ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅಮಿತ್ ಶಾ ವಿರುದ್ಧ ಹಕ್ಕುಚ್ಯುತಿ ನೋಟಿಸ್‌

ಅಮಿತ್ ಶಾ ವಿರುದ್ಧ ಹಕ್ಕುಚ್ಯುತಿ ನೋಟಿಸ್‌

Mon, 05 Aug 2024 13:39:37  Office Staff   Vb

ಹೊಸದಿಲ್ಲಿ: ವಯನಾಡಿನಲ್ಲಿ ಭೀಕರ ಭೂಕುಸಿತ ಸಂಭವಿಸುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿ ತ್ತಾದರೂ ಕೇರಳ ಸರಕಾರವು ಕಾರ್ಯಪ್ರವೃತ್ತವಾಗಲಿಲ್ಲವೆಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸದನವನನ್ನು ತಪ್ಪುದಾರಿಗೆಳೆಯುತ್ತಿದ್ದಾರೆಂದು ಆಪಾದಿಸಿ ಅವರ ವಿರುದ್ಧ ಸಿಪಿಐ ಹಾಗೂ ಸಿಪಿಎಂ ಪಕ್ಷಗಳು ಹಕ್ಕುಚ್ಯುತಿ ನೋಟಿಸ್ ಮಂಡಿಸಿವೆ.

ವಯನಾಡ್ ಭೂಕುಸಿತ ದುರಂತಕ್ಕೆ ಸಂಬಂಧಿಸಿ ಬುಧವಾರ ರಾಜ್ಯಸಭೆಯಲ್ಲಿ ಗಮನಸೆಳೆವ ಗೊತ್ತುವಳಿ ಕುರಿತ ಚರ್ಚೆಯ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ್ದ ಅಮಿತ್ ಶಾ ಅವರು, ರಾಜ್ಯದಲ್ಲಿ ಭಾರೀ ಮಳೆ, ಭೂಕುಸಿತದ ಸಾಧ್ಯತೆಯ ಕುರಿತು ಜುಲೈ 23, 24, 25 ಹಾಗೂ 26ರಂದು ಕಳುಹಿಸಲಾಗಿದ್ದ ಮುನ್ನೆಚ್ಚರಿಕೆಗಳನ್ನು ಕೇರಳ

ಸರಕಾರ ನಿರ್ಲಕ್ಷಿಸಿತ್ತೆಂದು ಆಪಾದಿಸಿದ್ದರು. ಆದರೆ ಈ ಆರೋಪವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಳ್ಳಿಹಾಕಿದ್ದರು. ಕೇಂದ್ರ ಗೃಹ ಸಚಿವರ ವಿರುದ್ಧ ಹಕ್ಕುಚ್ಯುತಿಯ ನಿಬಂಧನೆಗಳನ್ನು ಉಪಕ್ರಮಿಸುವಂತೆ ಕೋರಿ ಸಿಪಿಎಂ ಪರವಾಗಿ ರಾಜ್ಯಸಭಾ ಸಂಸದ ವಿ. ಶಿವದಾಸನ್ ಬುಧವಾರ ನೋಟಿಸ್ ಸಲ್ಲಿಸಿದರೆ, ಸಿಪಿಐನ ಸದನ ನಾಯಕ ಪಿ.ಸಂತೋಷ್‌ ಕುಮಾರ್ ಅವರು ಶನಿವಾರ ಪ್ರತ್ಯೇಕ ನೋಟಿಸ್ ಸಲ್ಲಿಸಿದ್ದಾರೆ.

ಇದೇ ಆರೋಪಕ್ಕೆ ಸಂಬಂಧಿಸಿ ಕಾಂಗ್ರೆಸ್ ಪಕ್ಷ ಕೂಡಾ ಅಮಿತ್ ಶಾ ವಿರುದ್ಧ ಹಕ್ಕುಚ್ಯುತಿ ಉಲ್ಲಂಘನೆ ನೋಟಿಸ್ ಸಲ್ಲಿಸಿದೆ. ಶಾ ಅವರ ಹೇಳಿಕೆಗಳ ಬಗ್ಗೆ ಮಾಧ್ಯಮಗಳಲ್ಲಿ ಸವಿಸ್ತಾರವಾಗಿ ಸತ್ಯಶೋಧನೆ ಮಾಡಲಾಗಿದೆ. ಶಾ ಅವರು ಸದನದಲ್ಲಿ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಸದನವನ್ನು ತಪ್ಪುದಾರಿಗೆಳೆದಿದ್ದಾರೆಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಜೈರಾಮ್ ರಮೇಶ್, ನೋಟಿಸ್‌ನಲ್ಲಿ ಆಪಾದಿಸಿದ್ದಾರೆ.


Share: