ಭಟ್ಕಳ, ಮಾರ್ಚ್ 9:ನಂಬಿದರೆ ನಂಬಿ.. ಬಿಟ್ಟರೆ ಬಿಡಿ! ‘ರೋಗಿಗಳೇ... ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆ, ಔಷಧಿ, ತುರ್ತು ಸಾಗಾಣಿಕೆ(ಅಂಬುಲೆನ್ಸ) ಯಾವುದಕ್ಕೂ ಯಾರ ಕೈಯ ಮೇಲೂ ಹತ್ತು ಪೈಸೆಯನ್ನೂ ಇಡಬೇಡಿ’ ಎಂದು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಜಿಲ್ಲಾ ಯೋಜನಾಧಿಕಾರಿ ಶರದ್ ನಾಯ್ಕ ಹೇಳಿದ್ದಾರೆ.
ಅವರು ಆರೋಗ್ಯ ಇಲಾಖೆಯ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಅಡಿಯಲ್ಲಿ ಸಿಗುವ ಸೇವೆಗಳ ಕುರಿತು ಇಲ್ಲಿಯ ಶಿರಾಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಜಿಲ್ಲೆಯ ೫೫ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ೩೦ ಕೇಂದ್ರಗಳಲ್ಲಿ ೨೪*೭ ಸೇವೆಯಡಿಯಲ್ಲಿ ಹೆರಿಗೆ ಮತ್ತು ತುರ್ತು ಸೇವೆಯ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರತಿಯೊಂದು ಗ್ರಾಮದಲ್ಲಿ ಚುನಾಯಿತ ಪ್ರತಿನಿಧಿಗಳ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಹೆಸರಿನಲ್ಲಿ ೧೦,೦೦೦ರೂಪಾಯಿ ಮುಕ್ತ ನಿಧಿಯನ್ನು ಬಿಡುಗಡೆ ಮಾಡಲಾಗಿದೆ. ಈ ನಿಧಿಯಿಂದ ಮಕ್ಕಳ ಅಭಿವೃದ್ಧಿ ಕಾರ್ಯಕ್ರಮ ಅಂಗನವಾಡಿ ಚಟುವಟಿಕೆ, ನಿರಾಶ್ರಿತ ಮಹಿಳೆ, ಬಡಕುಟುಂಬದ ಪಾಲನೆ ಮತ್ತು ಪೌಷ್ಠಿಕಾಂಶ, ಪರಿಸರ ನೈರ್ಮಲ್ಯಕ್ಕೆ ಉಪಯೋಗಿಸಬಹುದು ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮತ್ತು ಮುಂಜಾಗ್ರತಾ ಕ್ರಮಗಳಿಗೆ ಉಪಯೋಗಿಸಬಹುದು ಎಂದ ಅವರು ಪ್ರತಿಯೊಂದು ಉಪಕೇಂದ್ರಗಳಿಗೆ ೧೦,೦೦೦ರೂಪಾಯಿ ಮುಕ್ತ ನಿಧಿಯನ್ನು ಒದಗಿಸಲಾಗಿದೆ. ಈ ಹಣವನ್ನು ಉಪಕೇಂದ್ರಕ್ಕೆ ಅವಶ್ಯವಿರುವುದಕ್ಕೆ ಬಳಸಿ ನಂತರ ಗರ್ಭೀಣಿಯರಿಗೆ ಸಾರಿಗೆ ವ್ಯವಸ್ಥೆ, ಗಂಡಾಂತರ ರೋಗಿಗಳಿಗೆ ಸಾರಿಗೆ ವ್ಯವಸ್ಥೆ, ಉಪಕೇಂದ್ರಕ್ಕೆ ಕ್ರಿಮಿ ನಾಶಕ ಮತ್ತು ಬ್ಯಾಂಡೇಜ ಖರೀದಿಗೆ ಬಳಸಬಹುದು ಎಂದು ಹೇಳಿದರು. ಪ್ರತಿ ಆರೋಗ್ಯ ಕೇಂದ್ರಕ್ಕೆ ಓರ್ವ ವೈದ್ಯರು, ೩ ಸ್ಟಾಪ್ ನರ್ಸಗಳನ್ನು ಪ್ರತಿ ೮ ತಾಸುಗಳಿಗೆ (ಓರ್ವರಂತೆ) ಕರ್ತವ್ಯಕ್ಕೆ ಅನುವಾಗುವಂತೆ ನೇಮಿಸಲಾಗಿದೆ ಎಂದ ಅವರು ಅಪಘಾತ ಸೇರಿದಂತೆ ಇನ್ನಿತರ ತುರ್ತು ಸಾಗಾಣಿಕೆಗಾಗಿ ೨೫,೦೦೦ರೂಪಾಯಿ ಅನಿರ್ಬಂಧಿತ ಹಣಕಾಸಿನ ನೆರವನ್ನು ನೀಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ೧,೭೫,೦೦೦ ಹಾಗೂ ತಾಲೂಕು ಆಸ್ಪತ್ರೆಗೆ ೨.೫ ಲಕ್ಷ ರೂಪಾಯಿಯನ್ನು ವಾರ್ಷಿಕವಾಗಿ ಸರಕಾರ ಬಿಡುಗಡೆಗೊಳಿಸುತ್ತಿದ್ದು, ಜನರು ಪ್ರಯೋಜನವನ್ನು ಕೇಳಿ ಪಡೆದುಕೊಳ್ಳಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪುರುಷರಿಗೂ ಸಂತಾನ ಶಸ್ತ್ರ ಚಿಕಿತ್ಸೆಯ ಸೌಲಭ್ಯವಿದ್ದು, ಸಾರ್ವಜನಿಕರು ಮುಂದೆ ಬರಬೇಕು ಎಂದ ಅವರು ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಹದಿನೈದು ದಿನಗಳಿಗೊಮ್ಮೆ ತಜ್ಞ ವೈದ್ಯರಿಂದ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಸುಭಾಷ್, ಜಿಲ್ಲಾ ಶಿಕ್ಷಣಾಧಿಕಾರಿ ಎಸ್.ವಿ.ನಾಯ್ಕ, ಡಾ.ಪ್ರಕಾಶ ಕಾಮತ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
‘ಬೆಳಕೆ ಆರೋಗ್ಯ ಕೇಂದ್ರದ ಪ್ರಕರಣ ಪರಿಶೀಲನೆಗೆ’
ಬೆಳಕೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇತ್ತೀಚಿಗೆ ಕಾನೂನು ಬಾಹೀರವಾಗಿ ಪಿಠೋಪಕರಣಗಳನ್ನು ಖರೀದಿಸಲಾಗಿದೆ ಎನ್ನಲಾದ ಪ್ರಕರಣವನ್ನು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಜಿಲ್ಲಾ ಯೋಜನಾಧಿಕಾರಿ ಶರದ್ ನಾಯ್ಕ ಹೇಳಿದ್ದಾರೆ.
ಈ ಕುರಿತು ತಮಗೆ ಮಾಹಿತಿ ಬಂದಿದ್ದು, ಕಾನೂನು ಬಾಹೀರವಾಗಿ ಮೊನಿಟರಿಂಗ್ ಸಮಿತಿಯನ್ನು ರಚಿಸಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಇದು ನಿಜವೇ ಆಗಿದ್ದಲ್ಲಿ ಖರ್ಚಾದ ಹಣ ವಸೂಲಾತಿಗೆ ಆದೇಶಿಸಲಾಗುವುದು ಎಂದು ತಿಳಿಸಿದರು.
...