ನಾಯಕ ಜನಾಂಗದ ಪ್ರತಿಭಟನೆ
ಮಂಡ್ಯ : ತಮ್ಮನ್ನು ಅನುಸೂಚಿತ ಪಂಗಡದಿಂದ ಕೈಬಿಡಲಾಗಿರುವ ಕ್ರಮವನ್ನು ಖಂಡಿಸಿ ಪಾಂಡವಪುರ ತಾಲೂಕು ಕ್ಯಾತನಹಳ್ಳಿ ಗ್ರಾಮದ ನಾಯಕ ಜನಾಂಗದವರು ಪ್ರತಿಭಟನೆ ನಡೆಸಿದರು.
ಶಾಸಕ ಸಿ.ಎಸ್.ಪುಟ್ಟರಾಜು ಅವರ ನೇತೃತ್ವದಲ್ಲಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ನಾಯಕ ಜನಾಂಗದವರು, ಸರಕಾರದ ಕ್ರಮದ ವಿರುದ್ಧ ಕಿಡಿಕಾರಿದರು.
ತಾವು ಕಳೆದ 45 ವರ್ಷದಿಂದ ಕ್ಯಾತನಹಳ್ಳಿ ಯಲ್ಲಿ ವಾಸವಿದ್ದು, ಇದುವರೆಗೂ ಪರಿಶಿಷ್ಟ ಪಂಗಡದ ಸವಲತ್ತುಗಳನ್ನು ಪಡೆದಿದ್ದೇವೆ. ಇದೀಗ ಏಕಾಏಕಿ ಪಂಗಡದಿಂದ ಕೈಬಿಡಲಾಗಿದೆ ಎಂದು ಪ್ರತಿಭಟನಕಾರರು ಹೇಳಿದರು.
ಈ ಬಗ್ಗೆ ತಾಲೂಕು ಅಧಿಕಾರಿಗಳು ಸ್ಪಷ್ಟ ಕಾರಣ ನೀಡುತ್ತಿಲ್ಲ. ಗ್ರಾ.ಪಂ. ಚುನಾವಣೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡು ಗೊಂದಲ ಉಂಟುವಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ ಪ್ರತಿಭಟನಕಾರರು, ತಮ್ಮನ್ನು ಪರಿಶಿಷ್ಟ ಪಂಗಡದಿಂದ ಕೈಬಿಟ್ಟಿರುವುದನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಶಾಸಕ ಕೆ.ಟಿ.ಶ್ರೀಕಂಠೇಗೌಡ, ಮುಖಂಡರಾದ ಮಧುವನ ಚಂದ್ರು, ಹನುಮಂತ, ಸುರೇಶ್, ರಾಜ್, ಬಂಗಾರ ನಾಯಕ, ಮಹೇಂದ್ರ, ರವಿ, ಮುತ್ತು ಪ್ರತಿಭಟನೆಯ ನೇತೃತ್ವವಹಿಸಿದ್ದರು.