ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / 1997ರ ಕಸ್ಟಡಿ ಚಿತ್ರಹಿಂಸೆ ಪ್ರಕರಣ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಖುಲಾಸೆ

1997ರ ಕಸ್ಟಡಿ ಚಿತ್ರಹಿಂಸೆ ಪ್ರಕರಣ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಖುಲಾಸೆ

Mon, 09 Dec 2024 14:30:18  Office Staff   Vb

ಪೋರ್‌ಬಂದರ್: 1997ರ ಕಸ್ಟಡಿ ಚಿತ್ರಹಿಂಸೆ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಗುಜರಾತ್‌ನ ಪೋರ್‌ಬಂದರ್ ನ್ಯಾಯಾಲಯ ಖುಲಾಸೆಗೊಳಿಸಿದೆ. ರವಿವಾರ ಈ ಪ್ರಕರಣದ ತೀರ್ಪು ಪ್ರಕಟಿಸಿರುವ ಹೆಚ್ಚುವರಿ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಮುಕೇಶ್ ಪಾಂಡ್ಯ ಅವರು, ಸಂಜೀವ್ ಭಟ್ ವಿರುದ್ಧದ ಆರೋಪವನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿದ್ದಾರೆ.

ಈ ಪ್ರಕರಣ ಕುಖ್ಯಾತ ರೌಡಿ ಶೀಟರ್ ನರನ್ ಜಾಧವ್‌ ಕಸ್ಟಡಿ ಚಿತ್ರಹಿಂಸೆಯ ಆರೋಪದ ಸುತ್ತ ಕೇಂದ್ರೀಕೃತವಾಗಿದೆ. ಪೋರ್‌ಬಂದರ್ ಕರಾವಳಿಯಲ್ಲಿ 1994ರ ಆರ್‌ಡಿಎಕ್ಸ್ ಸಾಗಾಟ ಪ್ರಕರಣದ 22 ಆರೋಪಿಗಳಲ್ಲಿ ಒಬ್ಬನಾಗಿರುವ ಜಾಧವ್, ಆಗ ಪೋರ್ ಬಂದರ್‌ನ ಪೊಲೀಸ್ ಅಧೀಕ್ಷಕರಾಗಿದ್ದ ಸಂಜೀವ್ ಭಟ್ ತಪ್ರೊಪ್ಪಿಗೆ ಹೇಳಿಕೆಯನ್ನು ಪಡೆದುಕೊಳ್ಳಲು ತನಗೆ ಕ್ರೂರ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದರು ಎಂದು ಆರೋಪಿಸಿದ್ದ.

ಭಟ್‌ ನಿವಾಸದಲ್ಲಿ ವಶದಲ್ಲಿದ್ದಾಗ ಅವರು ತನ್ನನ್ನು ವಿವಸ್ತ್ರಗೊಳಿಸಿದರು ಹಾಗೂ ಗುಪ್ತಾಂಗ, ನಾಲಗೆ ಎದೆಗೆ ವಿದ್ಯುತ್‌ ಆಘಾತ ನೀಡಿದರು ಎಂದು ಆತ ಆರೋಪಿಸಿದ್ದ ಆದರೆ, ಪ್ರಸ್ತುತಪಡಿಸಲಾದ ಸಾಕ್ಷಾಧಾರಗಳು ಈ ಆರೋಪಗಳನ್ನು ರುಜುವಾತುಪಡಿಸಲು ವಿಫಲವಾಗಿವೆ ಎಂದು ನ್ಯಾಯಾಲಯ ಹೇಳಿತು ಹಾಗೂ ಭಟ್ ಅವರನ್ನು ಸಂಶಯದ ಆಧಾರದ ಮೇಲೆ ಖುಲಾಸೆಗೊಳಿಸಿತು.

ಅಲ್ಲದೆ, ಘಟನೆ ನಡೆಯುವ ಸಂದರ್ಭ ಪೋರ್‌ಬಂದರ್‌ ಪೊಲೀಸ್ ಅಧೀಕ್ಷಕರಾಗಿದ್ದ ಭಟ್ ಹಾಗೂ ಕಾನ್‌ಸ್ಟೇಬಲ್ ವಜುಬ್ಬಾ ಚಾವು ಅವರ ವಿರುದ್ದ ಪ್ರಕರಣ ದಾಖಲಿಸಲು ಅಗತ್ಯವಾದ ಸರಕಾರದ ಅನುಮತಿಯನ್ನು ಪಡೆದಿರುವುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ನ್ಯಾಯಾಲಯ ಗಮನಿಸಿತು.

ಈ ಪ್ರಕರಣದಲ್ಲಿ ಕಾನ್‌ಸ್ಟೇಬಲ್ ವಜುಬ್ಬಾ ಚಾವು ಕೂಡ ಆರೋಪಿಯಾಗಿದ್ದರು. ಭಟ್ ಅವರೊಂದಿಗೆ ಚಾವು ವಿರುದ್ಧ ಕೂಡ ಐಪಿಸಿ ಸ್ಪೆಕ್ಷನ್ 330 ಹಾಗೂ 324ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಈ ವರ್ಷಾರಂಭದಲ್ಲಿ ಚಾವು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪ್ರಕರಣದಿಂದ ಕೈಬಿಡಲಾಗಿತ್ತು.


Share: