ಭಟ್ಕಳ, ಜನವರಿ ೩೦: ಭಟ್ಕಳದ ಮುಂಡಳ್ಳಿ ಗುಡ್ಡದ ಶಿಲುಬೆ ಭಗ್ನ ಹಾಗೂ ತೆರ್ನಮಕ್ಕಿ ಚರ್ಚನ ಮುಂದುಗಡೆ ಇರುವ ಮೇರಿಮಾತೆ ಇಗರ್ಜಿ ಮೇಲೆ ನಡೆದ ಕಲ್ಲು ತುರಾಟ ಘಟನೆಯನ್ನು ಮಾಜಿ ಸಚಿವ ಆರ್ ಎನ್ ನಾಯ್ಕ ತೀವ್ರವಾಗಿ ಖಂಡಿಸಿದ್ದಾರೆ.
ಅವರು ನಿನ್ನೆ ಬೆಳಿಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಚರ್ಚ ಮೇಲಿನ ದಾಳಿಯಿಂದ ಕ್ರೈಸ್ತ ಸಮುದಾಯದವರಲ್ಲಿ ನೋವು ತಂದಿದೆ. ಅವರಿಗೆ ಧೈರ್ಯ ತುಂಬಲು ನಾವೆಲ್ಲರೂ ಮುಂದಾಗಬೇಕು. ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಯಾವುದೇ ಕಾರಣಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲ ಎಂದ ಅವರು ಇಂತಹ ಕೃತ್ಯದಿಂದ ಸಮಾಜದ ಸಾಮರಸ್ಯ ಕೆಡಲು ಕಾರಣವಾಗುತ್ತದೆ. ಯುವಕರು ಎಸಿಯವರಿಗೆ ಅರ್ಜಿ ಕೊಟ್ಟ ದಿನವೇ ಪೊಲೀಸರು ಜಾಗ್ರತರಾಗಿದ್ದರೆ ಘಟನೆ ಜರುಗುತ್ತಿರಲಿಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಚರ್ಚ ಮೇಲಿನ ದಾಳಿಗೆ ಆರ್ ಎಸ್ ಎಸ್ ಕಾರಣ ಎಂದು ಹೇಳಿದ್ದಾರೆ. ಆರ್ ಎಸ್ ಎಸ್ಸೇ ಇಂತಹ ಕೃತ್ಯ ನಡೆಸಿದೆ ಎಂಬುದಕ್ಕೆ ಅವರಲ್ಲಿ ಸಾಕ್ಷಿ ಏನದರೂ ಇದೆಯೇ ಎಂದು ಪ್ರಶ್ನಿಸಿದ ಅವರು ಸುಖಾಸುಮ್ಮನೇ ಒಂದು ಸಂಘಟನೆಯ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ಇಷ್ಟಕ್ಕೂ ಕೃತ್ಯ ನಡೆಸಿದ ಶಂಕರ ನಾಯ್ಕ ಎಂಬಾತ ಒಪ್ಪಿಕೊಂಡಿದ್ದಾನೆ. ಇಂತಹ ಕೃತ್ಯಕ್ಕೆ ಯಾವ ಸಂಘಟನೆಯ ಬೆಂಬಲವೂ ಇಲ್ಲ. ಮುಖ್ಯಮಂತ್ರಿಯವರು ಸಹ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ನಡೆಸಲು ಮುಂದಾದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ ಎಂದರು. ವಿರೋಧ ಪಕ್ಷದ ನಾಯಕರು ತಮ್ಮದೇ ಆದ ಜವಾಬ್ದಾರಿಯನ್ನು ಹೊಂದಿದ್ದಾರೆ. ಅವರು ಏನೆಲ್ಲಾ ಮಾತನಾಡಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಕಷ್ಟ ಸಾಧ್ಯ. ರಾಜ್ಯದಲ್ಲಿ ಯಡ್ಯೂರಪ್ಪನವರ ಸರಕಾರವಿದ್ದರೂ ಸಹ ಅವರು ಉತ್ತಮ ರೀತಿಯಲ್ಲಿ ಅಭಿವೃದ್ದಿ ಮಾಡಿದರೆ ಮಾತ್ರ ಮುಂದಿನ ಬಾರಿ ಮತ್ತೆ ಆಡಳಿತ ಚುಕ್ಕಾಣಿ ಹಿಡಿಯಲು ಸಾಧ್ಯ. ಪ್ರತಿಯೊಬ್ಬರೂ ಅಭಿವೃದ್ದಿಗೆ, ಜನರ ಸಮಸ್ಯೆಗೆ ಹೆಚ್ಚಿನ ಆದ್ಯತೆ ನೀಡಬೇಕೇ ಹೊರತು ಪರಸ್ಪರ ಕೆಸರೆರೆಚಾಟ ಮಾಡಿಕೊಳ್ಳುವುದು ಸರಿಯಲ್ಲ.
ಭಟ್ಕಳದಲ್ಲಿ ಶಾಂತಿ ಕದಡುವ ವ್ಯಕ್ತಿಗಳಿಗೆ ಸಮಾಜದ ಹಿರಿಯ ಮುಖಂಡರು ಬುದ್ದಿ ಹೇಳುವ ಕೆಲಸ ಮಾಡಬೇಕಿದೆ. ಇನ್ನು ಮುಂದೆ ಇಂತಹ ಘಟನೆ ನಡೆಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು. ಭಟ್ಕಳದಲ್ಲಿ ೧೯೯೩ರಲ್ಲಿ ನಡೆದಿದ್ದು ಕೋಮು ಗಲಭೆಯಲ್ಲ. ಇದು ತನ್ನನ್ನು ರಾಜಕೀಯದಿಂದ ಹಿಮ್ಮೆಟ್ಟಿಸಲು ಮುಸ್ಲೀಂ ಹಾಗೂ ಹಿಂದೂ ಮುಖಂಡರು ಹೆಣೆದ ತಂತ್ರವಾಗಿದೆ. ಅಂದು ಹೇಗಾದರೂ ಮಾಡಿ ನನ್ನನ್ನು ಇಳಿಸಿ ಅಧಿಕಾರಕ್ಕೇರುವುದೇ ಈ ಎರಡೂ ಮುಖಂಡರ ಆಕಾಂಕ್ಷೆಯಾಗಿತ್ತು. ಆ ಕಾರಣಕ್ಕಾಗಿಯೇ ಅಂದು ನಡೆದ ಗಲಭೆಗೆ ಕೋಮು ಗಲಭೆ ಎಂದು ವ್ಯಾಪಕ ಪ್ರಚಾರ ನೀಡಲಾಯಿತು. ಈ ಬಗ್ಗೆ ತಾನು ಜಗನ್ನಾಥ ಶೆಟ್ಟಿ ಆಯೋಗದ ಮುಂದೆಯೇ ಸ್ಪಷ್ಟ ಪಡಿಸಿದ್ದೇನೆ ಎಂದ ಅವರು ಭಟ್ಕಳದಲ್ಲಿನ ಕೋಮು ಗಲಭೆಯನ್ನೇ ಮುಂದಿಟ್ಟುಕೊಂಡು ಪಕ್ಷದ ವರಿಷ್ಟರಲ್ಲಿ ತಪ್ಪು ಮಾಹಿತಿ ನೀಡಿ ತನಗೆ ಟಿಕೇಟ್ ತಪ್ಪಿಸಲಾಯಿತು ಎಂದು ಆರೋಪಿಸಿದ ನಾಯ್ಕ ಯಾರು ಗಲಭೆ ಸೃಷ್ಟಿ ಮಾಡಿದ್ದಾರೆಯೋ ಅವರೆಲ್ಲರಿಗೂ ದೇವರು ಶಿಕ್ಷೆ ನೀಡಿದ್ದಾನೆ. ಅವರಲ್ಲಿ ಹೆಚ್ಚಿನವರು ಇಂದು ಬದುಕಿಲ್ಲ ಎಂದು ಹೇಳಿದರು. ಭಟ್ಕಳದಲ್ಲಿ ಬಡ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು ಇಂತಹ ಕ್ರಮಕ್ಕೆ ನಮ್ಮ ಸ್ಪಷ್ಟ ವಿರೋಧವಿದೆ. ಅರಣ್ಯ ಅಧಿಕಾರಿಗಳು ಬಡ ಅತಿಕ್ರಮಣದಾರರ ಬಗ್ಗೆ ಯಾವುದೇ ಕಾರಣಕ್ಕೂ ಕ್ರಮ ಜರುಗಿಸಬಾರದು. ಎಕರೆ ಗಟ್ಟಲೆ ಅತಿಕ್ರಮಣ ನಡೆಸಿ ಭೂಮಾಫಿಯಾ ಮಾಡುತ್ತಿರುವ ವ್ಯಕ್ತಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ ಎಂದೂ ಅವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಜಿಪಂ ಸದಸ್ಯ ಎಂ ಎಂ ನಾಯ್ಕ, ಗಣೇಶ ನಾಯ್ಕ ಉಪಸ್ಥಿತರಿದ್ದರು.