ಭಟ್ಕಳ. ಫೆಬ್ರವರಿ 28: ಜಾತ್ಯತೀತ ಜನತಾದಳದ ಭಟ್ಕಳದ ಘಟಕದ ನೂತನ ಅಧ್ಯಕ್ಷರಾಯ್ಕೆಗೆ ಒಮ್ಮತದ ಅಭಿಪ್ರಾಯ ಮೂಡದ ಹಿನ್ನಲೆಯಲ್ಲಿ ಸದ್ಯಕ್ಕೆ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ಇತ್ತಿಚೆಗೆ ಭಟ್ಕಳದಲ್ಲಿ ಜೆ ಡಿ ಎಸ್ ಅಧ್ಯಕ್ಷರಾಯ್ಕೆಯ ನಿಮಿತ್ತ ಪಕ್ಷದ ಜಿಲ್ಲಾಧ್ಯಕ್ಷ ಪ್ರಮೋದ ಹೆಗಡೆ, ರಾಜ್ಯ ಸಮಿತಿಯ ಉಪಾಧ್ಯಕ್ಷ ಗಣಪಯ್ಯ ಗೌಡ ಸೇರಿದಂತೆ ವಿವಿಧ ಮುಖಂಡರು ಭೇಟಿ ನೀಡಿ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿದ್ದರು. ಸಭೆಯಲ್ಲಿ ಅಧ್ಯಕ್ಷರಾಯ್ಕೆಯ ವಿಷಯ ಪ್ರಸ್ತಾಪಗೊಂಡಾಗ ಮಾವಳ್ಳಿ ಹಾಗೂ ಭಟ್ಕಳದ ಇಬ್ಬರು ಯುವ ಮುಖಂಡರ ಹೆಸರನ್ನು ಕಾರ್ಯಕರ್ತರು ಸೂಚಿಸಿದ್ದಾರೆನ್ನಲಾಗಿದೆ. ಸಭೆಯಲ್ಲಿ ಕೆಲ ಮುಖಂಡರು ಮಾವಳ್ಳಿ ಭಾಗದ ಯುವ ಮುಖಂಡನನ್ನು ಅಧ್ಯಕ್ಷರಾಗಿ ಮಾಡಿ ಎಂದು ಪಟ್ಟು ಹಿಡಿದಿದ್ದರೆ, ಇನ್ನೂ ಕೆಲವರು ಭಟ್ಕಳದ ಯುವ ಮುಖಂಡನಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದರು ಎಂಬುದು ತಿಳಿದು ಬಂದಿದೆ. ಹೀಗಾಗಿ ನೂತನ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಒಮ್ಮತದ ಅಭಿಪ್ರಾಯ ಮೂಡದ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಪ್ರಮೋದ ಹೆಗಡೆ, ಗಣಪಯ್ಯ ಗೌಡ ನಾಲ್ಕು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ತಲಾ ಒಬ್ಬರಂತೆ ಹಾಗೂ ನಗರಕ್ಕೆ ನೂತನವಾಗಿ ಅಧ್ಯಕ್ಷರ ಆಯ್ಕೆಯನ್ನು ಮಾಡಿದ್ದಾರೆ. ತಾಲೂಕು ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಒಮ್ಮತದ ಅಭಿಪ್ರಾಯ ಮೂಡದ ಹಿನ್ನಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಮಾಡದೇ ಹಾಲಿ ಅಧ್ಯಕ್ಷರನ್ನೇ ಮುಂದುವರಿಸಲಾಗಿದೆ. ನೂತನ ಅಧ್ಯಕ್ಷರಾಯ್ಕೆಯ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧ್ಯಕ್ಷರು ಪ್ರತಿ ಜಿಪಂ ಕ್ಷೇತ್ರದಲ್ಲೂ ಸಹ ಪಕ್ಷದ ಸಂಘಟನೆ ಗಟ್ಟಿಕೊಳಿಸುವ ದೃಷ್ಟಿಯಿಂದ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಒಮ್ಮತದ ಅಭಿಪ್ರಾಯದಂತೆ ತಾಲೂಕು ಅಧ್ಯಕ್ಷರಾಯ್ಕೆಯನ್ನು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಭಟ್ಕಳ ಜೆ ಡಿ ಎಸ್‌ನಲ್ಲಿ ಕಡಿಮೆ ಸಂಖ್ಯೆಯಲ್ಲಿ ಮುಖಂಡರಿದ್ದರೂ ಸಹ ಅಧ್ಯಕ್ಷರಾಯ್ಕೆಯ ವಿಷಯಕ್ಕೆ ಸಂಬಂಧಿಸಿದಂತೆ ಒಮ್ಮತದ ಅಭಿಪ್ರಾಯಕ್ಕೆ ಬರಲು ಸಾಧ್ಯವಾಗದೇ ಇರುವುದು ಮಾತ್ರ ವಿಪರ್ಯಾಸವೆನ್ನಬಹುದು. ಅದೇನಿದ್ದರೂ ಸಹ ಸದ್ಯಕ್ಕೆ ಪಕ್ಷದ ಹಾಲಿ ಅಧ್ಯಕ್ಷರ ಖುರ್ಚಿ ಮಾತ್ರ ಗಟ್ಟಿಯಾದಂತಾಗಿದೆ. ನಾಲ್ಕು ಜಿಲ್ಲಾ ಪಂಚಾಯತ್ ಕ್ಷೇತ್ರ ಹಾಗೂ ನಗರಕ್ಕೆ ಹೊಸದಾಗಿ ಅಧ್ಯಕ್ಷರಾಯ್ಕೆ ಮಾಡಿದ್ದು, ನೂತನ ಪದಾಧಿಕಾರಿಗಳು ಈ ಭಾಗದಲ್ಲಿ ಬಿ ಜೆ ಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯವಾಗಿ ಪಕ್ಷವನ್ನು ಹೇಗೆ ಸಂಘಟನೆ ಮಾಡುತ್ತಾರೆ ಎಂಬ ಕುತೂಹಲ ಇದ್ದೇ ಇದೆ.