ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಪ್ರಾದೇಶಿಕ ಪಕ್ಷಕ್ಕೆ ರೆಡ್ಡಿಗಳು ಸಜ್ಜು?

ಬೆಂಗಳೂರು: ಪ್ರಾದೇಶಿಕ ಪಕ್ಷಕ್ಕೆ ರೆಡ್ಡಿಗಳು ಸಜ್ಜು?

Wed, 04 Nov 2009 02:57:00  Office Staff   S.O. News Service
ಬೆಂಗಳೂರು, ನವೆಂಬರ್ 4: ಶತಾಯಗತಾಯ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಲು ಕಂಕಣ ತೊಟ್ಟು ನಿಂತಿರುವ ಬಳ್ಳಾರಿ ಗಣಿ ಧಣಿಗಳು ಒಂದು ವೇಳೆ ಬಿಜೆಪಿ ಹೈಕಮಾಂಡ್ ಅಂತಿಮವಾಗಿಯೂ ಒಪ್ಪದಿದ್ದರೆ ಏನು ಮಾಡಬಹುದು? 

ಸದ್ಯಕ್ಕಿದು ಬಿಜೆಪಿಯಷ್ಟೇ ಅಲ್ಲ, ಇತರ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರೂ ಸೇರಿದಂತೆ ರಾಜ್ಯದ ಕೋಟ್ಯಂತರ ಜನತೆಯ ಮಿಲಿಯನ್ ಡಾಲರ್ ಪ್ರಶ್ನೆ. 

ಪರ್ಯಾಯ ಸರ್ಕಾರ ರಚನೆ ಯತ್ನ ವಿಫಲವಾಗಿ ಚುನಾವಣೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾದಲ್ಲಿ ಪ್ರಾದೇಶಿಕ ಪಕ್ಷವೊಂದನ್ನು ಹುಟ್ಟು ಹಾಕುವುದು ಸೂಕ್ತವಾದೀತು ಎಂಬ ಆಲೋಚನೆಯನ್ನು ರೆಡ್ಡಿ ಬ್ರದರ್ಸ್ ಹೊಂದಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. 
ಬಿಕ್ಕಟ್ಟು ಪರಿಹರಿಸಲು ಈಗ ದೆಹಲಿಯಲ್ಲಿ ನಡೆಯುತ್ತಿರುವ ಮಹತ್ವದ ಬೆಳವಣಿಗೆಗಳನ್ನು ಗಮನಿಸಿದರೆ ಒಮ್ಮತಾಭಿಪ್ರಾಯ ಮೂಡಿ ಬಿಜೆಪಿ ಸರ್ಕಾರ ಸುಸೂತ್ರವಾಗಿ ಮುಂದುವರೆಯುವ ಲಕ್ಷಣಗಳು ಗೋಚರಿಸುತ್ತಿವೆ. ಆದರೆ, ಯಾವುದೂ ಸ್ಪಷ್ಟವಾಗಿಲ್ಲ. 

ಈ ಹಿನ್ನೆಲೆಯಲ್ಲಿ ಒಂದು ವೇಳೆ ಹೈಕಮಾಂಡ್ ತಮ್ಮ ಬೇಡಿಕೆಗೆ ಒಪ್ಪದೆ ಬಿಕ್ಕಟ್ಟು ಉಲ್ಬಣಿಸಿ ಚುನಾವಣೆ ಎದುರಾದಲ್ಲಿ, ಇತರೆ ರಾಜಕೀಯ ಪಕ್ಷಗಳಿಗೆ ವಲಸೆ ಹೋಗುವ ಬದಲು ಪ್ರಾದೇಶಿಕ ಪಕ್ಷ ರಚಿಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸುವುದು ಅಗತ್ಯ ಎಂಬ ಬಗ್ಗೆ ಗಣಿ ಧಣಿಗಳ ವಲಯದಲ್ಲಿ ಗಂಭೀರ ಚರ್ಚೆ ಆಗಿದೆ. 

