ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ರಾಜ್ಯದ 5000 ಮಕ್ಕಳಿಗೆ ಹೃದ್ರೋಗ!

ಬೆಂಗಳೂರು: ರಾಜ್ಯದ 5000 ಮಕ್ಕಳಿಗೆ ಹೃದ್ರೋಗ!

Wed, 02 Dec 2009 03:37:00  Office Staff   S.O. News Service
ಬೆಂಗಳೂರು, ಡಿ.೧: ನಮ್ಮ ಮಕ್ಕಳು ಎಷ್ಟು ಆರೋಗ್ಯವಂತರು? 
 
ರಾಜ್ಯದಲ್ಲಿ ಶಾಲೆಗಳಿಗೆ ತೆರಳುತ್ತಿರುವ ಮಕ್ಕಳ ಪೈಕಿ ಶೇ. ೧೦ರಷ್ಟು ಮಕ್ಕಳಲ್ಲಿ ಏನಾದರೊಂದು ಆರೋಗ್ಯ ಸಮಸ್ಯೆ ಕಾಡುತ್ತಿದೆ. 
ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಡಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ನಡೆವ ಆಂದೋಲನದಲ್ಲಿ ಲಕ್ಷಾಂತರ ಮಕ್ಕಳು ಆಗಸ್ಟ್‌ನಲ್ಲಿ ಆರೋಗ್ಯ ತಪಾಸಣೆಗೊಳಪಟ್ಟಿದ್ದು, ಇವರ ಪೈಕಿ ಸಾಕಷ್ಟು ಮಕ್ಕಳು ವಿವಿಧ ರೋಗಗಳಿಂದ ಬಳಲುತ್ತಿದ್ದಾರೆ. ಸರ್ಕಾರದಿಂದ ಈ ಮಕ್ಕಳಿಗೆ ಉಚಿತ ಚಿಕಿತ್ಸೆ ಕೊಡಿಸುವ ಕಾರ್ಯಕ್ರಮವೂ ಚಾಲ್ತಿಯಲ್ಲಿದೆ. 

ರೋಗಪತ್ತೆ: ಆಗಸ್ಟ್ ಮಾಸವನ್ನು ಸುವರ್ಣ ಆರೋಗ್ಯ ಚೈತನ್ಯ ಮಾಸವೆಂದು ರಾಜ್ಯಾದ್ಯಂತ ಆಚರಿಸಲಾಯಿತು. ಈ ತಿಂಗಳಲ್ಲಿ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಕೆಲವು ಅನುದಾನ ರಹಿತ ಶಾಲೆಗಳ ಮಕ್ಕಳನ್ನು ಆರೋಗ್ಯ ತಪಾಸಣೆಗೊಳಪಡಿಸಲಾಯಿತು. ೬೨,೯೫,೩೭೧ ಮಕ್ಕಳು ತಪಾಸಣೆಗೊಳಪಟ್ಟಿದ್ದು, ಇವರ ಪೈಕಿ ೬,೮೫,೦೮೧ ಮಕ್ಕಳು ವಿವಿಧ ರೋಗ -ಬಾಧೆಯಿಂದ ಬಳಲುತ್ತಿದ್ದಾರೆ. 
 
ಪ್ರಮುಖವಾಗಿ ೨ ಲಕ್ಷಕ್ಕೂ ಅಧಿಕ ಮಕ್ಕಳು ಹುಳುಕು ಹಲ್ಲಿನ ಸಮಸ್ಯೆಯಲ್ಲಿದ್ದಾರೆ. ಇದರಲ್ಲಿ ಬೆಳಗಾವಿ ಪಾಲು ಹೆಚ್ಚು. ಈ ಜಿಲ್ಲೆಯಲ್ಲಿ ೬೧,೮೩೦ ಮಕ್ಕಳು ಸಮಸ್ಯೆ ಎದುರಿಸುತ್ತಿದ್ದರೆ, ಶಿವಮೊಗ್ಗದಲ್ಲಿ ೨೦,೧೮೦, ಬಳ್ಳಾರಿಯಲ್ಲಿ ೧೯,೭೫೩, ಕಾರವಾರದಲ್ಲಿ ೧೯೫೫೨ ಮಕ್ಕಳು ಈ ಬಾಧೆಯಿಂದ ಬಳಲುತ್ತಿದ್ದಾರೆ. 
ಇನ್ನು ಒಂದು ಲಕ್ಷಕ್ಕೂ ಅಧಿಕ ಮಕ್ಕಳಲ್ಲಿ ಜಂತುಹುಳು ಸಮಸ್ಯೆ ಕಾಣಿಸಿಕೊಂಡಿದೆ. ಇದೇ ರೀತಿ ೪೧೭೬೫ ಮಕ್ಕಳಲ್ಲಿ ಶ್ವಾಸಕೋಶದ ಮೇಲ್ಭಾಗಕ್ಕೆ ಸೋಂಕು ತಗುಲಿದೆ. ಪ್ರಮುಖವಾಗಿ ರಕ್ತಹೀನತೆ ಮಕ್ಕಳಲ್ಲಿ ಕಾಣ ಬರುವಂತ ಸಾಮಾನ್ಯ ಸಂಗತಿ. ಒಟ್ಟಾರೆ ರಾಜ್ಯದಲ್ಲಿ ಒಂದು ಲಕ್ಷ ಸಂಖ್ಯೆಯ ಸಮೀಪದಲ್ಲಿ ಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಇಲ್ಲೂ ಸಹ ಬೆಳಗಾವಿಯೇ ಮುಂದೆ (೧೮೫೨೬).  
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ವಿಟಮಿನ್ ಎ ಕೊರತೆ ಹೊಂದಿರುವ ಮಕ್ಕಳ ಪ್ರಮಾಣ ಕಡಿಮೆಯಾಗಿದೆ. ಇದರಲ್ಲಿ ಬಿಸಿಯೂಟದ ಪ್ರಭಾವವೂ ಇರಬಹುದೆಂದು ಅಂದಾಜಿಸಲಾಗಿದೆ. ೧೭,೩೦೬ ಮಕ್ಕಳಲ್ಲಿ ವಿಟಮಿನ್ ಎ 
ಕೊರತೆ ಇದೆ. ವಿಶೇಷವೆಂದರೆ ೫ ಸಾವಿರಕ್ಕೂ ಹೆಚ್ಚು ಮಕ್ಕಳು ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದಾರೆ. ಕುಷ್ಟ, ಕ್ಷಯ, ಗಳಗಂಡದಿಂದಲೂ ಬಳಲುತ್ತಿರುವ ಶಾಲಾ ಮಕ್ಕಳಿದ್ದಾರೆ. ಒಟ್ಟಾರೆಯಾಗಿ ಪರೀಕ್ಷೆಗೊಳಪಟ್ಟ ಮಕ್ಕಳ ಪೈಕಿ ಶೇ.೧೦ರಷ್ಟು ಮಂದಿ ಪ್ರಮುಖ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. 

ಸರ್ಕಾರದ ಚಿಕಿತ್ಸೆ: ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಡಿ ಶಾಲಾ ಮಕ್ಕಳಲ್ಲಿ ಕಾಣಿಸಿಕೊಂಡಿರುವ ಆರೋಗ್ಯ ಸಮಸ್ಯೆಯ ಚಿಕಿತ್ಸೆಗೆ ಆಗುವ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. 
ತಾಲೂಕು ಮಟ್ಟದ ಆರೋಗ್ಯ ಕೇಂದ್ರಗಳಲ್ಲಿ ಸಮಸ್ಯೆ ಪರಿಹಾರವಾಗುತ್ತದೆಂದರೆ ಅಲ್ಲೇ ಚಿಕಿತ್ಸೆ ಕೊಡಿಸಲಾಗುತ್ತದೆ. ಅಲ್ಲೂ ಆಗಲಿಲ್ಲವೆಂದರೆ ಜಿಲ್ಲಾ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಬಗೆಹರಿಯದ ಸಮಸ್ಯೆಯನ್ನು ರಾಜಧಾನಿ ಅಥವಾ ಪ್ರಮುಖ ನಗರದ ಆಸ್ಪತ್ರೆಯಲ್ಲೂ ಚಿಕಿತ್ಸೆ ಕೊಡಿಸಲಾಗುತ್ತದೆ. ಇದಕ್ಕೆ ತಗಲುವ ವೆಚ್ಚವನ್ನು ಸರ್ಕಾರ ಭರಿಸುತ್ತದೆ ಎಂದು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ವಿವರಿಸುತ್ತಾರೆ. 


ಏನು ಕಾಯಿಲೆ? ಎಷ್ಟು ಮಕ್ಕಳಿಗೆ 

-      ಹುಳುಕು ಹಲ್ಲು.......೫೫೬೬೪ 
-      ಜಂತುಹುಳು.........೧೨೮೬೮೬ 
-      ರಕ್ತಹೀನತೆ................೯೨೬೮೪ 
-      ಶ್ವಾಸಕೋಶ ಮೇಲ್ಭಾಗದ 

ಸೋಂಕು..................೪೧೭೬೫ 
-      ಕಿವಿ ಸೋರುವಿಕೆ.......೧೮೪೩೧ 
-      ದೃಷ್ಟಿದೋಷ............೧೮೩೭೨ 
-      ವಿಟಮಿನ್ ಎ ಕೊರತೆ.,೧೭೩೦೬ 
-      ಹೃದಯ ತೊಂದರೆ......೫೩೪೮ 
-      ಕಿವುಡು.......................೨೨೪೫ 
-      ಗಳಗಂಡ.........................೧೬೧ 
-      ಕುಷ್ಟ.................................೩೪ 
-      ಕ್ಷಯ................................೮೪ 
-      ಇತರೆ ತೊಂದರೆ........೬೩೬೦೫

ಸೌಜನ್ಯ: - ಶ್ರೀಕಾಂತ್ ಭಟ್, ಕನ್ನಡಪ್ರಭ


Share: