ಪೋರ್ಟ್-ಒ-ಪ್ರಿನ್ಸ್/ವಾಷಿಂಗ್ಟನ್:ಎರಡು ಶತಮಾನದಲ್ಲೇ ಭೀಕರ ಎನ್ನಬಹುದಾದ ಭೂಕಂಪ ಅಮೆರಿಕದ ದಕ್ಷಿಣಕ್ಕಿರುವ ಕೆರಿಬಿಯನ್ ರಾಷ್ಟ್ರ ಹೈಟಿಯಲ್ಲಿ ಬುಧವಾರ ಸಂಭವಿಸಿದೆ. ರಿಕ್ಟರ್‌ಮಾಪಕದಲ್ಲಿ ಭೂಕಂಪದ ತೀವ್ರತೆ 7.3 ರಷ್ಟಿತ್ತು. ಭೂಕಂಪಕ್ಕೆ 200ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಹೈಟಿ ರಾಜಧಾನಿ ಪೋರ್ಟ್- ಒ- ಪ್ರಿನ್ಸ್‌ನಲ್ಲಿನ ೧೨ ಲಕ್ಷ ಜನರು ಭೂಕಂಪದ ಹೊಡೆತಕ್ಕೆ ಒಳಗಾಗಿದ್ದು, ಇದುವರೆಗೆ 200ಕ್ಕೂ ಹೆಚ್ಚು ಜನರ ಸಾವು ದೃಢಪಟ್ಟಿದೆ. ಆದರೆ, ಕಟ್ಟಡಗಳ ಅವಶೇಷಗಳ ನಡುವೆ ಜನರು ಸಿಲುಕಿದ್ದು ಸಾವಿನ ಸಂಖ್ಯೆ ಸಾವಿರ ಗಡಿ ದಾಟುವ ಸಾಧ್ಯತೆ ಇದೆ. ಅಪಾರ ಪ್ರಮಾಣದ ಆಸ್ತಿ ಮತ್ತು ಜೀವಹಾನಿಯಾಗಿರುವುದು ಸತ್ಯ ಎಂದು ಹೈಟಿ ಪ್ರೆಸ್ ನೆಟ್‌ವರ್ಕ್(ಎಚ್‌ಪಿಎನ್) ವರದಿ ಮಾಡಿದೆ.
- ೪.೫೫ಕ್ಕೆ ಕಂಪನ: ಹೈಟಿಯ ಪೋರ್ಟ್-ಒ-ಪ್ರಿನ್ಸ್ ನಗರ ಕೇಂದ್ರೀಕೃತವಾಗಿ ಮೊದಲು ಭೂಮಿ ಕಂಪಿಸಿದ್ದು ೪.೫೫ಕ್ಕೆ. ನಂತರ ರಿಕ್ಟರ್‌ಮಾಪಕದಲ್ಲಿ ಭೂಕಂಪದ ತೀವ್ರತೆ ೫.೯, ೫.೫ ದಾಖಲಾಗಿ ೭.೩ರವರೆಗೆ ತಲುಪಿತು ಎಂದು ವಾಷಿಂಗ್ಟನ್‌ನ ಹಮಾಮಾನ ಕೇಂದ್ರ ತಿಳಿಸಿದೆ. ಭೂಕಂಪದ ತೀವ್ರತೆ ೧೦ ಕಿ.ಮೀ.ವರೆಗೂ ಪಸರಿಸಿತ್ತು. ಇದರಿಂದಾಗಿ ಬಹುತೇಕ ಬೃಹತ್ ಕಟ್ಟಡಗಳು ಧ್ವಂಸವಾಗಿವೆ.
- ವಿಶ್ವಸಂಸ್ಥೆ ಕಚೇರಿ ಧ್ವಂಸ: ಹೈಟಿಯಲ್ಲಿರುವ ವಿಶ್ವಸಂಸ್ಥೆಯ ಕಚೇರಿ ಸಂಪೂರ್ಣವಾಗಿ ಧ್ವಂಸವಾಗಿದ್ದು, ಹೆಚ್ಚಿನ ಪ್ರಮಾಣದ ಹಾನಿಯಾಗಿರುವ ಸಾಧ್ಯತೆ ಇದೆ. ಹೈಟಿ ಶಾಂತಿಪಾಲನೆಗಾಗಿ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯನ್ನು ನಿಯೋಜಿಸಲಾಗಿತ್ತು. ಹೀಗಾಗಿ ಈ ದುರ್ಘಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಂತಿಪಾಲಕರೂ ಕೂಡಾ ಸತ್ತಿರುವ ಸಾಧ್ಯತೆ ಇದೆ. ಈಗಾಗಲೇ ಚೀನಾದ ೮, ಜೋರ್ಡಾನ್‌ನ ೩ ಶಾಂತಿಪಾಲಕ ಯೋಧರು ಸತ್ತಿರುವುದು ಖಚಿತವಾಗಿದೆ. ಅಲ್ಲದೆ, ಟ್ಯುನೀಷಿಯನ್ ಶಾಂತಿಪಾಲನಾ ಪಡೆ ಸಿಬ್ಬಂದಿ ಕಾಣೆಯಾಗಿದ್ದಾರೆ.









-ಧರೆಗುರುಳಿದ ಪ್ರಮುಖ ಕಟ್ಟಡಗಳು: ಪೋರ್ಟ್ ಒ ಪ್ರಿನ್ಸ್‌ನಲ್ಲಿರುವ ಪ್ರಮುಖ ಕಟ್ಟಡಗಳೆಲ್ಲವೂ ಭೂ ಕಂಪನಕ್ಕೆ ಧರೆಗೆ ಉರುಳಿವೆ. ಇವುಗಳಲ್ಲಿ ವಿಶ್ವಸಂಸ್ಥೆಯ ಕಚೇರಿ, ಅಧ್ಯಕ್ಷರ ಅರಮನೆ, ಬಹುತೇಕ ಸರ್ಕಾರಿ ಕಚೇರಿ ಕಟ್ಟಡಗಳು, ಹೊಟೇಲ್‌ಗಳು, ಪ್ರವಾಸಿ ಕೇಂದ್ರಗಳು, ಆಸ್ಪತ್ರೆ ಸೇರಿವೆ.
- ಭಾರತೀಯರು ಸುರಕ್ಷಿತ
ಹೈಟಿಯಲ್ಲಿ ೨೦೦ಕ್ಕೂ ಹೆಚ್ಚು ಭಾರತೀಯರು ಸುರಕ್ಷಿತವಾಗಿದ್ದಾರೆ. ಇವರಲ್ಲಿ ೧೪೧ ಮಂದಿ ಶಾಂತಿಪಾಲನಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ವಕ್ತಾರ ರೋಹಿತ್ ಕಟಿಯಾರ್ ಹೇಳಿದ್ದಾರೆ. ಹೀಗಿದ್ದಾಗಲೂ, ಉಳಿದ ೫೦ ಮಂದಿಯ ಸುರಕ್ಷತೆಯ ಮಾಹಿತಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸೌಜನ್ಯ: ಕನ್ನಡಪ್ರಭ