ಏಳೆಂಟು ಜಿಲ್ಲೆಗಳು ಕೇಂದ್ರೀಕೃತ: ಬಳ್ಳಾರಿ, ರಾಯಚೂರು, ಗುಲ್ಬರ್ಗ, ಕೊಪ್ಪಳ, ಗದಗ, ಬಿಜಾಪುರ ಹಾಗೂ ಚಿತ್ರದುರ್ಗ ಜಿಲ್ಲೆಗಳನ್ನು ಕೇಂದ್ರೀಕರಿಸಿ ಪ್ರಾದೇಶಿಕ ಪಕ್ಷವೊಂದನ್ನು ಸ್ಥಾಪಿಸಿದಲ್ಲಿ ಹೆಚ್ಚು ಲಾಭ ಗಳಿಸಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ. 
 
ಈ ಪೈಕಿ ಮಧ್ಯೆ ಕರ್ನಾಟಕಕ್ಕೆ ಸೇರಿರುವ ಚಿತ್ರದುರ್ಗ ಜಿಲ್ಲೆಯೊಂದನ್ನು ಹೊರತುಪಡಿಸಿದರೆ ಇನ್ನುಳಿದ ಎಲ್ಲ ಜಿಲ್ಲೆಗಳೂ ಉತ್ತರ ಕರ್ನಾಟಕಕ್ಕೆ ಸೇರಿದ್ದು ಎಂಬುದು ವಿಶೇಷ.        

ಜೊತೆಗೆ ಬಳ್ಳಾರಿ, ರಾಯಚೂರು, ಗುಲ್ಬರ್ಗ, ಚಿತ್ರದುರ್ಗ ಜಿಲ್ಲೆಗಳು ನೆರೆಯ ಆಂಧ್ರಪ್ರದೇಶದ ಗಡಿಗೆ ಅಂಟಿಕೊಂಡ ಜಿಲ್ಲೆಗಳು. ಕಳೆದ ಹಲವು ದಿನಗಳಿಂದ ಅಂದರೆ, ಭಿನ್ನಮತ ಸ್ಫೋಟಗೊಂಡ ನಂತರ ಏಕಾ‌ಏಕಿ ಗಣಿ ಧಣಿಗಳ ಬಾಯಲ್ಲಿ ಉಕ ಎಂಬ ಪದ ಎಗ್ಗಿಲ್ಲದೆ ಪ್ರಸ್ತಾಪವಾಗುತ್ತಿರುವುದು ವಿಶೇಷ. ಮೊದಲು ಕೇವಲ ಬಳ್ಳಾರಿ ಎಂಬ ಶಬ್ದ ಮಾತ್ರ ಬಳಕೆಯಾಗುತ್ತಿತ್ತು. 
ತಮ್ಮ ಭಿನ್ನಮತಕ್ಕೆ ಗಣಿ ಧಣಿಗಳು ಸಾಥ್ ಪಡೆದಿದ್ದು ಉ.ಕ.ದ ಶಾಸಕರನ್ನೇ. ಬಹುತೇಕ ಎಲ್ಲರೂ ಯುವ ಶಾಸಕರೇ ಎಂಬುದು ಗಮನಾರ್ಹ ಅಂಶ. ಪ್ರಾದೇಶಿಕ ಪಕ್ಷ ರಚಿಸಿದರೆ ಇವರೆಲ್ಲರನ್ನೂ ಜತೆಯಲ್ಲೇ ಕೊಂಡೊಯ್ಯಬೇಕು ಎಂಬ ಉದ್ದೇಶಹೊಂದಲಾಗಿದೆ.ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಸುಮಾರು ೨೫ರಿಂದ ೩೦ ಸ್ಥಾನಗಳನ್ನು ಗೆದ್ದರೂ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ತಮ್ಮ ಪ್ರಾಬಲ್ಯ ಮೆರೆಯಬಹುದು ಎಂದು ಎಣಿಸಲಾಗಿದೆ.


ಸೌಜನ್ಯ: ಕನ್ನಡಪ್ರಭ

Share: