ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೇಸ್ ಪಕ್ಷವನ್ನು ತಿರಸ್ಕರಿಸಿ ಕೆಆರ್ಎಸ್ ಪಕ್ಷ ಬೆಂಬಲಿಸುವಂತೆ ಕರೆ

ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೇಸ್ ಪಕ್ಷವನ್ನು ತಿರಸ್ಕರಿಸಿ ಕೆಆರ್ಎಸ್ ಪಕ್ಷ ಬೆಂಬಲಿಸುವಂತೆ ಕರೆ

Fri, 23 Feb 2024 01:39:08  Office Staff   SOnews

ಕರ್ನಾಟಕಕ್ಕಾಗಿ ನಾವು ಎನ್ನುವ ಹೆಸರಿನಲ್ಲಿ ರಾಜ್ಯವ್ಯಾಪಿ13 ದಿನಗಳ 3000 ಕಿಲೋಮೀಟರ್ ಗಳ ಬೈಕ್ ಜಾಥಾ.

ಭಟ್ಕಳ: ಭ್ರಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ತಿರಸ್ಕರಿಸಿ ಮತ್ತು ರಾಜ್ಯದ ಏಕೈಕ ಪ್ರಾಮಾಣಿಕ ಮತ್ತು ಪ್ರಾದೇಶಿಕ ಪಕ್ಷವಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸಿ ಎಂದು ಕೆ.ಆರ್.ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್.ಜೀವನ್ ಕರೆ ನೀಡಿದರು.

ಅವರು ಗುರುವಾರ ಭಟ್ಕಳದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.

ಫೆ.19 ರಂದು  ದೇವನಹಳ್ಳಿಯಲ್ಲಿ ಪ್ರಾರಂಭವಾದ ಬೈಕ್ ಜಾಥಾ ಇಂದು ಉಡುಪಿ, ಕುಂದಾಪುರ ಮಾರ್ಗವಾಗಿ ಗುರುವಾರ  ಭಟ್ಕಳ ತಲುಪಿದ್ದು,   ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಕರ್ನಾಟಕಕ್ಕಾಗಿನಾವು ಎನ್ನುವ ಹೆಸರಿನಲ್ಲಿ ರಾಜ್ಯವ್ಯಾಪಿ ಬೈಕ್ ಜಾಥಾ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಈ ಜಾಥಾದ ಸಂದರ್ಭದಲ್ಲಿ “ಭ್ರಷ್ಟರನ್ನು, ಅಪ್ರಾಮಾಣಿಕರನ್ನು, ಸ್ವಜನಪಕ್ಷಪಾತಿಗಳನ್ನು, ಅನೈತಿಕ ನಡವಳಿಕೆ ಉಳ್ಳವರನ್ನು, ಸುಳ್ಳರನ್ನು, ಸಮಾಜಘಾತುಕ ಶಕ್ತಿಗಳನ್ನು, ಕುಟುಂಬ ರಾಜಕಾರಣದ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಮಣ್ಣುಪಾಲು ಮಾಡುತ್ತಿರುವ ಪಕ್ಷಗಳ ಪರಮಸ್ವಾರ್ಥಿ ರಾಜಕಾರಣಿಗಳನ್ನು ತಮ್ಮ ಮತ್ತು ತಮ್ಮ ಮಕ್ಕಳ ರಾಜಕೀಯ ನಾಯಕರೆಂದು ಒಪ್ಪಿಕೊಳ್ಳದೆ ಜನಪರ ಕಾಳಜಿಯ, ಸ್ವಚ್ಚ ಮತ್ತು ಪ್ರಾಮಾಣಿಕ ರಾಜಕೀಯ ವ್ಯವಸ್ಥೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನಾಡಪ್ರೇಮಿ ಸೈನಿಕರನ್ನು ಮತ್ತು KRS ಪಕ್ಷವನ್ನು ಬೆಂಬಲಿಸಿ” ಎಂದು KRS ಪಕ್ಷದ ರಾಜ್ಯಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ರವರು ಜನರಲ್ಲಿ ಮನವಿ ಮಾಡಿದರು ಮತ್ತು “ನಾಡಪ್ರೇಮಿಗಳೇ, ಏಳಿ, ಎದ್ದೇಳಿ! ಭ್ರಷ್ಟ ವ್ಯವಸ್ಥೆಯನ್ನು ತೊಲಗಿಸಿ, ಭವ್ಯ ಸಮಾಜವನ್ನು ನಿರ್ಮಿಸಿ. ಹೆಮ್ಮೆ ಮತ್ತು ಘನತೆಯಿಂದ ಜೀವಿಸಿ, ಸ್ವಾಭಿಮಾನದಿಂದ ಬದುಕಿ, ಬಾಳಿ” ಎಂದು ಕರೆ ನೀಡಿದರು.

ಬೈಕ್ ಜಾಥಾದಲ್ಲಿ ಪಕ್ಷದ  ರಾಜ್ಯ ಉಪಧ್ಯಕ್ಷರಾದ  ಲಿಂಗೇಗೌಡ ಎಸ್. ಹೆಚ್., ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ. ಎನ್., ರಾಜ್ಯ  ಕಾರ್ಯದರ್ಶಿ ರಘು ಜಾಣಗೆರೆ, ಜಂಟಿ ಕಾರ್ಯದರ್ಶಿ ರಘುಪತಿ ಭಟ್, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಮಠದ, ಬಿ. ಜಿ. ಕುಂಬಾರ, ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ನೀಲಕಂಠ ನಾಯ್ಕ, ಯುವ ಘಟಕದ ಅಧ್ಯಕ್ಷ ಸೀತಾರಾಮ್  ಹಾಗೂ ಇತರ ಪದಾಧಿಕಾರಿಗಳು ಭಾಗವಹಿಸಿದ್ದರು.

 


Share: