ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ರೈತರ ಇಚ್ಛೆಗೆ ವಿರುದ್ಧವಾಗಿ ಭೂಸ್ವಾಧೀನ ಇಲ್ಲ - ಯಡಿಯೂರಪ್ಪ ಘೋಷಣೆ

ಬೆಂಗಳೂರು: ರೈತರ ಇಚ್ಛೆಗೆ ವಿರುದ್ಧವಾಗಿ ಭೂಸ್ವಾಧೀನ ಇಲ್ಲ - ಯಡಿಯೂರಪ್ಪ ಘೋಷಣೆ

Wed, 06 Jan 2010 16:59:00  Office Staff   S.O. News Service
ಬೆಂಗಳೂರು,ಜನವರಿ 6:ರೈತರ ಇಚ್ಚೆಗೆ ವಿರುದ್ಧವಾಗಿ ಬಲವಂತ ಭೂಸ್ವಾಧೀನ ಮಾಡಿಕೊಳ್ಳದಿರಲು ನಿರ್ಧರಿಸಲಾಗಿದೆ ಎಂದು ಇಂದಿಲ್ಲಿ ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ದಾವಣಗೆರೆ ರೈತರ ಮೇಲೆ ಹೂಡಿರುವ ಎಲ್ಲಾ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಲಾಗಿದೆ ಎಂದು ಘೋಷಿಸಿದ್ದಾರೆ. 

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಇಚ್ಚೆಗೆ ವಿರುದ್ಧವಾಗಿ ಭೂ ಸ್ವಾಧೀನಮಾಡಿಕೊಳ್ಳುವುದಿಲ್ಲ. ಇದೀಗ ಕೈಗೊಳ್ಳುತ್ತಿರುವ ಭೂ ಸ್ವಾಧೀನ ಪ್ರಕ್ರಿಯೆಗೆ ತಾತ್ಕಾಲಿಕೆ ತಡೆಯಾಜ್ಞೆ ನೀಡಲಾಗುವುದು ಎಂದು ಹೇಳಿದರು. 

ರೈತ ಸಮುದಾಯ ಕೂಡ ಅನಗತ್ಯವಾಗಿ ಚಳವಳಿ, ಹೋರಾಟ ನಡೆಸಬಾರದು. ಸರ್ಕಾರದೊಂದಿಗೆ ಸಹಕರಿಸಬೇಕು. ಸರ್ಕಾರವೂ ಕೂಡ ಅವರ ಭಾವನೆಗಳಿಗೆ ಗೌರವ ಕೊಟ್ಟು ಬಲವಂತದ ಭೂ ಸ್ವಾಧೀನಮಾಡಿಕೊಳ್ಳುವುದಿಲ್ಲ. ಇದನ್ನು ರೈತ ಸಮುದಾಯ ಕೂಡ ಅರ್ಥಮಾಡಿಕೊಳ್ಳಬೇಕೆಂದು ಮನವಿ ಮಾಡಿದರು. 

ಇದಲ್ಲದೇ ಭೂ ಸ್ವಾಧೀನ ವಿರೋಧಿಸಿ ಹೋರಾಟ ನಡೆಸಿದ ದಾವಣಗೆರೆ ರೈತರ ಮೇಲೆ ಹೂಡಿರುವ ಎಲ್ಲಾ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗುವುದು. ರೈತರ ಕಷ್ಟ ಸುಖಗಳಿಗೆ ಈ ಸರ್ಕಾರ ಸ್ಪಂದಿಸಲಿದೆ ಎಂದು ನುಡಿದರು. 

ಸರಕು ಸೇವಾ ತೆರಿಗೆ:ರಾಜ್ಯದಲ್ಲಿ ಬರುವ ಏಪ್ರಿಲ್‌ನಿಂದ ಸರಕು ಸೇವಾ ತೆರಿಗೆ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದ್ದರೂ ಇದನ್ನು ಜಾರಿಗೆ ತರುವ ಬಗ್ಗೆ ರಾಜ್ಯ ಸರ್ಕಾರ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು. 

ಈ ತಿಂಗಳ 13 ರಂದು ದೆಹಲಿಗೆ ತೆರಳುತ್ತಿದ್ದು, ಅಲ್ಲಿ ಕೇಂದ್ರ ವಿತ್ತ ಸಚಿವರ ಜೊತೆ ಸಮಾಲೋಚನೆ ನಡೆಸಲಾಗುವುದು. ಆ ನಂತರ ಪರಿಸ್ಧಿತಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. 

ಪ್ರತಿಕ್ರಿಯೆ ಇಲ್ಲ: ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರಿಗೆ ಗಡಿ ರೇಖೆ ವಿರೂಪಗೊಳಿಸಿರುವ ಹಿನ್ನೆಲೆಯಲ್ಲಿ ಸೆಂಡೂರು ನ್ಯಾಯಾಲಯ ಜಾಮೀನುರಹಿತ ವಾರೆಂಟ್ ಹೊರಡಿಸಿರುವ ಬೆಳವಣಿಗೆ ಕುರಿತು ಪ್ರತಿಕ್ರಯಿಸಲು ಯಡಿಯೂರಪ್ಪ ನಿರಾಕರಿಸಿದರು.

Share: