ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ರಾಜ್ಯದಲ್ಲಿ ನೂತನ ಪಿಂಚಣಿ ಯೋಜನೆ - ಅರವತ್ತು ಸಾವಿರ ಸರ್ಕಾರಿ ಕಾರ್ಮಿಕರ ಪಾಲಿಗೆ ವರದಾನ

ಬೆಂಗಳೂರು: ರಾಜ್ಯದಲ್ಲಿ ನೂತನ ಪಿಂಚಣಿ ಯೋಜನೆ - ಅರವತ್ತು ಸಾವಿರ ಸರ್ಕಾರಿ ಕಾರ್ಮಿಕರ ಪಾಲಿಗೆ ವರದಾನ

Wed, 20 Jan 2010 18:40:00  Office Staff   S.O. News Service
ಬೆಂಗಳೂರು, ಜನವರಿ 20: ರಾಜ್ಯದ 60 ಸಹಸ್ರ ಸರ್ಕಾರೀ ನೌಕರರಿಗೆ ವರದಾನವಾಗುವ ಹೊಸ ಪಿಂಚಣಿ ಯೋಜನೆ ಫೆಬ್ರವರಿಯಿಂದ ಜಾರಿಗೆ ಬರಲಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ನಡೆದ ಮಹತ್ವದ ಸಭೆಯಲ್ಲಿ ಸರ್ಕಾರ ಈ ಕುರಿತು ಎನ್‌ಪಿ‌ಎಸ್ ಟ್ರಸ್ಟ್ ಹಾಗೂ ಎನ್‌ಎಸ್‌ಡಿ‌ಎಲ್ ಟ್ರಸ್ಟ್ ಜತೆ ಒಪ್ಪಂದ ಮಾಡಿಕೊಂಡಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಇಂದು ಸರ್ಕಾರದ ಪರವಾಗಿ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಂ.ಆರ್.ಶ್ರೀನಿವಾಸಮೂರ್ತಿ ಹಾಗೂ ಎನ್‌ಪಿ‌ಎಸ್ ಟ್ರಸ್ಟ್‌ನ ಪರವಾಗಿ ಎನ್‌ಆರ್ ರಾಯಲು,ಎನ್‌ಎಸ್‌ಡಿ‌ಎಲ್ ಪರವಾಗಿ ಗಗನ್ರಾಯ್ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.

ಅದರ ಪ್ರಕಾರ ೨೦೦೬ ರ ಏಪ್ರಿಲ್ ೧ ರ ನಂತರ ಸರ್ಕಾರೀ ಸೇವೆಗೆ ಸೇರಿದವರಿಗೆ ಈ ಹೊಸ ಪಿಂಚಣಿ ಯೋಜನೆ ಅನ್ವಯವಾಗಲಿದ್ದು,ಸುಮಾರು ಅರವತ್ತು ಸಹಸ್ರ ಮಂದಿಗೆ ಈ ಸೌಲಭ್ಯ ದೊರೆಯಲಿದೆ.

ಹೊಸ ಪಿಂಚಣಿ ಯೋಜನೆಗೆ ನೌಕರರು ಮಾಸಿಕ ವಂತಿಕೆಯ ಮೂಲವೇತನ ಮತ್ತು ಅದರ ಮೇಲಿನ ತುಟ್ಟಿ ಭತ್ಯದ ಶೇಕಡಾ ಹತ್ತರಷ್ಟು ಹಣವನ್ನು ತಮ್ಮ ಪಾಲಾಗಿ ನೀಡಬೇಕಾಗುತ್ತದೆ.ಸರ್ಕಾರ ಕೂಡಾ ಇಷ್ಟೇ ಪ್ರಮಾಣದ ಪಾಲನ್ನು ಹಾಕುತ್ತದೆ.

