ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬಿಜೆಪಿ ಮುಖಂಡ ತಿಮ್ಮಪ್ಪ ನಾಯ್ಕ ಹತ್ಯೆಗೆ ಆರು ವರ್ಷ, ಹಂತಕ ಇನ್ನೂ ನಿಗೂಢ ಬಿ ಜೆ ಪಿ ಸರಕಾರವಿದ್ದರೂ ಚುರುಕಾಗದ ತನಿಖೆ

ಬಿಜೆಪಿ ಮುಖಂಡ ತಿಮ್ಮಪ್ಪ ನಾಯ್ಕ ಹತ್ಯೆಗೆ ಆರು ವರ್ಷ, ಹಂತಕ ಇನ್ನೂ ನಿಗೂಢ ಬಿ ಜೆ ಪಿ ಸರಕಾರವಿದ್ದರೂ ಚುರುಕಾಗದ ತನಿಖೆ

Sun, 02 May 2010 04:16:00  Office Staff   S.O. News Service

ಭಟ್ಕಳ: ಭಟ್ಕಳದಲ್ಲಿ ಇದುವರೆಗೂ ಇಬ್ಬರೂ ಬಿಜೆಪಿ ಪ್ರಮುಖರ ಹತ್ಯೆಯಾಗಿದೆ. ಅವರಲ್ಲಿ ಶಾಸಕ ಡಾ.ಚಿತ್ತರಂಜಹಾಗೂ ತಿಮ್ಮಪ್ಪ ನಾಯ್ಕ.ಡಾ.ಚಿತ್ತರಂಜನ್ ಹತ್ಯೆಯಾಗಿ ವರ್ಷಗಳೇ ಕಳೆದಿವೆ. ಅದರ ಹಂತಕ ಇನ್ನು ಪತ್ತೆಯಾಗಲಿಲ್ಲ. ಹೋಗಲಿ ತಿಮ್ಮಪ್ಪ ನಾಯ್ಕರ ಹತ್ಯೆಯಾಗಿ ಇಂದಿಗೆ ಆರು ವರ್ಷಗಳು ಪೂರ್ಣವಾಗುತ್ತಿವೆ. ಅವರ ಹಂತಕನ್ನನ್ನಾದರೂ ಪತ್ತೆಯಾದನೋ ಅದು ಇಲ್ಲ. ತಮ್ಮ ಸರಕಾರ ರಾಜ್ಯದಲ್ಲಿ ಆಡಳಿತದಲ್ಲಿ ಇಲ್ಲದ ಸಂದರ್ಭದಲ್ಲಿ ಹಂತಕರನ್ನು ಹಿಡಿಬೇಕು ಎಂದು ಬೊಬ್ಬೆ ಹಾಕುತ್ತಿದ್ದ ಬಿಜೆಪಿಗರು ಈಗ ತಮ್ಮದೆ ಸರಕಾರ ಇದ್ದಾಗ ಕಣ್ಣು ಕಿವಿ ಮುಚ್ಕೊಂಡು ಜಾಣ ಕುರುಡನ್ನು ಪ್ರದರ್ಶಿ ಸುತ್ತಿರುವುದು ಎಷ್ಟು ಸರಿ? ಎಂದು ಜನ ಕೇಳವಂತಾಗಿದೆ.  ತಿಮ್ಮಪ್ಪ ನಾಯ್ಕ ಹಂತಕರ ಗುಂಡಿಗೆ ಬಲಿಯಾಗಿ ಇಂದಿಗೆ ಆರು ವರ್ಷ ಕಳೆದಿದೆ. ಆದರೂ ಇಲ್ಲಿಯ ತನಕ ಪೊಲೀಸ್ ಇಲಾಖೆಗೆ ಹಂತಕರ ಪತ್ತೆ ಗೆ ಸಾಧ್ಯವಾಗಿಲ್ಲ.

ಭಟ್ಕಳದಲ್ಲಿ ಲವಕುಮಾರ ಡಿವೈಸ್ಪಿ ಇದ್ದಂತಹ ಸಂದರ್ಭದಲ್ಲಿ ತಿಮ್ಮಪ್ಪ ನಾಯ್ಕ ಕೊಲೆ ಪ್ರಕರಣದ ತನಿಖೆ ಶೇ.೯೦ ರಷ್ಟು ಮುಗಿದಿದ್ದು, ಇನ್ನೇನು ಆರೋಪಿಗಳನ್ನು ಮಾತ್ರ ಬಂಧಿಸುವುದು ಬಾಕಿ ಇತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಅಂದಿನ ಸರಕಾರ ಒತ್ತಡದಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ರಾತ್ರೋರಾತ್ರಿ ಲವಕುಮಾರರನ್ನು ಸಿ‌ಓಡಿ ವರ್ಗಾಯಿಸಿದ ಪರಿಣಾಮ ಅಲ್ಲಿಂದ ಇಲ್ಲಿಯ ತನಕ ತನಿಖೆ ನಿಂತ ನೀರಾಗಿಯೇ ಇದೆ ಎಂಬುದು ಎಲ್ಲರ ಆರೋಪ. ಮುಂದೆ ಬಂದಂತಹ ಯಾವ ಪೊಲೀಸ್ ಅಧಿಕಾರಿಗಳೂ ಸಹ ತಿಮ್ಮಪ್ಪ ನಾಯ್ಕ ಕೊಲೆ ಪ್ರಕರಣದ ತನಿಖೆಯ ಬಗ್ಗೆ ಅಷ್ಟೇನು ತಲೆಕೆಡಿಸಿಕೊಳ್ಳಲಿಲ್ಲ ಎಂದೇ ಹೇಳಬಹುದಾಗಿದೆ. ತಿಮ್ಮಪ್ಪ ನಾಯ್ಕ ಕೊಲೆ ಪ್ರಕರಣ ತನಿಖೆ ಅರ್ಧಮರ್ಧಗೊಂಡು ಇಲಾಖೆಯ ಕಡತದ ರಾಶಿಯಲ್ಲಿ ಧೂಳು ತಿನ್ನುವಂತಾಗಿದೆ. ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಬೇಕು ಎಂದು ನಗರದಲ್ಲಿ ಸಾಕಷ್ಟು ಪ್ರತಿಭಟನೆಗಳು, ರಸ್ತಾರೋಖೋ,ಬಂದ್ ಕೂಡ ನಡೆಸಲಾಗಿದೆ. ಆದರೆ ಈ ಸಂದರ್ಭದಲ್ಲಿ ಅಧಿಕಾರಿಗಳು ಭರವಸೆ ಮಾತ್ರ ನೀಡಿದ್ದರೆ ಹೊರತು ಇಂದಿಗೂ ಪ್ರಕರಣವನ್ನು ಬೇಧಿಸಲು ಅವರಿಂದ ಸಾಧ್ಯವಾಗಲೇ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಲವಕುಮಾರರು ಎಲ್ಲಾ ಮಜಲುಗಳಲ್ಲಿಯೂ ತನಿಖೆ ನಡೆಸಿದ್ದು, ಸುಮಾರು ೧೬೦ ಕ್ಕೂ ಅಧಿಕ ಮಂದಿಯನ್ನು ವಿಚಾರಣೆ ನಡೆಸಿದ್ದಾರೆ. ತಿಮ್ಮಪ್ಪ ನಾಯ್ಕ ರಾಜಕೀಯ ದ್ವೇಷದಿಂದಲೇ ಕೊಲೆಯಾಗಿರಬಹುದು ಎಂಬ ಬಲವಾದ ಸಂಶಯದಿಂದ ಮೂರ‍್ನಾಲ್ಕು ಮಂದಿಯ ಮಂಪರು ಪರೀಕ್ಷೆಯನ್ನೂ ನಡೆಸಲಾಗಿದೆ. ಮಂಪುರು ಪರೀಕ್ಷೆಯಲ್ಲಿ ಶಂಕಿತ ಆರೋಪಿತರು ಸತ್ಯಾಂಶ ಹೊರಗೆಡವಿದ್ದಾರೋ ಇಲ್ಲವೋ ಎಂಬುದು ಇನ್ನೂ ನಿಗೂಢ.

