ಭಟ್ಕಳ, ಮಾರ್ಚ್ 10: ತಾಲೂಕಿನ ಹೆಬಳೆಯ ಜಾಮೀಯಾಬಾದನಲ್ಲಿ ಲೋಕೋಪಯೋಗಿ ಇಲಾಖೆಯಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಮರುಡಾಂಬರೀಕರಣ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ನಿನ್ನೆ ಬೆಳಿಗ್ಗೆ ಒಂದು ತಾಸಿಗೂ ಅಧಿಕ ಕಾಲ ರಸ್ತೆ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಜಾಮೀಯಾಬಾದನಲ್ಲಿ ಡಾಂಬರೀಕರಣ ಕಾಮಗಾರಿಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಸರಿಯಾದ ರೀತಿಯಲ್ಲಿ ಜಲ್ಲಿ, ಡಾಂಬರನ್ನು ಮಿಕ್ಸ ಮಾಡದೇ ತರಾತುರಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ನಡೆಯುತ್ತಿದ್ದ ಕಾಮಗಾರಿಯನ್ನು ಸ್ಥಗಿತಗೊಳಿಸಿ ಸರಿಯಾಗಿ ಮಾಡುವುದಿದ್ದರೆ ಮಾತ್ರ ಕಾಮಗಾರಿ ನಡೆಸಿ ಇಲ್ಲದಿದ್ದಲ್ಲಿ ಕಾಮಗಾರಿ ಆರಂಭಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಹೆಬಳೆ ಭಾಗದ ತಾಪಂ ಸದಸ್ಯ ಪರಮೇಶ್ವರ ದೇವಾಡಿಗರ ಬಳಿ ರಸ್ತೆ ಕಾಮಗಾರಿ ಕಳಪೆಯ ಕುರಿತು ಪ್ರಸ್ತಾಪಿಸಿದ ಸಾರ್ವಜನಿಕರು ಕಾಮಗಾರಿ ಸಮರ್ಪಕವಾಗುವಂತೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು. ಲೋಕೋಪಯೋಗಿ ಇಲಾಖೆಯ ಅಭಿಯಂತರರರು ಸ್ಥಳದಲ್ಲಿ ನಿಂತು ಕಾಮಗಾರಿ ನಡೆಸಬೇಕು ಎಂದೂ ಜನರು ಒತ್ತಾಯಿಸಿದರು. ಸಾರ್ವಜನಿಕರ ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಗುತ್ತಿಗೆದಾರ ಗುಣಮಟ್ಟದ ಕಾಮಗಾರಿ ನಡೆಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪ್ರತಿಭಟನೆ ಕೈಬಿಟ್ಟರು. ಕಾಮಗಾರಿ ಕಳಪೆ ಎಂದು ಕಂಡು ಬಂದಲ್ಲಿ ಮತ್ತೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಜನರು ನೀಡಿದ್ದಾರೆ.