ಭಟ್ಕಳ, ಡಿಸೆಂಬರ್ 28: ತಾಲ್ಲೂಕಿನಾದ್ಯಂತ ನಡೆದ ಹಲವು ಅಪಘಾತಗಳು ಜನರಲ್ಲಿ ಆತಂಕ ಮೂಡಿಸಿದೆ. ವಿವಿಧ ಅಪಘಾತಗಳಲ್ಲಿ ನಾಲ್ವರು ಮಡಿದು ಮೂವರು ಮಕ್ಕಳ ಸಹಿತ ಹನ್ನೆರೆಡು ಜನರಿಗೆ ತೀವ್ರತರದ ಗಾಯಗಳಾಗಿವೆ.
ಭಟ್ಕಳದ ಸಮೀಪ ರಸ್ತೆಯಿಂದ ಹೊರಳಿ ಕಮರಿಗೆ ಬಿದ್ದಿದ್ದ ಟಾಸಫಾರಿ ವಾಹನದ ಪ್ರಯಾಣಿಕರನ್ನು ಗುರುತಿಸಲಾಗಿದೆ. ಹಿಂದಿನ ಆಸನದಲ್ಲಿದ್ದ ವ್ಯಕ್ತಿ ವಿಧಿವಶರಾಗಿದ್ದು ಆಂಧ್ರಪ್ರದೇಶದ ರಂಗಾರೆಡ್ಡಿ ಪಟ್ಟಣದ ನಿವಾಸಿ ಎನ್. ಸುರೇಶ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ವೀರಪ್ಪ, ಶ್ರೀನಿವಾಸ್ ಮತ್ತು ನಾಗರಾಜ್ ಎಂದು ಗುರುತಿಸಲಾಗಿದೆ.
ಶಿರೂರು ಬಳಿಯ ಶಾಲಾ ಟೆಂಪೋ-ಕ್ವಾಲಿಸ್ ನಡುವಿನ ಅಪಘಾತದಲ್ಲಿ ಕ್ವಾಲಿಸ್ ಚಾಲಕ ವಿಧಿವಶನಾಗಿದ್ದು ಇನ್ನೂ ಏಳು ಜನರಿಗೆ ಗಾಯವಾಗಿದೆ.
ಮೂರನೆಯ ಘಟನೆ ಅತ್ಯಂತ ವಿದ್ರಾವಕಾರಿಯಾಗಿದೆ. ಅಜ್ಮಾನ್ ನಿವಾಸಿ ಸಾಬಿರ್ ಮನ್ನಾ ರವರ ಪುತ್ರ ಸುರೂರ್ ಮನ್ನಾ (20) ಎಂಬುವರು ಸಂಬಂಧಿಕರ ಮದುವೆಗೆಂದು ಮುರ್ಡೇಶ್ವರಕ್ಕೆ ಆಗಮಿಸಿದವರು ಸಮುದ್ರದಲ್ಲಿ ಮುಳುಗಿ ಅಸುನೀಗಿದ್ದಾರೆ.
ಮದುವೆಗೆಂದು ಬಂದಿದ್ದ ಸುರೂರ್ ಹಾಗೂ ಮನೆಯವರು ಮುರ್ಡೇಶ್ವರದ ಹೋಟೆಲ್ ಒಂದರಲ್ಲಿ ತಂಗಿದ್ದರು. ಹೋಟೆಲಿನ ಈಜುಕೊಳದಲ್ಲಿ ಈಜಲೆಂದು ತೆರಳಿದ್ದ ಸುರೂರ್ ಕಾಲುಜಾರಿ ವಿರುದ್ಧ ದಿಕ್ಕಿನಲ್ಲಿದ್ದ ಕಮರಿಗೆ ಬಿದ್ದು ನೇರವಾಗಿ ಸಮುದ್ರಕ್ಕೆ ಅಪ್ಪಳಿಸಿದ ಕಾರಣ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಸುರೂರ್ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು ಮೂಲತಃ ವಿರಾಜಪೇಟೆಯವರಾಗಿದ್ದರು.
ನಾಲ್ಕನೆಯ ಪ್ರಕರಣದಲ್ಲಿ ಕುಮಟಾದ ಸಮುದ್ರದಲ್ಲಿ ಈಜಲೆಂದು ಹೋಗಿದ್ದ ಸಾಫ್ಟ್ವೇರ್ ಇಂಜಿನಿಯರ್ ಓರ್ವರು ಮುಳುಗಿ ಅಸುನೀಗಿದ್ದಾರೆ.