 ತಿಮ್ಮಪ್ಪ ನಾಯ್ಕ ಕೊಲೆಯಾಗುವ ಸಂದರ್ಭದಲ್ಲಿ ಬಿ ಜೆ ಪಿ ವಿರೋಧ ಪಕ್ಷದ ಸ್ಥಾನದಲ್ಲಿತ್ತು. ಅಂದು ಇಂದಿನ ಮುಖ್ಯಮಂತ್ರಿಯಾಗಿರುವ ಸ್ವತ: ಯಡ್ಯೂರಪ್ಪನವರೇ ಮೃತ ತಿಮ್ಮಪ್ಪ ನಾಯ್ಕರ ಮನೆಗೆ ಬಂದು ವೀರಾವೇಷದಿಂದ ಮಾತನಾಡಿ ಹೋಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಬಿ ಜೆ ಪಿ ವಿರೋಧ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಸಾಕಷ್ಟು ಬಾರಿ ತಿಮ್ಮಪ್ಪ ನಾಯ್ಕ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಸರಕಾರದ ಮೇಲೆ ಒತ್ತಡವೂ ಹಾಕಿತ್ತು. ಮುಂದೆ ಬದಲಾದ ರಾಜಕೀಯ ಸನ್ನಿವೇಷದಲ್ಲಿ ರಾಜ್ಯದಲ್ಲಿ ಬಿ ಜೆ ಪಿ ಮತ್ತು ಜೆ ಡಿ ಎಸ್ ಸಮ್ಮಿಶ್ರಸರಕಾರ ಆಡಳಿತಕ್ಕೆ ಬಂದ ಸಂದರ್ಭದಲ್ಲಿ ಇನ್ನೇನು ತಿಮ್ಮಪ್ಪ ನಾಯ್ಕ ಕೊಲೆ ಪ್ರಕರಣ ತನಿಖೆ ಚುರುಕುಗೊಳಿಸಿ ಆರೋಪಿತರನ್ನು ಬಂಧಿಸಲಾಗುತ್ತದೆ ಎಂಬ ನಿರೀಕ್ಷೆಯನ್ನು ಮೃತ ತಿಮ್ಮಪ್ಪ ನಾಯ್ಕ ಕುಟುಂಬದವರು ಹಾಗೂ ಭಟ್ಕಳದ ಜನರು ಇಟ್ಟುಕೊಂಡಿದ್ದರು. ತಿಮ್ಮಪ್ಪ ನಾಯ್ಕ ಪ್ರಕರಣದ ಬಗ್ಗೆ ತೀವ್ರ ಹೋರಾಟ ನಡೆಸಿದ್ದ  ಶಾಸಕ ಶಿವಾನಂದ ನಾಯ್ಕರೇ ಮಂತ್ರಿಯಾದ್ದರಿಂದ ಪ್ರಕರಣ ಕೊನೆಗೊಳ್ಳುವುದು ಖಂಡಿತ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗಿತ್ತು. ಆದರೆ ಬಿ ಜೆ ಪಿಗರು ನಾವು ಸಮ್ಮಿಶ್ರ ಸರಕಾರದಲ್ಲಿದ್ದು, ಮುಖ್ಯಮಂತ್ರಿ, ಗೃಹ ಸಚಿವರು ನಮ್ಮವರಲ್ಲ. ಈಗ ಒತ್ತಡ ಹಾಕಿದರೂ ಪ್ರಯೋಜನವಿಲ್ಲ ಎಂದು ಹೇಳುತ್ತಲೇ ದಿನ ದೂಡಿದ್ದರು.

ನಂತರ ಸಮ್ಮಿಶ್ರ ಸರಕಾರ ಪತನಗೊಂಡು ರಾಜ್ಯದಲ್ಲಿ ಬಿ ಜೆ ಪಿಯದ್ದೇ ಸಂಪೂರ್ಣ ಬಹುಮತದ ಸರಕಾರ ಆಡಳಿತಕ್ಕೆ ಬಂತು. ಆಗಲೂ ಸಹ ಜನರು ತಿಮ್ಮಪ್ಪ ನಾಯ್ಕ ಕೊಲೆ ಪ್ರಕರಣ ತನಿಖೆ ಚುರುಕು ಪಡೆಯಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಬಿ ಜೆ ಪಿ ಸರಕಾರ ಆಡಳಿತಕ್ಕೆ ಬಂದು ಎರಡು ವರ್ಷವೇ ಕಳೆದರೂ ಸಹ ತಿಮ್ಮಪ್ಪ ನಾಯ್ಕ ತನಿಖೆಯ ಬಗ್ಗೆ ಮಾತ್ರ ಯಾರೂ ತುಟಿಪಿಟಿಕ್ಕೆನ್ನುತ್ತಿಲ್ಲ. ವಿರೋಧ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಪದೇ ಪದೇ ರಸ್ತಾರೋಖೋ, ಪ್ರತಿಭಟನೆ, ಬೆಂಕಿಯಂತಹ ಮಾತು ಉಗುಳುತ್ತಿದ್ದ ಬಿ ಜೆ ಪಿಗರು ಇದೀಗ ಯಾಕೋ ತಿಮ್ಮಪ್ಪ ನಾಯ್ಕ ಕೊಲೆ ಪ್ರಕರಣವನ್ನೇ ಮರೆತಂತಿದೆ. ಆಡಳಿತ ಸವಿ ಉಂಡವರೂ ಸಹ ಸುಮ್ಮನಿದ್ದಾರೆ. ತಿಮ್ಮಪ್ಪ ನಾಯ್ಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದ ಮೇಲೆ ಒತ್ತಡ ಹಾಕಲು ಬಿ ಜೆ ಪಿಗರೇ ನಿರಾಸಕ್ತರಾಗಿರುವುದಕ್ಕೆ ಕಾರಣವೇನು ಎಂಬುದು ಮಾತ್ರ ಇನ್ನೂ ನಿಗೂಢ. ತಿಮ್ಮಪ್ಪ ನಾಯ್ಕ ಮೃತರಾದ ಸಂದರ್ಭದಲ್ಲಿ ಅವರ ಮನೆಗೆ ಭೇಟಿ ನೀಡಿದ್ದ ಯಡ್ಯೂರಪ್ಪನವರೇ ಇಂದು ಮುಖ್ಯಮಂತ್ರಿಯಾಗಿದ್ದಾರೆ. ಭಟ್ಕಳದ ಪರಿಸ್ಥಿತಿಯ ಕುರಿತು ಚೆನ್ನಾಗಿ ಅರಿವು ಹೊಂದಿರುವ ಡಾ. ಚಿತ್ತರಂಜನ್‌ರ ಬೀಗರೇ ರಾಜ್ಯ ಗೃಹ ಸಚಿವರಾಗಿದ್ದಾರೆ. ಶಿವಾನಂದ ನಾಯ್ಕ ಇದೀಗ ಶಾಸಕರಲ್ಲದಿದ್ದರೂ ಸಹ ಸಂಪುಟ ದರ್ಜೆಯ ಸ್ಥಾನ ಮಾನ ಹೊಂದಿದ ಪ್ರತಿಷ್ಟಿತ ಕೆ‌ಎಸ್ಡಿ‌ಎಲ್‌ನ ಅಧ್ಯಕ್ಷರಾಗಿದ್ದಾರೆ. ತಿಮ್ಮಪ್ಪ ನಾಯ್ಕ ಹೋರಾಟದಲ್ಲಿ ಪಾಲ್ಗೊಂಡಿದ್ದ ಕಾಗೇರಿಯವರೇ ಉಸ್ತುವಾರಿ ಸಚಿವರಾಗಿದ್ದಾರೆ. ಆದರೂ ಸಹ ತಿಮ್ಮಪ್ಪ ನಾಯ್ಕರ ತನಿಖೆಗೆ ಒಂದು ಗತಿ ಕಾಣಿಸಲು ಇನ್ನೂ ಸಾಧ್ಯವಾಗದೇ ಇರುವುದು ವಿಪರ್ಯಾಸ. ತಿಮ್ಮಪ್ಪ ನಾಯ್ಕ ಪ್ರಕರಣದ ಬಗ್ಗೆ ವಿರೋಧ ಪಕ್ಷದಲ್ಲಿದ್ದಾಗಿದ್ದ  ಬಿ ಜೆ ಪಿ ಮಂದಿಯ ಆಸಕ್ತಿ, ಉತ್ಸಾಹ ಈಗ್ಯಾಕೆ ಮಾಯವಾಗಿದೆ ಎಂಬುದ ಈಗಿನ ವಿರೋಧ ಪಕ್ಷಗಳ ಪ್ರಶ್ನೆಯಾಗಿದೆ. ಇದಕ್ಕೆ ಆಡಳಿತ ಪಕ್ಷದವರೇ ಉತ್ತರಿಸಬೇಕು. ರಾಜ್ಯದಲ್ಲಿ ಬಿ ಜೆ ಪಿಯೇ ಆಡಳಿತದಲ್ಲಿದ್ದರೂ ಸಹ ಪ್ರಕರಣದ ತನಿಖೆ ಚುರುಕುಗೊಳ್ಳದೇ ನಿಂತ ನೀರಾಗಿರುವ ಬಗ್ಗೆ ತಿಮ್ಮಪ್ಪ ನಾಯ್ಕ ಕುಟುಂಬದವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಂದೆಯ ಹಂತಕನನ್ನು ಬಂಧಿಸದಿದ್ದಲ್ಲಿ ತಮ್ಮ ತಾಯಿಯೊಂದಿಗೆ ಬೆಂಗಳೂರಿನಲ್ಲೆ ಉಪವಾಸ ಸತ್ಯಾಗ್ರಹ ಕೈಗೋಳ್ಳುವುದಾಗಿ ತಿಮ್ಮಪ್ಪ ನಾಯ್ಕ ಪುತ್ರ ಸುರೇಶ ನಾಯ್ಕ ಎಚ್ಚರಿಕೆ : ತಂದೆಯವರ ಕೊಲೆ ಪ್ರಕರಣವನ್ನು ಯಾವುದೇ ಕಾರಣಕ್ಕೂ ಮುಚ್ಚಿ ಹಾಕಲು ಬಿಡುವುದಿಲ್ಲ. ಆರೋಪಿಗಳು ಯಾರೇ ಆಗಲಿ ಅವರನ್ನು ಪತ್ತೆ ಹಚ್ಚಿ ಬಂಧಿಸಬೇಕು. ಇಲ್ಲದಿದ್ದಲ್ಲಿ ಎಲ್ಲರ ಸಹಕಾರದೊಂದಿಗೆ ಉಪವಾಸ ಸತ್ಯಾಗ್ರಹ ಆರಂಭಿಸಬೇಕಾದೀತು ಎಂದು ದಿ.ತಿಮ್ಮಪ್ಪ ನಾಯ್ಕರ ಪುತ್ರ ಸುರೇಶ ನಾಯ್ಕ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಮ್ಮ ತಂದೆ ಕೊಲೆಯಾಗಿ ಇಂದಿಗೆ ಆರು ವರ್ಷಗಳು ಸಂದಿದೆ. ಆದರೂ ಹಂತಕರು ಯಾರು ಎಂಬುದು ಇನ್ನೂ ತನಕ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಒಂದು ಹಂತದಲ್ಲಿ ತನಿಖೆ ಮುಗಿದು, ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂಬ ಸುದ್ದಿ ಬಂದಿತ್ತು. ಆದರೆ ಇಂದು ತನಿಖೆ ಯಾವ ಹಂತದಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಪ್ರಕರಣದ ಬಗ್ಗೆ ಯಾಕೆ ನಿರಾಸಕ್ತಿ ವಹಿಸಲಾಗಿದೆ ಎಂಬುದು ಗೊತ್ತಿಲ್ಲ. ರಾಜ್ಯದಲ್ಲಿ ಇದೀಗ ಬಿ ಜೆ ಪಿ ನೇತೃತ್ವದ್ದೇ ಸರಕಾರ ಆಡಳಿತ ನಡೆಸುತ್ತಿದೆ. ಕಳೆದ ವರ್ಷ ಮುಖ್ಯಮಂತ್ರಿಯವರು ಮುರ್ಡೇಶ್ವರಕ್ಕೆ ಬಂದಂತಹ ಸಂದರ್ಭದಲ್ಲಿ ಪ್ರಕರಣದ ತನಿಖೆಗೆ ಚುರುಕು ಮೂಡಿಸಿ ಆರೋಪಿಗಳನ್ನು ಬಂಧಿಸುವಂತೆ ಮನವಿ ಸಲ್ಲಿಸಲಾಗಿತ್ತು. ಅಂದು ಮುಖ್ಯಮಂತ್ರಿಯವರು ಪ್ರಕರಣದ ತನಿಖೆಗೆ ಚುರುಕು ನೀಡಿ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂಬ ಭರವಸೆ ನೀಡಿದ್ದರು. ಆದರೆ ಇಂದಿಗೂ ಭರವಸೆ ಭರಸವೆಯಾಗಿದೆಯೇ ಹೊರತು ಯಾರೂ ಕೂಡ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ನಮ್ಮ ತಂದೆಯವರಿಗಾದ ಸ್ಥಿತಿ ಯಾರಿಗೂ ಆಗಬಾರದು ಎಂಬುದು ನಮ್ಮ ಆಶಯ. ಕೂಡಲೇ ತನಿಖೆಯನ್ನು ಚುರುಕುಗೊಳಿಸಿ ಆರೋಪಿತರನ್ನು ಪತ್ತೆ ಬಂಧಿಸಬೇಕು. ಇಲ್ಲದಿದ್ದಲ್ಲಿ ತಾಯಿಯೊಂದಿಗೆ ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುತ್ತದೆ ಎಂದು ಅವರು ಹೇಳಿದರು.


Share: