ಕಾರವಾರ: ಹಣಕೋಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಭೀಮಕೋಲದಲ್ಲಿರುವ ಕೆರೆಯನ್ನು ಜಿಲ್ಲೆಯ ಪ್ರಮುಖ ಪ್ರವಾಸಿತಾಣವನ್ನಾಗಿ ಅಭಿವೃಧ್ದಿಗೊಳಿಸಲಾಗುವುದು ಎಂದು ಎಂಸಿಎ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಹೇಳಿದರು.
ಅವರು ಬುಧವಾರ, ಭೀಮಕೋಲದ ಕೆರೆಯಲ್ಲಿ ಜಲಸಾಹಸ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಭೀಮಕೋಲದ ಕೆರೆಯನ್ನು ಜಿಲ್ಲಾ ಪಂಚಾಯತ್ ,ಅರಣ್ಯ ಇಲಾಖೆ, ಪ್ರವಾಸೋದ್ಯಮ ಮತ್ತು ಸಣ್ಣ ನೀರಾವರಿ ಇಲಾಖೆಗಳ ಮೂಲಕ 37 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗಿದ್ದು, ಈ ಕೆರೆಯಲ್ಲಿ ಕಯಾಕಿಂಗ್, ಬೋಟಿಂಗ್ ಹಾಗೂ ತೂಗು ಸೇತುವೆ ನಿರ್ಮಾಣ ಮಾಡುವ ಮೂಲಕ ಪ್ರಮುಖ ಪ್ರವಾಸಿ ತಾಣವನ್ನಾಗಿ ಅಭಿವೃದ್ದಿಗೊಳಿಸಲಾಗುವುದು ಹಾಗೂ ಪ್ರವಾಸಿಗರು ಇಲ್ಲಿಗೆ ಆಗಮಿಸಲು ಉತ್ತಮ ರಸ್ತೆ ಸಂಪರ್ಕ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಭೀಮಕೋಲ ಕರೆಯ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಲು ಉದ್ದೇಶದಿಂದ, ಕೆರೆಯ ಆಳವನ್ನು ವಿಸ್ತರಿಸುವ ಮೂಲಕ ಹೆಚ್ಚು ನೀರು ಸಂಗ್ರಹ ಮಾಡಲು ನಿರ್ಧರಿಸಲಿದ್ದು, ನಾಲ್ಕೂ ಕಡೆ ಬೆಟ್ಟದಿಂದ ಆವೃತ್ತವಾದ ಈ ಕೆರೆಯ ದೃಶ್ಯವು ರಮಣೀಯವಾಗಿದ್ದು ಪ್ರವಾಸಿಗರ ನೆಚ್ಚಿನ ತಾಣವಾಗಲಿದೆ. ಈ ಕರೆಯಲ್ಲಿ ಪೆಡಲ್ ಬೋಟಿಂಗ್ ಮತ್ತು ಬೋಟಿಂಗ್ ಕೂಡಾ ಆರಂಭಿಸಲಾಗುವುದು ಎಂದು ಅವರು ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡಿ, ತಮ್ಮ ಪ್ರವಾಸವನ್ನು ಇನ್ನೂ ಹೆಚ್ಚು ಸ್ಮರಣೀಯವನ್ನಾಗಿ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಡಿ.ಎಫ್.ಓ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಂಜುನಾಥ ನಾವಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವೀರನಗೌಡ ಏಗನಗೌಡರ್,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಡಿ.ನಾಯ್ಕ್, ಹಣಕೋಣ ಗ್ರಾ.ಪಂ.ಅಧ್ಯಕ್ಷ ಶಾಂತಾರಾಮ್ ತಾಮ್ಸೆ , ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು , ಗ್ರಾ.ಪಂ. ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.