ನವದೆಹಲಿ/ ಬೆಂಗಳೂರು, ನ.೭:ಯಡಿಯೂರಪ್ಪ ಅವರಿಗೆ ಆರು ತಿಂಗಳ ಜೀವದಾನ ನೀಡಿ ತಾವು ಸಾರಿರುವ ಕದನದಿಂದ ಹಿಂದೆ ಸರಿಯುವ ಸೂಚನೆಗಳನ್ನು ರೆಡ್ಡಿ ಸೋದರರು ವರಿಷ್ಠರಿಗೆ ನೀಡಿದ್ದಾರೆ.
ಆದರೆ ಅದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಸಂಪೂರ್ಣ ಶರಣಾಗತಿಯ ಬೆಲೆ ತೆರಬೇಕಿದೆ. ಯಡಿಯೂರಪ್ಪ ಅವರು ಸದ್ಯಕ್ಕೆ ಮುಖ್ಯಮಂತ್ರಿಯಾಗಿ ಮುಂದುವರಿಯುವುದು ನಿಶ್ಚಿತವಾಗಿದ್ದು, ರೆಡ್ಡಿ ಸೋದರರ ಬೇಡಿಕೆಗಳ ಕುರಿತ ಕಡೆಯ ಗಳಿಗೆಯ ಕೊಸರಾಟ ಇಲ್ಲಿ ನಡೆದಿದೆ.
ತಮ್ಮ ಕಡೇ ಬೇಡಿಕೆ ಈಡೇರಿಸಿಕೊಳ್ಳಲು ಇದೇ ಕಡೇ ಅವಕಾಶ ಎಂದು ಬಗೆದಿರುವ ರೆಡ್ಡಿ ಸೋದರರು ಯಡಿಯೂರಪ್ಪ ಕತ್ತಿನ ಮೇಲಿನ ಹಿಡಿತವನ್ನು ಸಡಿಲಿಸಿಯೇ ಇಲ್ಲ. ಸುಖಾಂತ್ಯದ ಶುಭ ಸಮಾಚಾರವನ್ನು ಭಾನುವಾರ ಪತ್ರಿಕಾಗೋಷ್ಠಿ ಕರೆದು ನಿಮಗೆಲ್ಲ ಹೇಳುತ್ತೇವೆ ಎಂದು ಪಕ್ಷದ ವರಿಷ್ಠರಲ್ಲಿ ಒಬ್ಬರಾದ ವೆಂಕಯ್ಯನಾಯ್ಡು ಶನಿವಾರ ರಾತ್ರಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ವೈಷ್ಣೋದೇವಿ ದರ್ಶನ ಬಳಿಕ ಸಂಜೆ ದಿಲ್ಲಿಗೆ ವಾಪಸಾದ ಯಡಿಯೂರಪ್ಪ ಅವರು ನಾಯ್ಡು ಜೊತೆ ೩ ತಾಸು ಚರ್ಚಿಸಿದರು. ಅತ್ತ ಜನಾರ್ದನರೆಡ್ಡಿ ಹಾಗೂ ಬಿ.ಶ್ರೀರಾಮುಲು ತಮ್ಮ ಮಾತೃ ಸ್ವರೂಪಿಯಾದ ಸುಷ್ಮಾ ಸ್ವರಾಜ್ ಬುಲಾವ್ ಮೇರೆಗೆ ರಾತ್ರಿ ೯.೧೫ಕ್ಕೆ ಬೆಂಗಳೂರಿನಿಂದ ದಿಲ್ಲಿಗೆ ವಿಮಾನ ಹತ್ತಿದರು.
ಯಡಿಯೂರಪ್ಪ ಜತೆ ಮಾತನಾಡಿದ ನಂತರ ವೆಂಕಯ್ಯ ಮಾಡಿದ ಪ್ರಕಟಣೆ:
-ಯಡಿಯೂರಪ್ಪ ಅವರಿಗೆ ಶನಿವಾರ ಕೂಡ ದೆಹಲಿಯಲ್ಲಿ ಉಳಿಯಿರಿ ಎಂದು ಹೇಳಿದ್ದೇವೆ. ಭಾನುವಾರ ಎಲ್.ಕೆ.ಆಡ್ವಾಣಿ ಅವರ ಹುಟ್ಟಿದ ಹಬ್ಬ. ಹೌದು ಬಗೆಹರಿಯಬೇಕಿರುವ ವಿಷಯಗಳು ಇರುವುದು ನಿಜ. ಅವುಗಳನ್ನು ಸೌಹಾರ್ದಯುತವಾಗಿ ಬಗೆಹರಿಸುತ್ತೇವೆ.
-ಯಾರೂ ನಮ್ಮ (ವರಿಷ್ಠರ) ಮೇಲೆ ಒತ್ತಡ ಹೇರುವುದಾಗಲಿ, ಬಲವಂತ ಮಾಡುವುದಾಗಲಿ ಸಾಧ್ಯವಿಲ್ಲ. ತಮ್ಮ ಬೆಂಬಲಿಗ ಶಾಸಕರ ಜೊತೆ ಸಮಾಲೋಚನೆ ಮಾಡಿ ವಾಪಸು ದೆಹಲಿಗೆ ಬಂದು ತಿಳಿಸುತ್ತೇನೆ ಎಂದು ಜನಾರ್ದನರೆಡ್ಡಿ ಶುಕ್ರವಾರ ಸಂಜೆ ಹೈದರಾಬಾದ್- ಬೆಂಗಳೂರಿಗೆ ತೆರಳಿದರು.
- ಅವರು ವಾಪಸು ಬಂದ ಮೇಲೆ ವರಿಷ್ಠ ಮಂಡಳಿ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ. ಅದೇ ಅಂತಿಮ. ಒಟ್ಟಿನಲ್ಲಿ ಈ ಬಿಕ್ಕಟ್ಟು ನಾಯಕತ್ವ ಬದಲಾವಣೆ ಇಲ್ಲದೆ ಸುಖಾಂತ್ಯ ಕಾಣಲಿದೆ.
-ಆರು ಅಂಶಗಳ ರಾಜೀ ಸೂತ್ರದ ಸುದ್ದಿಗಳಿಗೆ ಆಧಾರವೇ ಇಲ್ಲ. ಕೇವಲ ಊಹಾಪೋಹ.
ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದ್ದು:
-ಭಾನುವಾರ ಆಡ್ವಾಣಿ ಅವರ ಹುಟ್ಟು ಹಬ್ಬದ ಕಾರಣ ಶನಿವಾರ ಇಲ್ಲಿಯೇ ಉಳಿಯುತ್ತಿದ್ದೇನೆ. ಬಿಕ್ಕಟ್ಟು ಬಗೆಹರಿಯುವ ಭರವಸೆ ನನಗಿದೆ.
ಮುಖ್ಯಮಂತ್ರಿ ಶನಿವಾರ ಸಂಜೆ ಬೆಂಗಳೂರಿಗೆ ಹಿಂತಿರುಗಿ ರೆಡ್ಡಿ ಸೋದರರ ಬೇಡಿಕೆಗಳನ್ನು ಈಡೇರಿಸಬೇಕು...ಒಂದೆರಡು ದಿನಗಳಲ್ಲಿ ಬಿಕ್ಕಟ್ಟು ಶಮನವಾಗಿರುವ ಘೋಷಣೆಯನ್ನು ವರಿಷ್ಠರು ಇಲ್ಲಿಂದ ಮಾಡಬೇಕು ಎಂಬುದು ವರಿಷ್ಠ ವಲಯದಿಂದ ಮೂಡಿ ಬಂದಿದ್ದ ತಿಳಿವಳಿಕೆ.
ಹಾಗೆಯೇ ಯಡಿಯೂರಪ್ಪ ರಾತ್ರಿ ಎಂಟೂ ಮುಕ್ಕಾಲರ ಬೆಂಗಳೂರು ವಿಮಾನ ಹತ್ತಲು ತಯಾರಾಗಿದ್ದರು. ಕಡೆಯ ಗಳಿಗೆಯಲ್ಲಿ ವರಿಷ್ಠ ವೆಂಕಯ್ಯನಾಯ್ಡು ಮನೆಯಿಂದ ಬಂದ ಕರೆಯ ಕಾರಣ ಮುಖ್ಯಮಂತ್ರಿ ದೆಹಲಿ ವಾಸ್ತವ್ಯ ಇಂದೂ ಮುಗಿಯಲಿಲ್ಲ.
ಖಾತೆಗಳ ಬಗ್ಗೆ ಚರ್ಚೆ:ಶೋಭಾ ಮಾತ್ರವೇ ಅಲ್ಲದೆ ಇನ್ನೂ ನಾಲ್ಕೈದು ಮಂದಿ ಸಚಿವರನ್ನು ಕೈ ಬಿಡುವ ಮತ್ತು ಗೃಹ, ಅರಣ್ಯ, ಗಣಿ ಮುಂತಾದ ಸಚಿವ ಖಾತೆಗಳ ಕುರಿತ ಚೌಕಾಶಿ ಶನಿವಾರ ರಾತ್ರಿ ನಾಯ್ಡು ಮಧ್ಯಸ್ಥಿಕೆಯಲ್ಲಿ ನಡೆಯಿತು.
ಈ ಮಾತುಕತೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಡಿ.ವಿ.ಸದಾನಂದಗೌಡ ಹಾಗೂ ಗೃಹಸಚಿವ ಡಾ.ವಿ.ಎಸ್.ಆಚಾರ್ಯ ಪಾಲ್ಗೊಂಡಿದ್ದರು.
ತಮ್ಮ ನೆಚ್ಚಿನ ದೈವ ಜಮ್ಮುವಿನ ಬಳಿಯ ವೈಷ್ಣೋದೇವಿ ದರ್ಶನ ಮುಗಿಸಿಕೊಂಡು ರಾತ್ರಿ ಎಂಟೂ ಮುಕ್ಕಾಲರ ಬೆಂಗಳೂರು ವಿಮಾನ ಹತ್ತಲೆಂದು ತಯಾರಾಗಿದ್ದರು ಯಡಿಯೂರಪ್ಪ.
ದೆಹಲಿ ಸೇರುವ ಹೊತ್ತಿನಲ್ಲಿ ವೆಂಕಯ್ಯ ಮನೆಗೆ ಬನ್ನಿ ಎಂಬ ಕರೆಯ ಮೇರೆಗೆ ಆರೂವರೆಗೆ ಧಾವಿಸಿದ ಯಡಿಯೂರಪ್ಪ ಅಲ್ಲಿಯೇ ಬಂದಿಯಾಗಿದ್ದಾರೆ. ಬೆಂಗಳೂರು ವಿಮಾನ ಹಿಡಿಯುವ ವೇಳೆ ಮೀರಿ ಹೋಗಿ ಅವರು ಇಲ್ಲಿಯೇ ತಂಗುವುದು ಅನಿವಾರ್ಯ.
ಹೊಂದಾಣಿಕೆ ಮಾಡಿಕೊಳ್ಳಿ:ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳಿ...ಆದರೆ ಯಡಿಯೂರಪ್ಪ ಅವರನ್ನು ಬಲಿಕೊಡುವ ಹಂತಕ್ಕೆ ಹೋಗುವ ಅಗತ್ಯ ಇಲ್ಲ ಎಂಬುದು ಶನಿವಾರ ಸಂಜೆ ಬಿಜೆಪಿಯ ಮಾತೃಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಹೊರಟಿರುವ ಸೂಚನೆ.
’ರೆಡ್ಡಿ ಸೋದರರನ್ನು ಇದಕ್ಕಿಂತ ಹೆಚ್ಚು ಪ್ರೋತ್ಸಾಹಿಸುವುದು ತರವಲ್ಲ ಎಂಬುದು ನಮಗೆಲ್ಲ (ವರಿಷ್ಠರು) ಮನವರಿಕೆಯಾಗಿದೆ. ಯಡಿಯೂರಪ್ಪ ಕರ್ನಾಟಕದಲ್ಲಿ ನಮ್ಮ ಪಕ್ಷದ ಸಾರ್ವಜನಿಕ ಮುಖ. ಗರಿಕೆ ಬೇರು ಮಟ್ಟದಿಂದ ಪಕ್ಷದಲ್ಲೇ ಬೆಳೆದು ಬಂದವರು. ಹೀಗಾಗಿ ಅವರನ್ನು ತ್ಯಾಗ ಮಾಡುವ ಪ್ರಶ್ನೆಯೇ ಇಲ್ಲ’ ಎಂದು ವರಿಷ್ಠರೊಬ್ಬರು ಸುದ್ದಿಗಾರರಿಗೆ ತಿಳಿಸಿದರು.
ರೆಡ್ಡಿ ಸೋದರರು ಮತ್ತು ವರಿಷ್ಠ ಮಂಡಳಿಯ ಬಹುತೇಕ ತಲೆಯಾಳುಗಳು ಯಡಿಯೂರಪ್ಪ ಅವರಿಂದ ಸಂಪೂರ್ಣ ಶರಣಾಗತಿ ಬಯಸಿದ್ದಾರೆ...ಆದರೆ ಸಾಷ್ಟಾಂಗ ಪ್ರಣಾಮಕ್ಕೆ ಮುಖ್ಯಮಂತ್ರಿ ತಯಾರಿಲ್ಲ.
ಬಿಗಡಾಯಿಸಿರುವ ರಾಜ್ಯ ಬಿಜೆಪಿ ಬಿಕ್ಕಟ್ಟು ಬಗೆಹರಿಯದೆ ದೆಹಲಿಯ ದಂಡನಾಯಕರ ಪಡಸಾಲೆಗಳಲ್ಲಿ ಇನ್ನೂ ಗಿರಕಿ ಹೊಡೆಯುತ್ತಿರುವ ಹಿಂದಿನ ಮುಖ್ಯ ಮರ್ಮವಿದು. ಕಳೆದ ಶನಿವಾರ ದೆಹಲಿಗೆ ಕಾಲಿಟ್ಟ ರಾಜ್ಯ ಬಿಜೆಪಿ ಬಿಕ್ಕಟ್ಟು ಈ ಶನಿವಾರ ಬಂದರೂ ಬಗೆಹರಿಯಲಿಲ್ಲ. ರೆಡ್ಡಿ ಸೋದರರು ತರುತ್ತಿರುವ ಹೊಸ ಹೊಸ ಬೇಡಿಕೆಗಳನ್ನು ಮನ್ನಿಸಿ ಯಡಿಯೂರಪ್ಪ ಸಂಪೂರ್ಣ ಶರಣಾಗತಿಗೆ ಒಪ್ಪಿದ ಕ್ಷಣದಲ್ಲಿ ಭಿನ್ನಮತದ ಬೆಂಕಿ ಶಮನಗೊಳ್ಳಲಿದೆ.
ರೆಡ್ಡಿಯ ಸಪ್ತ ಬೇಡಿಕೆಗಳು
೧ ಶೋಭಾ ಸಂಪುಟದಲ್ಲಿರಬಾರದು. ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪದವಿಯನ್ನೂ ನೀಡಬಾರದು.
೨ ಸಂತ್ರಸ್ತರಿಗೆ ೫೫೦೦೦ ಮನೆ ನಿರ್ಮಾಣ ಕಾಮಗಾರಿ ತಕ್ಷಣವೇ ಆರಂಭಿಸಬೇಕು.
೩ಶೋಭಾ ಅಲ್ಲದೆ ಇನ್ನೂ ಕೆಲ ಸಚಿವರನ್ನು ಸಂಪುಟದಿಂದ ತೆಗೆದು, ಅವರದೇ ಜಾತಿಯವರನ್ನು ಸಂಪುಟಕ್ಕೆ ಸೇರಿಸಬೇಕು.
೪ನಿಗಮ- ಮಂಡಳಿಗಳಲ್ಲಿ ತಮ್ಮ ಬೆಂಬಲಿಗರಿಗೆ ಸ್ಥಾನ ಬೇಕು. ನಾವು ಯಾರನ್ನು ಹೇಳುತ್ತೇವೋ ಅವರನ್ನೇ ನೇಮಿಸಬೇಕು.
೫ಸಮನ್ವಯ ಸಮಿತಿ ರಚಿಸಬೇಕು. ಅದಕ್ಕೆಅನಂತಕುಮಾರ್ ಅಥವಾ ಸುಷ್ಮಾ ಅಧ್ಯಕ್ಷರಾಗಬೇಕು. ಸರ್ಕಾರದ ಎಲ್ಲಾ ಮುಖ್ಯ ನಿರ್ಧಾರ ಅಲ್ಲೇ ಆಗಬೇಕು.
೬ತಮ್ಮ ಬೆಂಬಲಿಗರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಕೊಡಬೇಕು.
೭ತಿಂಗಳಿಗೊಮ್ಮೆ ಶಾಸಕರ ಸಭೆ ಕರೆದು ಕ್ಷೇತ್ರಗಳ ಬಗ್ಗೆ ಸಾಮೂಹಿಕ ಚಿಂತನೆ
ನಡೆಸಬೇಕು.
ಪ್ರತಿಕ್ರಿಯೆಗಳು
ಚುನಾಯಿತ ಪ್ರತಿನಿಧಿಗಳಾಗಿ ಜನರ ಕಷ್ಟ, ಸುಖಗಳಿಗೆ ಸ್ಪಂದಿಸದಿದ್ದ ಮೇಲೆ ನೀವು (ಬಿಜೆಪಿ ಸಚಿವರು) ಯಾಕಿನ್ನೂ ಅಧಿಕಾರದಲ್ಲಿ ಇದ್ದೀರಿ?
-ನ್ಯಾ|ಸಂತೋಷ್ ಹೆಗ್ಡೆ
ಇನ್ನು ೬ ತಿಂಗಳು ಅಥವಾ ೧ ವರ್ಷದಲ್ಲಿ ಸರ್ಕಾರ ಪತನ ಆಗುತ್ತದೆ. ಆಪರೇಷನ್ ಕಮಲ ನಡೆಸಿದ ಇವರು ಅಧಿಕಾರದಲ್ಲಿ ಇರಲು ನಾಲಾಯಕ್.
-ಸಿದ್ದರಾಮಯ್ಯ
ಸೌಜನ್ಯ: ಕನ್ನಡಪ್ರಭ