ಚಿಕ್ಕಮಗಳೂರು, ಡಿಸೆಂಬರ್ 21: ಮೂಡಿಗೆರೆ ತಾಲ್ಲೂಕು ಹೆಸಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಪೂ ನಗರದ ಬಡಾವಣೆಯ ಜನರು ತಾಲ್ಲೂಕು ಕಛೇರಿ ಮುಂಭಾಗದಲ್ಲಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರಂಭಿಸಿರುವ ಸರಧಿ ಅಮರಣಾಂತ ಉಪವಾಸ ಸತ್ಯಾಗ್ರಹವು ಮೂರನೇ ದಿನವಾದ ಸೋಮವಾರವೂ ಮುಂದುವರಿದಿದ್ದು ಒಟ್ಟು ಐವರು ಅಸ್ವಸ್ಥಗೊಂಡಿದ್ದಾರೆ.
ನಿನ್ನೆ ಧರಣಪ್ಪ ಮತ್ತು ರಮೇಶ್ ಅಸ್ವಸ್ಥರಾಗಿದ್ದರು, ಇಂದು ಇಬ್ಬರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸ್ಥಳಕ್ಕೆ ಬಿ.ಜೆ.ಪಿ. ಮಾಜಿ ಜಿಲ್ಲಾಧ್ಯಕ್ಷ ಎಂ.ಕೆ. ಪ್ರಾಣೇಶ್, ತಹಸೀಲ್ದಾರ್ ಶಿವೇಗೌಡ, ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಹಿತ ಅನೇಕ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬೇಟಿ ನೀಡಿ ಮಾತುಕತೆ ನಡೆಸಿದರು. ಅತಿ ಶೀಘ್ರದಲ್ಲಿ ಗ್ರಾಮದ ಜನರಿಗೆ ಶಾಶ್ವತ ಕುಡಿಯುವ ನೀರು ಹಾಗೂ ವಸತಿ ರಹಿತರಿಗೆ ನಿವೇಶನ ನೀಡುವ ಭರವಸೆ ನೀಡಿ ಮನವೊಲಿಕೆಗೆ ಪ್ರಯತ್ನಿಸಿದರಾದರು ಬಿಗಿ ನಿಲುವು ತಾಳಿರುವ ಗ್ರಾಮಸ್ಥರು ನಿರಸನ ಅಂತ್ಯಗೊಳಿಸಲು ಒಪ್ಪಿಕೊಳ್ಳಲಿಲ್ಲ.
ಬಾಪುನಗರ 2 ನೇ ಕ್ರಾಸ್ ಮತ್ತು ಶಕ್ತಿನಗರದ ಜನರ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಉಳಿದ ಅನೇಕ ಕೊರತೆಗಳು ಗ್ರಾಮಸ್ಥರ ಬಿಗಿ ನಿಲುವಿನ ನಡುವೆ ಸ್ಥಳೀಯ ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಜಟಿಲಗೊಳ್ಳುವ ಮುನ್ಸೂಚನೆ ಘೋಚರಿಸುತ್ತಿದೆ. ದಿನಂಪ್ರತಿ ಉಪವಾಸ ನಿರತರು ಅಸ್ವಸ್ಥರಾಗುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ನೆಲೆಸುವಂತಾಗಿದೆ.