ವಂತಿಕೆ ಮತ್ತು ಲಾಭಾಂಶವನ್ನು ಹಿಂಪಡೆಯಲು ಸಾಧ್ಯವಿಲ್ಲದ ಪಿಂಚಣಿ ಒಂದನೇ ಘಟ್ಟದ ಖಾತೆ ಮೂಲಕ ಈ ಹಣವನ್ನು ಫಂಡ್ ಮೇನೇಜರ್ ಆಗಿರುವ ಸಂಸ್ಥೆಯ ಬಳಿ ಇಡಲಾಗುವುದು.ಮುಂದೆ ನೌಕರರು ನಿವೃತ್ತಿ ಹೊಂದಿದ ನಂತರ ಜೀವನಪರ್ಯಂತವೂ ಪಿಂಚಣಿ ಸೌಲಭ್ಯವನ್ನು ಪಡೆಯಲಿದ್ದಾರೆ.

ಈ ಹೊಸ ಪಿಂಚಣಿ ಯೋಜನೆಯಡಿ ಅರವತ್ತು ಸಾವಿರ ಸರ್ಕಾರೀ ನೌಕರರು ಸೇರಲಿದ್ದು ಮುಂದೆ ಪ್ರತೀ ವರ್ಷ ಹದಿನೈದರಿಂದ ಇಪ್ಪತ್ತು ಸಾವಿರ ನೌಕರರು ಯೋಜನೆ ವ್ಯಾಪ್ತಿಗೆ ಸೇರಲಿದ್ದಾರೆ.

ದೇಶಾದ್ಯಂತ ಇಂತಹ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ನೆರವು ನೀಡಿದ್ದು ಇದರನುಸಾರ ಸುಮಾರು ೬.೨೫ ಲಕ್ಷ ಮಂದಿ ಕೇಂದ್ರ ಹಾಗೂ ರಾಜ್ಯ ಸರ್ಕಾರೀ ನೌಕರರು ಪಿಂಚಣಿ ಸೌಲಭ್ಯ ಪಡೆಯಲಿದ್ದಾರೆ.

                 ನೌಕರರಿಗೆ ಎಲ್ಲ ಸವಲತ್ತು

ಇಂತಹ ಮಹತ್ವದ ಯೋಜನೆಯ ಒಪ್ಪಂದವಾದ ನಂತರ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ;ರಾಜ್ಯ ಸರ್ಕಾರ ತನ್ನ ಆರ್ಥಿಕ ಇತಿಮಿತಿಗಳ ನಡುವೆಯೂ ಸರ್ಕಾರೀ ನೌಕರರಿಗೆ ಎಲ್ಲ ರೀತಿಯ ಸವಲತ್ತು ನೀಡಿದೆ ಎಂದು ಹೇಳಿದರು.

ಸರ್ಕಾರೀ ನೌಕರರ ನಿವೃತ್ತಿ ವಯಸ್ಸನ್ನು ೬೦ ಕ್ಕೇರಿಸಿದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕ ಒಂದು ಎಂದು ಬಣ್ಣಿಸಿದ ಅವರು,ವಿಶ್ವವಿದ್ಯಾನಿಲಯಗಳ ಭೋಧಕ ಸಿಬ್ಬಂದಿಗಳ ವೇತನವನ್ನೂ ಯುಜಿಸಿ ಶಿಫಾರಸ್ಸಿನ ಅನ್ವಯ ಹೆಚ್ಚಿಸಲಾಗಿದೆ ಎಂದರು. 

ಸರ್ಕಾರಿ ನೌಕರರಿಗೆ ಕಂಪ್ಯೂಟರ್ ತರಬೇತಿ ನೀಡುವುದರಿಂದ ಹಿಡಿದು ಹಲವು ರೀತಿಯ ಕಾರ್ಯಕ್ರಮಗಳನ್ನು ಸರ್ಕಾರ ಅನುಷ್ಟಾನಗೊಳಿಸಿದ್ದು ಇದೀಗ ಸರ್ಕಾರದ ಅರವತ್ತು ಸಾವಿರ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಕೆಲಸದಲ್ಲಿ ಕೈ ಜೋಡಿಸಿರುವುದರಿಂದ ತಮಗೆ ತುಂಬ ಸಮಾಧಾನವಾಗಿದೆ ಎಂದು ಹೇಳಿದರು.


Share: