ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ- ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಧರಣಿ

ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ- ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಧರಣಿ

Tue, 09 Mar 2010 18:03:00  Office Staff   S.O. News Service

ಬೆಂಗಳೂರು,ಮಾರ್ಚ್ 9: ಗೋಹತ್ಯೆ ನಿಷೇಧ ಕಾಯ್ದೆಯನ್ನು ಮಂಡಿಸುವ ಸರ್ಕಾರದ ಕ್ರಮ ವಿಧಾನಸಭೆಯಲ್ಲಿಂದು ಭಾರೀ ಕೋಲಾಹಲಕ್ಕೆ ಕಾರಣವಾಯಿತಲ್ಲದೇ ಗೋಹತ್ಯೆ ನಿಷೇಧ ಕೂಡದು ಎಂದು ಒತ್ತಾಯಿಸಿ ಪ್ರತಿಪಕ್ಷಗಳು ಧರಣಿ ನಡೆಸಿದ ಬೆಳವಣಿಗೆ ಜರುಗಿತು.

 

 

ಕಾನೂನು ಸಚಿವ ಸುರೇಶ್ ಕುಮಾರ್ ಇಂದು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ 2010 ಅನ್ನು ವಿಧಾನಸಭೆಯಲ್ಲಿ ಮಂಡಿಸಿದಾಗ ಕಾಂಗ್ರೆಸ್ ಹಾಗೂ ಜೆಡಿ‌ಎಸ್ ಸದಸ್ಯರು ಇದನ್ನು ವಿರೋಧಿಸಿ ಸಭಾಧ್ಯಕ್ಷರೆದುರಿನ ಬಾವಿಗೆ ಬಂದು ಪ್ರತಿಭಟಿಸಿದರು.

 

 

ಇದಾದ ನಂತರ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರ ಮನವಿಯ ಮೇರೆಗೆ ಪ್ರತಿಪಕ್ಷಗಳ ಸದಸ್ಯರು ಧರಣಿಯನ್ನು ಹಿಂಪಡೆದು ತಮ್ಮ ಸ್ಥಾನಗಳಿಗೆ ಹಿಂತಿರುಗಿದರಾದರೂ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಇದೇ ಕಾರಣಕ್ಕಾಗಿ ಭಾರೀ ವಾಗ್ಯುದ್ಧ ನಡೆಯಿತಲ್ಲದೇ ಕೆಲ ಕಾಲ ಯಾರ ಮಾತು ಯಾರಿಗೂ ಕೇಳದ ಪರಿಸ್ಥಿತಿ ಸೃಷ್ಟಿಯಾಗಿ ಬಿಟ್ಟಿತು.

 

 

ಈ ಮಧ್ಯೆಯೇ ಮಾತನಾಡಿದ ಕಾಂಗ್ರೆಸ್ ಉಪನಾಯಕ ಟಿ.ಬಿ.ಜಯಚಂದ್ರ,ಈ ಹಿಂದೆಯೇ ೧೯೬೪ ರಲ್ಲಿ ಜಾರಿಗೆ ಬಂದಿದ್ದ ಗೋಹತ್ಯೆ ನಿಷೇಧ ಕಾಯ್ದೆಗೂ ಇವರು ಮಂಡಿಸಿರುವ ಕಾಯ್ದೆಗೂ ಯಾವುದೇ ವ್ಯತ್ಯಾಸವಿಲ್ಲ.ಹೀಗಿರುವಾಗ ಯಾವುದೋ ಲಾಭವನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮಂಡಿಸಿರುವುದು ಸರಿಯಲ್ಲ ಎಂದು ಹೇಳಿದರು.

 

ಹಿಂದೆ ಈ ಕಾಯ್ದೆಗೆ ರಾಷ್ಟ್ರಪತಿಗಳು ಒಪ್ಪಿಗೆ ಕೊಟ್ಟಿದ್ದಾರೆ.ಈಗ ನೀವು ಮತ್ತೆ ಇದನ್ನೇ ಕಳಿಸಿದರೆ ರಾಷ್ಟ್ರಪತಿಗಳು ಅದನ್ನು ತಿರಸ್ಕರಿಸುವ ಸಾಧ್ಯತೆಯಿದೆ.ಹೀಗಾಗಿ ಈಗ ಮಂಡಿಸಿರುವ ಕನಾಟಕ ಜಾನುವಾರು ಹತ್ಯೆ ಪ್ರತಿಬಂಕ ಮತ್ತು ಸಂರಕ್ಷಣಾ ವಿಧೇಯಕವನ್ನು ಹಿಂಪಡೆಯುವಂತೆ ಒತ್ತಾಯಿಸಿದರು.

 

 

ಇದನ್ನು ವಿರೋಧಿಸಿದ ಕಾನೂನು ಸಚಿವ ಸುರೇಶ್ ಕುಮಾರ್ ಹಾಗೂ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ;ಕಾಯ್ದೆಯನ್ನು ಈಗ ಮಂಡಿಸಲಾಗಿದೆ.ಹೀಗಾಗಿ ಅದರ ಬಗ್ಗೆ ಚರ್ಚೆ ನಡೆಯಲಿ.ಚರ್ಚೆಗೆ ಅವಕಾಶ ನೀಡುವ ಮುನ್ನವೇ ವಿರೋಧ ಏಕೆ?ಅಂತ ಪ್ರಶ್ನಿಸಿದರು.

 

 

ಅವರ ಮಾತನ್ನು ವಿರೋಧಿಸಿದ ಶ್ರೀನಿವಾಸ ಪ್ರಸಾದ್;ನಾವು ಯಾವ ಕಾಯ್ದೆಯನ್ನೂ ಮಂಡನೆಯ ಹಂತದಲ್ಲಿ ವಿರೋಧಿಸಿಲ್ಲ.ಆದರೆ ಇದಕ್ಕೆ ವಿರೋಧ ಯಾಕೆ ಮಾಡುತ್ತಿದ್ದೇವೆ ಎಂದರೆ ವಿಷಯದ ಗಂಭೀರತೆ ಹಾಗಿದೆ.

 

ತಕ್ಷಣವೇ ಇದನ್ನು ವಾಪಸು ತೆಗೆದುಕೊಳ್ಳಿ.ಇದರ ಪರಿಣಾಮ ಏನಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ಎಚ್ಚರಿಸಿದರು.

 

ಹಿಂದೆ ಪಾರ್ಲಿಮೆಂಟ್‌ನಲ್ಲಿ ಮಧುದಂಡವತೆ ಅವರು ಪಕ್ಷಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದ ಬಿಲ್‌ನ್ನು ಮಂಡಿಸಿದ ಸಂಧರ್ಭದಲ್ಲಿ ವಿರೋಧ ಮಾಡಿದರು.ಇದರ ಪರಿಣಾಮವಾಗಿ ಆ ಬಿಲ್‌ನ್ನೇ ಹಿಂಪಡೆಯಲಾಯಿತು ಎಂದರು.

 

 

ನೀವು ಎಲ್ಲಾ ಬಿಟ್ಟು ಗೋಹತ್ಯೆ ನಿಷೇಧ ಕಾಯ್ದೆಯಂತಹ ವಿಷಯಗಳನ್ನೇ ತರುತ್ತಿದ್ದೀರಲ್ರೀ?ಎಂದು ಕೆಂಡ ಕಾರಿದ ಶ್ರೀನಿವಾಸ ಪ್ರಸಾದ್,ನಿಮಗೆ ನಾನು ಎಚ್ಚರಿಕೆ ಕೊಡುತ್ತಿದ್ದೇನೆ.ಇದನ್ನು ಹಿಂಪಡೆದುಕೊಳ್ಳಿ ಎಂದು ಆಗ್ರಹಪಡಿಸಿದರು.

 

 

ಈ ಹಂತದಲ್ಲಿ ಆಡಳಿತ ಪಕ್ಷದ ಸದಸ್ಯರು ಶ್ರೀನಿವಾಸ ಪ್ರಸಾದ್ ಅವರ ಮಾತನ್ನು ವಿರೋಧಿಸಿ ಕಲಹ ಎಬ್ಬಿಸಿದಾಗ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ,ಮೊದಲು ನಾವೇನು ಹೇಳುತ್ತೀವೋ?ಅದನ್ನು ಕೇಳ್ರೀ ಎಂದು ಗುಡುಗಿದರು.

 

 

ಇಷ್ಟಾದರೂ ಆಡಳಿತ ಪ್ರತಿಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ ಶುರುವಾದಾಗ,ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಪರಿಸ್ಥಿತಿಯನ್ನು ತಿಳಿಗೊಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಿದರು.

 

ಈ ಮಧ್ಯೆಯೇ ಮಾತನಾಡಿದ ಟಿ.ಬಿ.ಜಯಚಂದ್ರ,ನೀವು ಜಾತಿ ಜಾತಿಗಳ ಮಧ್ಯೆ ವೈಷಮ್ಯ ತರುವ ಸಲುವಾಗಿ ಇಂತಹ ಕೆಲಸ ಮಾಡುತ್ತಿದ್ದೀರಿ ಎಂದು ಆರೋಪಿಸಿದರಲ್ಲದೇ ಈಗ ಜಾರಿಗೊಳಿಸಲು ಹೊರಟಿರುವ ಕಾಯ್ದೆ ಬಡವರನ್ನು ಕಷ್ಟಕ್ಕೆ ತಳ್ಳುವ ಕಾಯ್ದೆ ಎಂದರು.

 

 

ಹೆಚ್.ಸಿ.ಮಹದೇವಪ್ಪ ಮಾತನಾಡಿ,ಬಡವರು,ದಲಿತರ ಆಹಾರ ಪದ್ಧತಿಯ ಮೇಲೆ ಕಡಿವಾಣ ಹೇರಲು ರಾಜ್ಯ ಸರಕಾರ ಹೊರಟಿದೆ.ಇದು ಸರಿಯಲ್ಲ ಎಂದು ಏರಿದ ಧ್ವನಿಯಲ್ಲಿ ಆರೋಪ ಮಾಡಿದರು.

 

ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮಾತನಾಡಿ,ಯಾರ ಆಹಾರ ಪದ್ಧತಿಯನ್ನು ಹಾಳು ಮಾಡುವ ಅಧಿಕಾರ ನಿಮಗಿಲ್ಲ.ಸಮಾಜದಲ್ಲಿ ಅಶಾಂತಿಯನ್ನು ಹುಟ್ಟು ಹಾಕಲು ನೀವು ಈ ಕೆಲಸ ಮಾಡುತ್ತಿದ್ದೀರಿ ಎಂದು ಟೀಕೆ ಮಾಡಿದರು.

 

 

ಈ ಹಂತದಲ್ಲೂ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತಲ್ಲದೇ ಅಂತಿಮವಾಗಿ ಈ ಕಾಯ್ದೆಯ ಕುರಿತು ಚರ್ಚೆಗೆ ಅವಕಾಶ ಕೊಡುತ್ತೇನೆಂದು ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಹೇಳಿದಾಗ ಸದನದಲ್ಲಿ ಶಾಂತಿ ನೆಲೆಸಿತು. 

 

 


Share: