ಭಟ್ಕಳ, ಮಾರ್ಚ್ 6:ಇಲ್ಲಿಯ ಮುಟ್ಟಳ್ಳಿ ಗ್ರಾಮಪಂಚಾಯತ ವ್ಯಾಪ್ತಿಯ ಬೆಳಲಖಂಡ ಅರಣ್ಯ ಭೂಮಿ ಸರ್ವೇ ೬೧ರಲ್ಲಿ ಅನಧಿಕೃತವಾಗಿ ತೋಟಗಾರಿಕೆ ನಡೆಸಲಾಗಿದೆ ಎಂದು ಆರೋಪಿಸಿ ತೆರವು ಕಾರ್ಯಾಚರಣೆ ನಡೆದಿದ್ದು, ಘಟನಾ ಸ್ಥಳಕ್ಕೆ ತಾಲೂಕು ಪಂಚಾಯತ ಅಧ್ಯಕ್ಷೆ ಗೌರಿ ಮೊಗೇರ ಹಾಗೂ ಉಪಾಧ್ಯಕ್ಷ ಮಾದೇವ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ಕೆಲವು ವರ್ಷಗಳ ಹಿಂದೆಯೇ ಅತಿಕ್ರಮಣ ಮಾಡಲಾಗಿದ್ದು, ಫಲಭರಿತ ಅಡಿಕೆ ಮರಗಳನ್ನು ಕಡಿಯಲಾಗಿದೆ ಎಂಬ ಅತಿಕ್ರಮಣದಾರ ವಾಸು ನಾಯ್ಕರ ಅಹವಾಲುಗಳನ್ನು ಆಲಿಸಿದ ಅವರು ಸಂಬಂಧಪಟ್ಟ ಅಧಿಕಾರಿಗಳೊಡನೆ ಮತ್ತೊಮ್ಮೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂಬ ಭರವಸೆ ನೀಡಿದರು. ಮುಟ್ಟಳ್ಳಿ ಗ್ರಾಮಪಂಚಾಯತ ಸದಸ್ಯ ವೆಂಕಟೇಶ ನಾಯ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಸಂಬಂಧ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿಯೂ ವಿಷಯವನ್ನು ಪ್ರಸ್ತಾಪಿಸಲಾಗಿದ್ದು, ತಾಲೂಕು ಪಂಚಾಯತ ಅಧ್ಯಕ್ಷೆ ಗೌರಿ ಮೊಗೇರ ಹಾಗೂ ಉಪಾಧ್ಯಕ್ಷ ಮಾದೇವ ನಾಯ್ಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಡಿಕೆ ಮರ ಬೆಳೆದು ಫಲ ಬರುವವರೆಗೂ ಸುಮ್ಮನಿದ್ದು ನಂತರ ಕಾನೂನಿನ ಮಾತನ್ನು ಹೇಳುವುದು ತರವಲ್ಲ ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅರಣ್ಯ ಅತಿಕ್ರಮಣ ತೆರವಿನ ಹಿನ್ನೆಲೆಯಲ್ಲಿ ಅತಿಕ್ರಮಣದಾರ ವಾಸು ನಾಯ್ಕ ಆಘಾತಗೊಂಡು ಆಸ್ಪತ್ರೆಗೆ ದಾಖಲಾಗಿದ್ದನ್ನಿಲ್ಲಿ ಸ್ಮರಿಸಿಕೊಳ್ಳಬಹುದು.