ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸಕಲೇಶಪುರ: ಬಲಗೈ ಮೂಳೆ ಮುರಿತ - ಎಡಗೈಗೆ ಬ್ಯಾಂಡೇಜ್ - ಕ್ರಾಫರ್ಡ್ ಆಸ್ಪತ್ರೆ ವೈದ್ಯರ ಆವಾಂತರ

ಸಕಲೇಶಪುರ: ಬಲಗೈ ಮೂಳೆ ಮುರಿತ - ಎಡಗೈಗೆ ಬ್ಯಾಂಡೇಜ್ - ಕ್ರಾಫರ್ಡ್ ಆಸ್ಪತ್ರೆ ವೈದ್ಯರ ಆವಾಂತರ

Wed, 30 Dec 2009 17:56:00  Office Staff   S.O. News Service
ಸಕಲೇಶಪುರ, ಡಿಸೆಂಬರ್ 29: ಬಾಲಕಿಯೊಬ್ಬಳ ಬಲಗೈ ಮೂಳೆ ಮುರಿದರೆ, ವೈಧ್ಯರೊಬ್ಬರು ಎಡಗೈಗೆ ಚಿಕಿತ್ಸೆ ನೀಡಿ ಬ್ಯಾಂಡೇಜ್ ಮಾಡಿದ ವಿಚಿತ್ರ ಹಾಗೂ ಹಾಸ್ಯಾಸ್ಪದ ಘಟನೆಯೊಂದು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ.
 
‘ಎಮ್ಮೆ ಕರುವಿಗೆ ರೋಗ ಬಂದರೆ, ಹಸುವಿನ ಕರುವಿಗೆ ಬರೆ ಎಳೆದಂತೆ’ ನಿರ್ಲಕ್ಷ ಹಾಗೂ ಬೇಜವಾಬ್ದಾರಿ ಬಿಂಬಿಸುವ ಈ ಗಾದೆ ಮಾತನ್ನು ನೆನಪಿಸಿಕೊಳ್ಳುವ, ವೈದ್ಯರ ನಿರ್ಲಕ್ಷಕ್ಕೆ ಕನ್ನಡಿ ಹಿಡಿದಂತಹ ಈ ಘಟನೆ ಬಾಲಕಿಯ ಪೋಷಕರು ಹಾಗೂ ನಾಗರೀಕರನ್ನು ಬೆಚ್ಚಿ ಬೀಳಿಸಿದೆ.
 
ವಿವರ:
ತಾಲೂಕಿನ ಯಸಳೂರು ಹೋಬಳಿಯ ರಾಗೀಪುರ ಗ್ರಾಮದ ಗೌರಮ್ಮ ಎಂಬುವವರ ಪುತ್ರಿ ಎಶ್ಚಿತ(೫), ಮನೆಯಂಗಳದಲ್ಲಿ ಆಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಬಿದ್ದು ಬಲಗೈಗೆ ಪೆಟ್ಟು ಮಾಡಿಕೊಂಡಳು. ಗಾಯಗೊಂಡಿದ್ದ ಈ ಬಾಲಕಿಯನ್ನು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ಕರದುಕೊಂಡು ಬಂದ ಪೋಷಕರು, ವೈಧ್ಯ ಉಮೇಶ್(ಮೂಳೆ ತಜ್ಞ) ಅವರಿಗೆ ತೋರಿಸಿದರು. ಎಕ್ಸರೇ ಮಾಡಿಸಿದ ನಂತರ ಬಲಗೈ ಮೂಳೆ ಮುರಿದಿರುವುದನ್ನು ದೃಡಪಡಿಸಿಕೊಂಡ ವೈಧ್ಯ, ಬ್ಯಾಂಡೇಜ್ ಮಾಡಿದ್ದು ಮಾತ್ರ ಎಡಗೈಗೆ. ಬಲಗೈ ಗಾಯದ ನೋವಿನಿಂದ ಪರಿತಪಿಸುತ್ತಿದ್ದ ಬಾಲಕಿಯ, ಸರಿಯಿದ್ದ ಎಡಗೈಗೆ ಬ್ಯಾಂಡೇಜ್ ಮಾಡಿದ್ದರಿಂದ ಎರಡೂ ಕೈಯನ್ನು ಆಡಿಸಲಾಗದೆ ಇದ್ದ ಮಗಳ ಪರಿಸ್ಥಿತಿಯನ್ನು ಕಂಡು ಪೋಷಕರು ಧಂಗಾದರು.

ವೈಧ್ಯರನ್ನು ಪ್ರಶ್ನೆ ಮಾಡುವುದಿರಲಿ, ಇಂತಹವರ ಸಹವಾಸವೇ ಬೇಡ ಎಂದು ಮನಸ್ಸಿನೊಳಗೆ ಗೊಣಗಿಕೊಂಡು ಆಸ್ಪತ್ರೆಯಿಂದ ಹೊರಟ ಪೋಷಕರನ್ನು, ನೋವಿನಿಂದ ಬಳಲುತ್ತಾ ಅಳು ನಿಲ್ಲಿಸದೆ ಇರುವ ಮಗಳ ಬಗ್ಗೆ, ಅಲ್ಲೆ ಇದ್ದ ಹೊರರೋಗಿಗಳು ವಿಚಾರಿಸಿದಾಗ ವೈಧ್ಯರ ನಿರ್ಲಕ್ಷದ ಘಟನೆಯನ್ನು ಅವರಿಗೆ ತಿಳಿಸಿದರು. ಈ ವಿಷಯ ಆಸ್ಪತ್ರೆಯ ಸಿಬ್ಬಂಧಿಗೂ ತಿಳಿಯಿತು. ತಕ್ಷಣವೇ ಈ ವಿಷಯ ವೈಧ್ಯರ ಗಮನಕ್ಕೆ ತಂದು, ಬಾಲಕಿಗೆ ಮರು ಚಿಕಿತ್ಸೆ(ಬ್ಯಾಂಡೇಜ್) ನೀಡಲಾಯಿತು.
 
ಒಟ್ಟಿನಲ್ಲಿ ಈ ಘಟನೆ ವೈಧ್ಯರ ಬೇಜವಾಬ್ದಾರಿಯೋ ಅಥವಾ ಆಕಸ್ಮಿಕವೋ ಎಂಬ ಸಾರ್ವಜನಿಕರ ಚರ್ಚೆಗೆ ಗ್ರಾಸವಾಯಿತು.

Share: