ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ನಕ್ಸಲರಿಂದ ರೇಲ್ವೇಗೆ 500 ಕೋಟಿ ರು. ಹಾನಿ

ನಕ್ಸಲರಿಂದ ರೇಲ್ವೇಗೆ 500 ಕೋಟಿ ರು. ಹಾನಿ

Fri, 23 Apr 2010 14:35:00  Office Staff   S.O. News Service

ನವದೆಹಲಿ, ಏ.23: 2009 ರಲ್ಲಿ ನಕ್ಸಲರ ದಾಳಿಯಿಂದ ರೇಲ್ವೇ ಆಸ್ತಿ ಧ್ವಂಸ ಪ್ರಕರಣಗಳು ದುಪ್ಪಟ್ಟಾಗಿದ್ದು ಒಟ್ಟು 500 ಕೋಟಿ ರು. ನಷ್ಟ ಸಂಭವಿಸಿದೆ ಎಂದು ಕೇಂದ್ರ ರೇಲ್ವೇ ಸಚಿವೆ ಮಮತಾ ಬ್ಯಾನರ್ಜಿ ರಾಜ್ಯ ಸಭೆಯಲ್ಲಿ ಇಂದು ತಿಳಿಸಿದರು. ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು 2007ರಲ್ಲಿ 56 ನಕ್ಸಲ್ ದಾಳಿಗಳು, 2008 ರಲ್ಲಿ 30 ಹಾಗೂ 2009 ರಲ್ಲಿ 58 ಬಾರಿ ನಕ್ಸಲ್ ದಾಳಿ ನಡೆದಿದೆ ಎಂದರು.

ದೇಶಾದ್ಯಂತ ಹರಡಿರುವ 65,000 ಕಿಲೋಮೀಟರ್ ಉದ್ದದ ರೇಲ್ವೇ ಮಾರ್ಗದ ಇಂಚಿಂಚನ್ನೂ ಕಾವಲು ಕಾಯಲು ಸಾಧ್ಯವಿಲ್ಲ ಎಂದ ಅವರು ಎಷ್ಟು ಕ್ರಮ ಕೈಗೊಳ್ಳಲು ಸಾಧ್ಯವೋ ಅಷ್ಟನ್ನೂ ಮಾಡಲಾಗಿದೆ ಎಂದರು. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಗಳ ಅಧಿಕಾರವಾಗಿದ್ದು , ರೇಲ್ವೇ ಭದ್ರತಾ ಪಡೆಯ ಪಾತ್ರ ಅಲ್ಪ ಎಂದರು.ರಾಜ್ಯಗಳು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದರು. ಆಂಧ್ರ ಪ್ರದೇಶ , ಬಿಹಾರ, ಜಾರ್ಖಂಡ್ , ಪಶ್ಚಿಮ ಬಂಗಾಳ ಒರಿಸ್ಸಾ ಮತ್ತು ಚತ್ತೀಸ್ ಘಡದಲ್ಲಿ ರೈಲುಗಳ ಮೇಲೆ ಹೆಚ್ಚಿನ ದಾಳಿ ನಡೆದಿದೆ ಎಂದರು.

ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಬಂದ್ ಕರೆಯಿಂದಾಗಿ ಹಾಗೂ ಇತರ ಬೆದರಿಕೆಯಿಂದಾಗಿ ಸರಕು ಸಾಗಾಟ, ಪ್ರಯಾಣಿಕರ ಸಾಗಾಟಕ್ಕೆ ಧಕ್ಕೆಯಾಗಿದೆ. ರಾಜಧಾನಿ ಎಕ್ಸ್ ಪ್ರೆಸ್ ಮತ್ತು ಇತರ ಪ್ಯಾಸೆಂಜರ್ ರೈಲುಗಳ ಸುರಕ್ಷತೆ ಮತ್ತು ಭದ್ರತೆಗೆ ಕ್ರಮ ಕೈಗೊಳ್ಳಲಾಗಿದ್ದು, ರಾಜಧಾನಿ ಮತ್ತು ಇತರ ಸೂಪರ್ ಫಾಸ್ಟ್ ರೈಲುಗಳ ವೇಗ ಕಡಿಮೆಗೊಳಿಸುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದರು.

ಕೃಪೆ:ದಟ್ಸ್ ಕನ್ನಡ


Share: