೂ ಅವರ ಸಂಪುಟ ಸಹೋದ್ಯೋಗಿಗಳಿಗೆ ರಾಜ್ಯಪಾಲ ಎಸ್. ಅಬ್ದುಲ್ ನಸೀರ್ ಅವರು ಪ್ರಮಾಣ ವಚನ ಬೋಧಿಸಿದರು. ನಾಯ್ಡು ಸಂಪುಟಕ್ಕೆ ಸೇರ್ಪಡೆಗೊಂಡ ಪ್ರಮಖರಲ್ಲಿ ಜನಸೇನಾ ಪಕ್ಷದ ವರಿಷ್ಠ ಪವನ್ ಕಲ್ಯಾಣ್, ಟಿಡಿಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್, ಟಿಡಿಪಿ ಆಂಧ್ರಪ್ರದೇಶ ಘಟಕದ ಮುಖ್ಯಸ್ಥ ಕೆ. ಅಟ್ಟನ್ನಾಯ್ಡು ಹಾಗೂ ಅನಾಮ್ ರಾಮನಾರಾಯಣ ರೆಡ್ಡಿ, ನಿಮ್ಮಲಾ ರಾಮನಾಯ್ಡು, ಪಿ. ನಾರಾಯಣ ಅವರಂತಹ ಹಿರಿಯ ನಾಯಕರು ಇದ್ದಾರೆ. ನಾಯ್ಡು ಅವರ ಸಂಪುಟದಲ್ಲಿ ಅಲ್ಪಸಂಖ್ಯಾತ ಸಮುದಾಯ ಹಾಗೂ ಪರಿಶಿಷ್ಟ ಪಂಗಡದ ತಲಾ ಓರ್ವ ಮಹಿಳೆ ಸೇರಿದಂತೆ ಮೂವರು ಮಹಿಳೆಯರು ಕೂಡ ಇದ್ದಾರೆ.

ಸಮಾರಂಭಕ್ಕಿಂತ ಮುನ್ನ ನಾಯ್ಡು ಅವರು ಗನ್ನಾವರಂ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರ ಮಾಡಿಕೊಂಡರು. ನಾಯ್ಡು ಅವರ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಈ ಬಾರಿ ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾಗುತ್ತಿದ್ದಾರೆ. ಅವರ ಎರಡನೇ ಅವಧಿಯಲ್ಲಿ ಆಂಧ್ರಪ್ರದೇಶವನ್ನು ವಿಭಜಿಸಲಾಗಿತ್ತು.


Share: