ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ರೈತರಿಗೆ ಕೋಳ - ಬಂಡವಾಳಗಾರರಿಗೆ ಹಾರ

ರೈತರಿಗೆ ಕೋಳ - ಬಂಡವಾಳಗಾರರಿಗೆ ಹಾರ

Fri, 15 Jan 2010 03:18:00  Office Staff   S.O. News Service

`ಪಾಪದ ಕೊಡ ತುಂಬಿದೆ'. `ವಿನಾಶಕಾಲೇ ವಿಪರೀತ ಬುದ್ದಿ' ಎಂಬಂತಹ ಗಾದೆ ಮತ್ತು ವೇದದ ಮಾತುಗಳು ಮತ್ತೆ ಮತ್ತೆ ಕೇಳುತ್ತಿರುವುದು ರಾಜ್ಯದ ಬಿಜೆಪಿ ಸರಕಾರದ ಬಗ್ಗೆ ಜನತೆಯು ನೀಡುತ್ತಿರುವ ನಿಟ್ಟುಸಿರಿನ ಅಂಕಗಳು. ಈ ಸರಕಾರಕ್ಕೆ ಮಿತ್ತಲ್, ರಿಲೆಯನ್ಸ್, ಷೆಲ್, ಖೇಣಿಯಂತಹ ಉದ್ಯಮಿಗಳು ನೀಡುವ ಶಹಬ್ಬಾಸ್ನಿಂದ ಆರ್.ಎಸ್.ಎಸ್.ಗೂ ಬಿಜೆಪಿಗೂ  ಖುಷಿಯಾಗುತ್ತಿರ ಬಹುದು. ಆದರೆ ನಾಡಿನ ಜನಸಾಮಾನ್ಯರು ನಿತ್ಯವೂ ಅನುಭವಿಸುತ್ತಿರುವ ಸಂಕಷ್ಟ ಅಸಹನೀಯತೆ, ಆಕ್ರೋಶಗಳೇ ಸರಕಾರದ ಸಾಧನೆ ಅಳೆಯುವ ನಿಜವಾದ ಮಾನದಂಡಗಳು. ಆದರೆ ಸತ್ಯದ ಮೇಲೆ ಹೊಡೆಯುವಂತೆ ಸರಕಾರ ಅಭಿವೃದ್ಧಿಯ ಮೈಲುಗಲ್ಲುಗಳನ್ನು ತೋರಿಸುತ್ತಿದೆ. ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಂಡಂತೆ, ನಂತರ ಯಥಾರೀತಿ ಆಕ್ರಮಣದ ಅವನತಿಯ ಹಾದಿಯಲ್ಲಿ ನಡೆಯುತ್ತದೆ. ರಾಜ್ಯದಲ್ಲಿ ಈಗ ನಡೆಯುತ್ತಿರುವ ವಿದ್ಯಮಾನಗಳೇ ಸರಕಾರದ ದ್ರೋಹವನ್ನು ಬಿಚ್ಚಿಡುತ್ತವೆ.

ದಮನ

`ಉಳುವಾ ಯೋಗಿಯ ನೋಡಲ್ಲಿ' ಎನ್ನುವ ಕುವೆಂಪುರವರ `ನೇಗಿಲಯೋಗಿ'ಯ ಹಾಡನ್ನು ನಾಡಗೀತೆಯಾಗಿ ಹಾಡಿಸುತ್ತಿರುವ ಸರಕಾರ (ಕುವೆಂಪು ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಹೊತ್ತಿನಲ್ಲೇ) ನಾಡಿನ ರೈತರನ್ನೇ, ಕೃಷಿಯನ್ನೇ ನಿರ್ಮೂಲನ ಮಾಡಲು ಯೋಜನೆ ಮುಂದುವರಿಸಿದೆ. ಗೊಬ್ಬರದ ವಿಷಯವಾಗಿಯೇ, ಕಬ್ಬಿನ ಬೆಲೆ ನಿಗದಿಗೋ, ತಮ್ಮ ಕೃಷಿ ಭೂಮಿ ವಶಪಡಿಸಿಕೊಳ್ಳಬಾರದೆಂದೂ ಉದ್ಯೋಗ ರಕ್ಷಿಸಿ, ಬದುಕು ಉಳಿಸಿ  ರೈತರು ಎಂದು ಕಾರ್ಮಿಕರು ಅನಿವಾರ್ಯವಾಗಿ ಬೀದಿಗಿಳಿಯುವಂತೆ ಮಾಡಿದ ಸರಕಾರವೇ ದಮನದ ನೀತಿ ಅನುಸರಿಸುತ್ತಿದೆ.

ಪ್ರತಾಪಗಳು!

ಸೆಪ್ಟೆಂಬರ್ನಲ್ಲಿ ಅಸಂಘಟಿತ ಕಾರ್ಮಿಕರನ್ನು ಬಡಿದದ್ದಾಯಿತು. ಕಬ್ಬಿಗೆ ನ್ಯಾಯಯುತ ಬೆಲೆ ಹಾಗೂ ಬಾಕಿ ಹಣ ನೀಡಬೇಕೆಂದು ಕೇಳಿದ ಚಾಮರಾಜನಗರದ ರೈತರ ಮೇಲೆ ಸ್ವತ: ಜಿಲ್ಲಾಧಿಕಾರಿಯೇ ಲಾಠಿ ಹಿಡಿದು ಪೊಲೀಸರನ್ನು ಛೂ ಬಿಟ್ಟಿದ್ದಾಯ್ತು. ಬಳ್ಳಾರಿ ವಿಮಾನ ನಿಲ್ದಾಣಕ್ಕೆಂದು ಭೂಮಿ ಸ್ವಾಧೀನ ವಿರೋಧಿಸಿ ಹೋರಾಡುತ್ತಿರುವವರ ಮೇಲೆ ದಬ್ಬಾಳಿಕೆ ನಡೆದೇ ಇದೆ. ಹಾಗೇ ದಾವಣಗೆರೆಯ ಬಳಿಯ ಭಾತಿ ಹಳ್ಳಿಯ  ರೈತರ ಕೃಷಿ ಜಮೀನನ್ನು ಅಭಿವೃದ್ಧಿ ಪ್ರಾಧಿಕಾರ ಸ್ವಾದೀನಪಡಿಸಿಕೊಳ್ಳುವುದರ ವಿರುದ್ಧ ಪ್ರತಿಭಟಿಸಿದ ರೈತರನ್ನು ಚಚ್ಚಿ 144 ರೈತರನ್ನು (ಮಹಿಳೆ, ಮುದುಕರನ್ನು) ಜೈಲಿಗಟ್ಟಲಾಯಿತು. ಖೇಣಿಯ ನೈಸ್ ರಸ್ತೆಯಲ್ಲಿ ನಾಗರೀಕರ ಓಡಾಟಕ್ಕೆ ಸೇತುವೆ, ಭರವಸೆಯಂತೆ ಸೈಟ್ ನೀಡಿಕೆ ಇತ್ಯಾದಿಗಳಿಗಾಗಿ ಹೋರಾಟ ನಡೆಸುತ್ತಿರುವ ರೈತರ ಮೇಲೆ ದಬ್ಬಾಳಿಕೆ ನಡೆಸಿ ಮುಖಂಡರನ್ನು ಒಳಗೊಂಡು ರೈತರನ್ನು ಜೈಲಿಗೆ ಹಾಕಲಾಗಿದೆ. ಹೀಗೆ ಹೊಸ ವರುಷದ ಹೊಸ್ತಿಲಿನಲ್ಲೇ `ರೈತ ಮುಖ್ಯಮಂತ್ರಿ' ಯಡಿಯೂರಪ್ಪನವರ ಪ್ರತಾಪಗಳು ಅನಾವರಣ!

ಬೊಗಳೆ

`ರೈತರನ್ನು ಮುಟ್ಟೀರಿ ಎಚ್ಚರಿಕೆ' ಎಂದು ವಿಧಾನಸೌಧದಲ್ಲಿ ಅಧಿಕಾರಿಗಳ ವಿರುದ್ಧ `ಗುಡುಗಿದ' ಮುಖ್ಯಮಂತ್ರಿಗಳದ್ದು ಕೇವಲ ಬೊಗಳೆ ಪೌರುಷ ಎಂದು ತಿಳಿಯಲು ಬಹಳ ಕಾಲ ಬೇಕಾಗಲಿಲ್ಲ. ಬಂಧಿತರಾಗಿ ಧಾರವಾಡದ ಜೈಲಿನಲ್ಲಿರುವ ದಾವಣಗೆರೆಯ ವಯಸ್ಸಾದ ಅಸ್ವಸ್ಥ ರೈತರೊಬ್ಬರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಸರಕಾರ ಕ್ರಿಮಿನಲ್ ಅಪರಾಧಿಯೊಂದಿಗೆ ಅವರ ಕೈಗೆ ಕೋಳ ಹಾಕಿ ತನ್ನ ಕ್ರಿಮಿನಲ್ ರೈತ ದ್ವೇಷವನ್ನು ತೋರಿಸಿದೆ. ಭಯೋತ್ಪಾದಕರು, ಕ್ರೂರ ಕ್ರಿಮಿನಲ್ಗಳೂ, ತಪ್ಪಿಸಿಕೊಂಡು ಹೋಗಬಹುದಾದ ಅಪರಾಧಿಗಳಿಗೆ ಅನಿವಾರ್ಯವಾದರೆ  ತೊಡಿಸಬಹುದೆಂಬ ಕೈಕೋಳವನ್ನು `ನಮ್ಮ ಭೂಮಿ ನಮಗೆ ಉಳಿಸಿ ಬದುಕು ರಕ್ಷಿಸಿ' ಎಂದ ಮುಗ್ದ ರೈತರಿಗೆ ತೊಡಿಸಿ ಅವಮಾನಿಸಿದ್ದು ಆಸ್ಪತ್ರೆಯಲ್ಲಿ ಸೂಕ್ತ ಔಷಧೋಪಾಚಾರವಿಲ್ಲದೇ ಸತಾಯಿಸುತ್ತಿರುವುದು,ದೌರ್ಜನ್ಯದ ಪರಿಯನ್ನು ತೋರಿಸಿದೆ. ಸರಕಾರವು ಹೀಗೆ ಜನರ ಸಂಕಟವನ್ನು ಅವಮಾನಿಸಿ ಅಪಹಾಸ್ಯ ಮಾಡಿದೆ. ಹೀಗಾಗಬಾರದಿತ್ತು ಎಂದು ಮುಖ್ಯಮಂತ್ರಿ ಹಲ್ಲಿಯಂತೆ ಲೊಚಗುಟ್ಟಿದರೆ, ಬಿಜೆಪಿ ವಕ್ತಾರ ಸಿಟಿ ರವಿ ಕೋಳಹಾಕುವುದನ್ನು ಸಮರ್ಥಿಸಿಕೊಂಡಿದ್ದಾರೆ. ಕೋಳ ಹಾಕಿದ ಪೇದೆಗಳನ್ನು ಅಮಾನತ್ತುಗೊಳಿಸುವ ಆದೇಶವನ್ನು ಎಸ್.ಪಿ. ಹೊರಡಿಸಿದ್ದರೆ, ಹೀಗೆ ಆದೇಶ ನೀಡಿದ ಮೇಲಾಧಿಕಾರಿಗಳಿಗೆ ಏನೂ ಮಾಡದೆ  ಸರಕಾರ ಶಹಬ್ಬಾಸ್ ನೀಡುತ್ತಿದೆ.

ಜೈಲಿನಲ್ಲಿರಬೇಕಾದವರು

ಕಾನೂನು ಪಾಲನೆಯ ಬಗ್ಗೆ ಪಾಠ ಒಪ್ಪಿಸುವ ಮಂತ್ರಿಗಳು, ಬಿಜೆಪಿ ನಾಯಕರು ನಿಜವಾದ ಕ್ರಿಮಿನಲ್ಗಳನ್ನು ರಕ್ಷಿಸುತ್ತಿದ್ದಾರೆ. ಜೈಲಿನಲ್ಲಿರಬೇಕಾದ ಕನಿಷ್ಟ ಡಜನ್ಗಿಂತಲೂ ಹೆಚ್ಚು ಇರುವ ರೆಡ್ಡಿ ಸಹೋದರ ಹಾಗೂ ಸಂಗಡಿಗರು ಒಳಗೊಂಡು ಕ್ರಿಮಿನಲ್ ಅಪರಾಧ ಎಸಗಿದ್ದಾರೆ. ನ್ಯಾಯಾಲಯದ ಜಾಮೀನುರಹಿತ ವಾರೆಂಟ್ (ಸಂಡೂರು ನ್ಯಾಯಾಲಯವು ರೆಡ್ಡಿ ಸಹೋದರರಿಗೆ) ಹೊರಡಿಸಿದ್ದರೂ ರಾಜಾರೋಷವಾಗಿ ತಿರುಗಾಡಿಕೊಂಡು ಸರಕಾರದ ಆಯಕಟ್ಟಿನ ಜಾಗದಲ್ಲಿ ಕುಳಿತು ಹುಕುಂ ಚಲಾಯಿಸುತ್ತಿದ್ದಾರೆ. ಪೊಲೀಸರು ಈಗಲೂ ಅವರಿಗಾಗಿ ಹುಡುಕಾಡುತ್ತಲೇ ಇದ್ದಾರೆ. ಎಂತಹ ವಿಷಮಯ, ವಿಚಿತ್ರ!

ಬಿಜೆಪಿ ಸರಕಾರವೆಂದರೆ ಹೀಗೆಯೇ. ಓಟಿಗಾಗಿ ಜನರನ್ನು ಓಲೈಸುತ್ತದೆ. ಅಧಿಕಾರ ಸಿಕ್ಕ ನಂತರ ಕೈಗಾರಿಕೋದ್ಯಮಿ, ವ್ಯಾಪಾರಿಗಳು, ಗಣಿಬೂಗಳ್ಳರನ್ನು ಮುದ್ದಿಸುತ್ತಾ ಜನಸಾಮಾನ್ಯರನ್ನು ಲಾಠಿ ಬೂಟಿನಿಂದ ಒದೆಯುತ್ತದೆ. ಕೋಮುದ್ವೇಷ ಹಬ್ಬಿಸಿ ಒಡೆದು ರಾಜಕಾರಣ ಮಾಡುತ್ತದೆ. ಅದು ಗುಜರಾತ್ ಆಗಿರಲಿ, ರಾಜಸ್ತಾನವೇ ಇರಲಿ, ಮಧ್ಯಪ್ರದೇಶ, ಉತ್ತರ ಪ್ರದೇಶ ಅಥವಾ ಕೇಂದ್ರ ಇದು ಬಿಜೆಪಿ ಸಂಘ ಪರಿವಾರದ ಸುಲಿಗೆಖೋರರ ಪರವಾದ ವರ್ಗನೀತಿ. ಇಂತಹ ನೀತಿಯ ಭಾಗವಾಗಿಯೇ ಬೆಂಗಳೂರಿನ `ಕೊನೆಗಾ' ಕಾರ್ಖಾನೆಯ ಮಹಿಳಾ ಕಾರ್ಮಿಕರು ರಾಜ್ಯ ಸರಕಾರ ಮಧ್ಯ ಪ್ರವೇಶಿಸಬೇಕೆಂದು ಕಾರ್ಮಿಕ ಸಚಿವ ಬಚ್ಚೇಗೌಡರ ಮನೆ ಮುಂದೆ ಪ್ರತಿಭಟನೆ ನಡೆಸಿದಾಗ `ನಿಮ್ಮನ್ನು ನೋಡಿಕೊಳ್ಳುತ್ತೇನೆ ಅದೇನು ಮಾಡಿಕೊಳ್ತೀರೋ ಮಾಡ್ಕಳ್ಳಿ' ಎಂದು ಬೆದರಿಕೆ ಹಾಕಿದ ಮಾತುಗಳು ಕೈಗಾರಿಕಾ ಮಾಲೀಕರನ್ನು ಸಮರ್ಥಿಸುವುದೇ ಆಗಿದೆ. ಮಾತ್ರವಲ್ಲ ಇದಕ್ಕಾಗಿ ಪೊಲೀಸ್ ಬಲ, ಆಡಳಿತ ಯಂತ್ರವನ್ನು ಬಳಸಿದ್ದು ಬಿಜೆಪಿ ಸರಕಾರದ ದುಡಿವ ಜನ ವಿರೋಧಿ ಫ್ಯಾಸಿಸ್ಟ್ ನೀತಿಯೇ ಆಗಿದೆ.

ಇದೇ ಹೊತ್ತಿನಲ್ಲಿ ಇನ್ನೊಂದು ಬೆಳವಣಿಗೆಯನ್ನು ಗಮನಿಸಬೇಕು. ದಾವಣಗೆರೆಯ ರೈತರ ಭೂಮಿ ಸ್ವಾದೀನ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ ಎಂದು, ಭದ್ರಾ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲು ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ. ಆದರೆ ಇವಾವುಗಳಿಗೂ ಖಚಿತ ಭರವಸೆ ಇಲ್ಲ. ಅದೇ ಜಿಲ್ಲೆಯ ಕೃಷಿ ಮಂತ್ರಿ ರವೀಂದ್ರನಾಥ್ ಭೂಸ್ವಾದೀನ ನಿಲ್ಲಿಸುವ ಪ್ರಶ್ನೆಯೇ ಇಲ್ಲವೆಂದು ಘೋಷಿಸಿದ್ದಾರೆ. ಅಲ್ಲಿ ದೆಹಲಿಯಲ್ಲಿ ಪಂಚೆ, ಶಾಲು ಮೂಲೆಗೆಸೆದ ರೈತನ ಮಗ ಯಡಿಯೂರಪ್ಪ ಕಾರ್ಪೋರೇಟ್ ಶೈಲಿಯಲ್ಲಿ ಸೂಟು ಬೂಟು ಧರಿಸಿ ಗುತ್ತೇದಾರಿ ಬಂಡವಾಳಗಾರರೊಂದಿಗೆ ಹಸ್ತ ಲಾಘವ ಮಾಡಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ನೆಲ, ಜಲ ಮತ್ತು ಸಕಲ ಸೌಲಭ್ಯಗಳನ್ನು ಧಾರೆ ಎರೆಯುವುದಾಗಿ ಕೆಂಪು ಹಾಸಿನ ಅಭಯ ನೀಡಿದ್ದಾರೆ. ಬೃಹತ್ ಉಕ್ಕು ಉದ್ಯಮಿ ಮಿತ್ತಲ್ ಕಂಪನಿಯು ಹೂಡುವ 32 ಸಾವಿರ ಕೋಟಿ ಬಂಡವಾಳದ ಕೈಗಾರಿಕೆಗೆ ಬಳ್ಳಾರಿ ಅಥವಾ ಬಾಗಲಕೋಟೆ ಬಳಿ 4000 ಎಕರೆ ಜಮೀನು ನೀಡುವುದಾಗಿ ಖಚಿತ ಭರವಸೆ ನೀಡಿದ್ದಾರೆ. ಇಂತಹ ಹಲವು ಕಂಪನಿಗಳಿಗೆ ಮತ್ತು ಭೂ ದಂಧೆಗಾರರಿಗೆ ಅಭಿವೃದ್ಧಿಯ ಹೆಸರಿನಲ್ಲಿ  5 ಲಕ್ಷ ಎಕರೆ ಭೂಮಿ ಸ್ವಾದೀನಪಡಿಸಿಕೊಳ್ಳುವ ನಿರ್ಧಾರವನ್ನು ಸರಕಾರ ಪ್ರಕಟಿಸಿ ಆಗಿದೆ. ಈಗ 1 ಲಕ್ಷದ 38 ಸಾವಿರದ 322 ಕೋಟಿ  ರೂ.ಗಳ ಬಂಡವಾಳ ಹೂಡಲು ಮುತುವರ್ಜಿ ಆರಂಭವಾಗಿದೆ. ಜೂನ್ ತಿಂಗಳಲ್ಲಿ ನಡೆವ ಬಂಡವಾಳಗಾರರ ಸಮಾವೇಶದಲ್ಲಿ ಇನ್ನೂ ಹೊಸ ನಿರ್ಧಾರಗಳು ಹೊರಬರಲಿವೆ.

ಇಲ್ಲಿ ಕೈಗಾರಿಕೆ ಅಭಿವೃದ್ಧಿಯನ್ನು ವಿರೋಧಿಸಬೇಕಿಲ್ಲ. ಆದರೆ ಅವುಗಳ ನಿರ್ವಹಣೆ, ಸಂಪನ್ಮೂಲ ಪರಿಣಾಮ ಹೇಗೆ? ಅದರ ಯಾತನೆ ಯಾರಿಗೆ? ಯಾರನ್ನು ಬಲಿಗೊಟ್ಟು ಯಾರನ್ನು ಬಲಿಸುತ್ತದೆ? ಯಾರ ಹಿತಗಳನ್ನು ಅದು ಕಾಯುತ್ತದೆ ಎಂಬುದು ಮುಖ್ಯ. ಬಿಜೆಪಿ ಸರಕಾರದ ನೀತಿ, ನಡೆ ನುಡಿ ನೋಡಿದರೆ ಅದು ಕಾಯುವುದು ಜನರ, ರೈತ ಕೂಲಿಕಾರ ಕಾರ್ಮಿಕರ ಹಿತವನ್ನಲ್ಲ ಎಂಬುದು ಸ್ಪಷ್ಟ. ಅಂದರೆ ಸುಲಿಗೆಖೋರರ ಹಿತಕಾಯಲು ಇನ್ನು ಮುಂದೆ ಇನ್ನೂ ಅಂತಹ ದೌರ್ಜನ್ಯಗಳು, ಸಂಕಷ್ಟಗಳು ಕಾದಿವೆ ಎಂದರ್ಥ. ಅದಕ್ಕಾಗಿ ಅವನ್ನು ಎದುರಿಸುವ ಸಂಕಲ್ಪ  ಜನ ಚಳುವಳಿಯ ಸಮರದ ಸಿದ್ಧತೆ ಆರಂಭಗೊಳ್ಳಬೇಕು ಮಾತ್ರವಲ್ಲ ಹಲವು ಪಟ್ಟು ಹೆಚ್ಚಬೇಕು ಎಂದೂ ಅರ್ಥ.  ಹೀಗೆ ಹೊಸ ವರ್ಷ ತರಲಿದೆ ಸಂಘರ್ಷ.

 

- ಗುರುಶಾಂತ್  

 

ಸೌಜನ್ಯ: ಜನಶಕ್ತಿ 


Share: