ಹಾಸನ-ಡಿ 10. ನಕಲಿ ಮದ್ಯ ಮಾರಾಟ ಮಾಡಿ ಹಲವಾರು ಮಂದಿಯ ಅನಾರೋಗ್ಯಕ್ಕೆ ಕಾರಣವಾಗಿರುವ ಖಾಸಗಿ ಮದ್ಯದಂಗಡಿ ತೆರವುಗೊಳಿಸಿ ಸರಕಾರಿ ಮದ್ಯದಂಗಡಿ ತೆರೆಯುವಂತೆ ಒತ್ತಾಯಿಸಿ ನಿಟ್ಟೂರು ಗ್ರಾಮಸ್ಥರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಆಗಮಿಸಿದ ನೂರಾರು ಮಂದಿ ಗ್ರಾಮಸ್ಥರು ಕೆಲಕಾಲ ಧರಣಿ ಸತ್ಯಾಗ್ರಹ ನಡೆಸಿದರು. ನಂತರ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಿಟ್ಟೂರು ಗ್ರಾಮದಲ್ಲಿ ಸುಮಾರು ೧ ಸಾವಿರಕ್ಕೂ ಅಧಿಕ ಕುಟುಂಬಗಳಿದ್ದು, ಸುತ್ತಮುತ್ತಲ ಹಳ್ಳಿಗಳಿಗೂ ಕೇಂದ್ರ ಸ್ಥಾನವಾಗಿದೆ. ಈ ಗ್ರಾಮದಲ್ಲಿ ಈಗಾಗಲೇ ಖಾಸಗಿ ಮದ್ಯದಂಗಡಿ ಇದ್ದು, ನಿಗದಿತ ಬೆಲೆಗಿಂತ ಹೆಚ್ಚು ಬೆಲೆಗೆ ಮದ್ಯ ಮಾರಾಟ ಮಾಡಿ ಮದ್ಯವೆಸನಿಗಳನ್ನು ವಂಚಿಸಲಾಗುತ್ತಿದೆ. ಅಲ್ಲದೇ ಕೆಲವು ಸಂದರ್ಭದಲ್ಲಿ ನಕಲಿ ಮದ್ಯವನ್ನು ಮಾರಾಟ ಮಾಡುವ ಮೂಲಕ ಕೆಲವರ ಅನಾರೋಗ್ಯಕ್ಕೂ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಪಾನೀಯ ನಿಗಮದ ಮೂಲಕ ಮದ್ಯದಂಗಡಿ ತೆರೆಯುವ ಮೂಲಕ ಗುಣಮಟ್ಟದ ಮದ್ಯ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಖಾಸಗಿ ಮದ್ಯದಂಗಡಿ ಮಾಲೀಕರಿಗೆ ಬೇಕಾದ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದು, ಇದಕ್ಕೆ ಮನ್ನಣೆ ನೀಡದೆ ಸರಕಾರಿ ಮದ್ಯದಂಗಡಿ ತೆರೆಯುವಂತೆ ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವನಮಾಲ ನೇತೃತ್ವ ವಹಿಸಿದ್ದರು.