ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು:ಸಚಿವ ಮುಮ್ತಾಝ್ ಅಲಿಖಾನ್ ರಾಜೀನಾಮೆಗೆ ಹಜ್ಜ್ ಸಮಿತಿ ಒತ್ತಾಯ

ಬೆಂಗಳೂರು:ಸಚಿವ ಮುಮ್ತಾಝ್ ಅಲಿಖಾನ್ ರಾಜೀನಾಮೆಗೆ ಹಜ್ಜ್ ಸಮಿತಿ ಒತ್ತಾಯ

Sat, 14 Nov 2009 03:05:00  Office Staff   S.O. News Service
ಬೆಂಗಳೂರು, ನ.೧೩: ಅಲ್ಪಸಂಖ್ಯಾತ ಸಮುದಾಯದ ಏಳಿಗೆಯನ್ನು ಸಹಿಸದ ಹಜ್ಜ್, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಪ್ರೊ.ಮುಮ್ತಾಝ್ ಅಲಿಖಾನ್  ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ರಾಜ್ಯ ಹಜ್ಜ್ ಸಮಿತಿ ಅಧ್ಯಕ್ಷ ಎಸ್.ಮುಹಮ್ಮದ್ ಗೌಸ್ ಬಾಷಾ ಒತ್ತಾಯಿಸಿದ್ದಾರೆ.

ನಗರದ ಹಜ್ಜ್ ಕ್ಯಾಂಪ್(ಖುದ್ದೂಸ್ ಸಾಹೇಬ್ ಈದ್ಗಾ ಮೈದಾನ)ನಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಸಮುದಾಯದ ಏಳಿಗೆಯನ್ನು ಸಹಿಸದ ಸಚಿವ ಮುಮ್ತಾಝ್‌ಅಲಿಖಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದರು.

ಕಳೆದ ಸಾಲಿನಲ್ಲಿ ಹಜ್ಜ್ ಸಮಿತಿಯ ನಿರ್ವಹಣೆಗಾಗಿ ಒಂದು ಕೋಟಿ ರೂ. ವೆಚ್ಚವಾಗಿದೆ. ಪ್ರಸ್ತುತ ಸಾಲಿನಲ್ಲಿ ಸಮಿತಿಗೆ ೧.೫೦ ಕೋಟಿ ರೂ.ಅನುದಾನ ಬಿಡುಗಡೆ ಮಾಡುವಂತೆ ಸಚಿವರಿಗೆ ಮನವಿ ಮಾಡಲಾಯಿತು. ಈ ಪೈಕಿ ಕೇವಲ ೭೫ ಲಕ್ಷ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿದ್ದಾರೆ. ಹಜ್ಜ್ ಕ್ಯಾಂಪ್‌ಗಾಗಿ ಒಂದೇ ಒಂದು ರೂಪಾಯಿ ಕೂಡ ಬಿಡುಗಡೆ ಆಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಗಳ ಅಧೀನದಲ್ಲಿ ತಮ್ಮ ಕಚೇರಿಯನ್ನು ನಿರ್ವಹಿಸುತ್ತಿರುವ ಮುಮ್ತಾಝ್ ಅಲಿಖಾನ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜವಾಬ್ದಾರಿಗಿಂತ ಹೆಚ್ಚಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರ ಹೊಣೆಯನ್ನು ಒಬ್ಬ ಜಿಲ್ಲಾಧಿಕಾರಿಯಂತೆ ನಿಭಾಯಿಸುವಲ್ಲಿ ತಲ್ಲಿನರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ಪ್ರಸ್ತುತ ಸಾಲಿನಲ್ಲಿ ಹೆಚ್ಚುವರಿಯಾಗಿ ಮಂಗಳೂರಿನಲ್ಲೂ ಹಜ್ಜ್ ಕ್ಯಾಂಪ್‌ನ್ನು ಪ್ರಾರಂಭಿಸಲಾಗಿದ್ದು, ಸಚಿವರು ಈ ಬಗ್ಗೆಯೂ ಗಮನ ಹರಿಸಿಲ್ಲ. ಇದರ ಸಂಪೂರ್ಣ ನಿರ್ವಹಣೆ ಯನ್ನು ದಾನಿಗಳ ಮೂಲಕ ನಡೆಸಲಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗಾಗಿ ಇವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವರನ್ನಾಗಿ ಮಾಡಿದರು. ಆದರೆ, ಇವರು ಮಾಡುತ್ತಿರುವುದಾದರೂ ಏನು ಎಂದು ಕಿಡಿಕಾರಿದರು.

ಸಮುದಾಯದ ಏಳಿಗೆಯನ್ನು ಸಹಿಸದ ಇಂತಹ ಸಚಿವರ ಅಗತ್ಯವಿದೆಯೇ ? ಹಜ್ಜ್ ಹೌಸ್ ನಿರ್ಮಾಣಕ್ಕಾಗಿ ರಾಜ್ಯ ಸರಕಾರ ಐದು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಆದರೆ, ಈ ಬಗ್ಗೆ ಗಮನ ಹರಿಸದೆ ಕೆಲವು ವಕ್ಫ್ ಆಸ್ತಿಗಳ ಹಿಂದೆ ತಮ್ಮ ಸಮಯವನ್ನು ವ್ಯಯ ಮಾಡುತ್ತಿದ್ದಾರೆ. ಸಚಿವರಿಗೆ ಹಜ್ಜ್ ಹೌಸ್ ನಿರ್ಮಾಣದ ಆಸಕ್ತಿ ಇದ್ದಂತಿಲ್ಲ ಎಂದು ಮೊಹಮ್ಮದ್ ಗೌಸ್ ದೂರಿದರು.

ಸಚಿವರಿಂದ ದ್ವೇಷ ರಾಜಕಾರಣ: ಹಜ್ಜ್ ಸಮಿತಿ ಕಟ್ಟಡದಲ್ಲಿ ರಾಜ್ಯ ವಕ್ಫ್ ಮಹಿಳಾ ಅಭಿವೃದ್ಧಿ ಪ್ರತಿಷ್ಠಾನಕ್ಕೆ ಅವಕಾಶ ಕಲ್ಪಿಸುತ್ತಿರು ವುದಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ಹಜ್ ಸಮಿತಿಯ ಗಮನಕ್ಕೆ ತಾರದೆ ಈ ನಿರ್ಧಾರವನ್ನು ಕೈಗೊಂಡಿರುವುದು ಸೂಕ್ತವಲ್ಲ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ತಮಗೆ ದೊರೆಯುತ್ತಿದ್ದ ಭತ್ತೆಯನ್ನು  ನಿಲ್ಲಿಸಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ದೂರಿದರು. 

ಆಂಧ್ರಪ್ರದೇಶದಲ್ಲಿ ಹಜ್ಜ್ ಸಮಿತಿಯ ಅಧ್ಯಕ್ಷರಿಗೆ ಉತ್ತಮ ಸ್ಥಾನಮಾನದ ಜೊತೆಗೆ ಅಗತ್ಯ ಸೌಲಭ್ಯಗಳನ್ನು ಪೂರೈಸಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಭತ್ತೆ(೩೦ ಸಾವಿರ ರೂ.) ಯನ್ನು ಪಡೆಯಲು ಪರದಾಡುವಂತಾಗಿದೆ. ತಾವು ಅಧಿಕಾರ ವಹಿಸಿಕೊಂಡ ಆಗಸ್ಟ್ ೨೪ ರಿಂದ ೩೦ರವರೆಗೆ ಆರು ದಿನಗಳ ಭತ್ತೆಯಷ್ಟೆ ನೀಡ ಲಾಗಿದೆ. ಮಹಿಳಾ ಅಭಿವೃದ್ಧಿ ಪ್ರತಿಷ್ಠಾನಕ್ಕೆ ಅವಕಾಶ ಕಲ್ಪಿಸಿಕೊಡಲು ವಿರೋಧ ವ್ಯಕ್ತಪಡಿಸಿ ದರಿಂದ ಸಚಿವರು ಈ ರೀತಿಯಾಗಿ ವರ್ತಿಸುತ್ತಿ ದ್ದಾರೆ ಎಂದು ಅವರು ತಿಳಿಸಿದರು.

ಹಜ್ಜ್ ಕ್ಯಾಂಪ್‌ನಲ್ಲಿನ ಮಳಿಗೆಗಳಿಂದ ೩.೭೫ಲಕ್ಷ ರೂ.ಗಳನ್ನು ಸಂಗ್ರಹಿಸಲಾಗಿದ್ದು, ಯಾತ್ರಿಗಳಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿ ಕೊಡಲು ಸಮಿತಿಯು ಸರ್ವ ಯತ್ನಗಳನ್ನು ಮಾಡುತ್ತಿದೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿನ  ಪ್ರದೇಶದಲ್ಲಿ ಹಜ್ ಹೌಸ್ ನಿರ್ಮಾಣಕ್ಕೆ ಸರಕಾರ ಮುಂದಾಗಬೇಕು. ಇದರಿಂದ ಯಾತ್ರಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಮುಹಮ್ಮದ್ ಗೌಸ್ ಹೇಳಿದರು.

ಹಜ್ ಯಾತ್ರೆ ಕೈಗೊಳ್ಳುವ ೩೦೦ ಯಾತ್ರಿಗಳಿಗೆ ಒಬ್ಬ ಸ್ವಯಂ ಸೇವಕನನ್ನು ನಿಯೋಜಿಸಬೇಕು. ಇದಕ್ಕಾಗಿ ನಾವು ೨೧ ಮಂದಿಯನ್ನು ಆಯ್ಕೆ ಮಾಡಿದ್ದರೆ, ಸಚಿವರು ಈ ಸಂಖ್ಯೆಯನ್ನು ೧೬ಕ್ಕೆ ಇಳಿಸಿದ್ದಾರೆ. ಹೀಗೆ ಸಮಿತಿಯ ಕಾರ್ಯಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಹಸ್ತಕ್ಷೇಪ ಮಾಡಿ ವಿನಾಕಾರಣ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಆದ್ದರಿಂದ, ಮುಖ್ಯಮಂತ್ರಿ ಕೂಡಲೆ ಮುಮ್ತಾಝ್ ಅಲಿ ಖಾನ್‌ರಿಂದ ರಾಜೀನಾಮೆ ಪಡೆದು ಖಾತೆಯನ್ನು ತಾವೇ ಉಳಿಸಿಕೊಳ್ಳುವಂತೆ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹಜ್ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಯಾಝ್ ಅಹ್ಮದ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Share: