ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮಂಗಳೂರು:ಸರಕಾರಿ ಮುಸ್ಲಿಂ ವಸತಿ ಶಾಲೆಯ ಮುಗಿಯದ ಸಮಸ್ಯೆ

ಮಂಗಳೂರು:ಸರಕಾರಿ ಮುಸ್ಲಿಂ ವಸತಿ ಶಾಲೆಯ ಮುಗಿಯದ ಸಮಸ್ಯೆ

Thu, 18 Feb 2010 03:22:00  Office Staff   S.O. News Service

ಮಂಗಳೂರು,ಫೆ.೧೭: ಸದಾ ವಿವಾದದ ಸುಳಿಗೆ ಸಿಲುಕಿರುವ ಸರಕಾರಿ ಮುಸ್ಲಿಂ ವಸತಿ ಶಾಲೆಯ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಆಪಾದಿಸಿ ಫೆ.೨೦ರಂದು ಎಸ್‌ಎಫ್‌ಐ ಜಿಲ್ಲಾ ಘಟಕ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಮುಸ್ಲಿಂ ಸಮುದಾಯಕ್ಕೆ ಸೇರಿದ ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹತ್ತಾರು ವರ್ಷದ ಹಿಂದೆ ಸ್ಥಾಪನೆಗೊಂಡಿದ್ದ ಈ ಸರಕಾರಿ ಶಾಲೆಯು ಮೊದಲು ಕೋಟೆಕಾರ್ ಸಮೀಪವಿತ್ತು. ಅಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ, ಎರಡು ವರ್ಷದ ಹಿಂದೆ ನಾಟೆಕಲ್ ಸಮೀಪದ ಉರುಮಣೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಅಲ್ಲಿ ಟಾಯ್ಲೆಟ್ ಮತ್ತು ಬಟ್ಟೆ ಬರೆ ಒಗೆಯಲು ಸ್ಥಳಾವಕಾಶದ ಕೊರತೆ,  ಮಲಗಲು ಸೂಕ್ತ ಬೆಡ್, ಕೋಣೆ ಇತ್ಯಾದಿ ಇಲ್ಲದಿರುವುದು... ಹೀಗೆ ಅನೇಕ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದರು. ಇವೆಲ್ಲದರ ಮಧ್ಯೆ ಕಲುಷಿತ ಆಹಾರ ಸೇವನೆಯಿಂದ ನೂರಾರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದರು. ಇದು ಜಿಲ್ಲಾ ಪಂಚಾಯತ್ ಸಭೆಯಲ್ಲೂ ಭಾರೀ ಚರ್ಚೆಯಾಗಿತ್ತು. ಅಧಿಕಾರಿಗಳು, ಜನಪ್ರತಿನಿಧಿಗಳು ಅಲ್ಲಿಗೆ ಭೇಟಿ ನೀಡಿ ಶಾಲೆಯನ್ನು ಸ್ಥಳಾಂತರಿಸುವುದೇ ಸೂಕ್ತ ಎಂದು ತೀರ್ಮಾನಿಸಿದ ಮೇರೆಗೆ ೨೦೦೯ರ  ಆಗಸ್ಟ್ ೧ರಿಂದ ತೊಕ್ಕೊಟ್ಟಿನ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. 

ಸಮಸ್ಯೆಗಳು...

ನಾಟೆಕಲ್‌ನಿಂದ ತೊಕ್ಕೊಟ್ಟಿನ ಹೊಸ ಕಟ್ಟಡಕ್ಕೆ ದುಬಾರಿ ಬಾಡಿಗೆ ಪಡೆದು ಕಾರ್ಯಾಚರಿಸುವ ಈ ವಸತಿ ಶಾಲೆಯಲ್ಲಿ ಮತ್ತೆ ಅನೇಕ ಸಮಸ್ಯೆಗಳು ಶುರುವಾಗಿದೆ. ನಾಟೆಕಲ್‌ನಲ್ಲಿದ್ದಾಗ ವಿದ್ಯಾರ್ಥಿಗಳು ಉಸಿರಾಡಲು ಕಷ್ಟ ಪಡುತ್ತಿದ್ದರೆ, ತೊಕ್ಕೊಟ್ಟಿನ ಹಾಲಿ ಕಟ್ಟಡವು ವಿದ್ಯಾರ್ಥಿಗಳಿಗೆ ಬಂಧಿಖಾನೆಯ ಅನುಭವವಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. 

ಇಲ್ಲಿಗೆ ಇನ್ನೂ ವಾರ್ಡನ್ ನೇಮಕ ಆಗಿಲ್ಲ. ವಿವಾದಕ್ಕೆ ತುತ್ತಾಗಿರುವ ಮುಖ್ಯ ಶಿಕ್ಷಕಿಗೆ ವರ್ಗವಾಗಿದ್ದು, ಅದೇ ಶಾಲೆಯ ಶಿಕ್ಷಕಿಗೆ ಮುಖ್ಯ ಶಿಕ್ಷಕಿಯ ಜವಾಬ್ದಾರಿ ವಹಿಸಿಕೊಡಲಾಗಿದೆ. ಇಬ್ಬರು ಶಿಕ್ಷಕರಿಗೆ ವರ್ಗಾವಣೆಯಾಗಿದ್ದು, ೫ ಮಂದಿ ಶಿಕ್ಷಕಿಯರು ಪ್ರಭಾರ ಹುದ್ದೆಯಲ್ಲಿದ್ದಾರೆ. ಶಿಕ್ಷಕರ ಕೊರತೆ ಇಲ್ಲವಾದರೂ ಮಕ್ಕಳಿಗೆ ಆಟವಾಡಲು ಮೈದಾನವಿಲ್ಲ. ನೀರಿನ ಸಮಸ್ಯೆಯೂ ಇದೆ.

ಪ್ರಸ್ತುತ ಇಲ್ಲಿ ೧೩೬ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಮತ್ತೆ ನಾಟೆಕಲ್ ಸಮೀಪದ ಉರುಮಣೆಯ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಪ್ರಭಾರ ಮುಖ್ಯ ಶಿಕ್ಷಕಿ ಶೋಭಾ ತಿಳಿಸಿದ್ದಾರೆ.

 ಪ್ರತಿಭಟನೆ

ಈ ಶಾಲೆಯ ಮಕ್ಕಳ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರ ಸಮ್ಮುಖ ಸಭೆ ನಡೆಸಿ ಚರ್ಚೆ ನಡೆಸಿದ್ದರೂ ಪ್ರಯೋಜನವಾಗಲಿಲ್ಲ.ಹಾಗಾಗಿ ಫೆ.೨೦ರಂದು ಜಿಲ್ಲಾ ಪಂಚಾಯತ್ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಸ್‌ಎಫ್‌ಐ ಮುಖಂಡ ಜೀವನ್ ಕುತ್ತಾರ್ ತಿಳಿಸಿದ್ದಾರೆ.

Share: