ಮಂಗಳೂರು, ಫೆ. ೨೧: ನಗರದ ಕುಲಶೇಖರ ಹೋಲಿ ಕ್ರಾಸ್ ಚರ್ಚ್ ಆವರಣಕ್ಕೆ ಶನಿವಾರ ಕಿಡಿಗೇಡಿಗಳು ಅಕ್ರಮ ಪ್ರವೇಶ ಮಾಡಿ ಅಲ್ಲಿನ ಸೈಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಮತ್ತು ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳ ಬಾಗಿಲುಗಳ ಬೀಗಗಳಿಗೆ ಗ್ಲೂ ಅಥವಾ ಎಂಸೀಲ್ ಹಾಕಿ ಬೀಗ ತೆಗೆಯದಂತೆ ಮಾಡಿದ್ದಾರೆ ಮಾತ್ರವಲ್ಲದೆ ಶಾಲಾ ವಠಾರದಲ್ಲಿ ಕುಂಡಗಳಲ್ಲಿ ನೆಟ್ಟಿದ್ದ ಹೂವಿನ ಗಿಡಗಳನ್ನು ನಾಶ ಪಡಿಸಿದ್ದಾರೆ.
ಶನಿವಾರ ಅಪರಾಹ್ನ ಮತ್ತು ರಾತ್ರಿ ಪ್ರತ್ಯೇಕ ಘಟನೆಗಳಲ್ಲಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಶಾಲೆ ಸಂಚಾಲಕ ಹಾಗೂ ಚರ್ಚ್ನ ಧರ್ಮಗುರು ಫಾ| ವಲೇರಿಯನ್ ಪಿಂಟೊ ಅವರು ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಶನಿವಾರ ರಾತ್ರಿ ೭.೪೫ ರ ವೇಳೆಗೆ ರಾತ್ರಿ ಪಾಳಿಯ ಕಾವಲುಗಾರನಿಗೆ ಶಾಲೆಯ ಆವರಣದಲ್ಲಿ ನಾಯಿ ಮರಿಯೊಂದು ಕೂಗುತ್ತಿರುವುದು ಕೇಳಿಸಿತ್ತು. ಅದರ ಜಾಡು ಹಿಡಿದು ಹುಡುಕಿದಾಗ ನಾಯಿ ಮರಿ ಶಾಲೆಯ ಒಂದು ಕೊಠಡಿಯೊಳಗೆ ಇರುವುದು ಕಂಡು ಬಂತು. ಶಾಲಾ ಕೊಠಡಿಯಲ್ಲಿ ನಾಯಿ ಮರಿ ಸೇರಿಕೊಂಡಿದ್ದ ವಿಚಾರವನ್ನು ಕಾವಲುಗಾರನು ಧರ್ಮಗುರು ಗಳಿಗೆ ತಿಳಿಸಿ ಅದನ್ನು ಹೊರಗೆ ಹಾಕಲು ಬೀಗದ ಕೀ ಕೊಡಿ ಎಂದು ಕೇಳಿದ್ದನು. ಅದರ ಪ್ರಕಾರ ಬೀಗದ ಕೀ ತೆಗೆದುಕೊಂಡು ಬಂದ ವಾಚ್ಮನ್ ಬೀಗ ತೆಗೆಯಲು ಪ್ರಯತ್ನಿಸಿದಾಗ ಬೀಗದ ತೂತಿಗೆ ಗಮ್ ಹಾಕಿ ಮುಚ್ಚಿರುವುದು ಕಂಡು ಬಂತು.
ಪರಿಶೀಲಿಸಿದಾಗ ಸೈಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಚಾವಡಿಯಲ್ಲಿರುವ ೨ ಬಾಗಿಲುಗಳ ಬೀಗಗಳಿಗೆ ಹಾಗೂ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಹೈಸ್ಕೂಲಿನ ಎರಡು ಶಾಲಾ ಕೊಠಡಿಗಳ ಬೀಗಗಳಿಗೆ ಮತ್ತು ಗೇಟಿನ ಬೀಗಕ್ಕೂ ಅದೇ ರೀತಿ ಗ್ಲೂ ಅಥವಾ ಎಂಸೀಲ್ ಹಾಕಿ ಬೀಗ ತೆಗೆಯದ ಹಾಗೆ ಮಾಡಿರುವ ಸಂಗತಿ ಗಮನಕ್ಕೆ ಬಂತು. ಇಬ್ಬರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಸ್ತು ಸ್ಥಿತಿಯನ್ನು ಪರಿಶೀಲಿಸಿ ಹಿಂತಿರುಗಿದರು.
ರವಿವಾರ ಬೆಳಗ್ಗೆ ಶಾಲೆಯ ಬಳಿ ಬಂದು ಪರಿಶೀಲಿಸಿದಾಗ ಶಾಲೆಯ ಹಿಂಬದಿಯಲ್ಲಿರುವ ಶೌಚಾಲಯದ ೫ ಬೀಗಗಳಿಗೆ ಅದೇ ರೀತಿ ಗ್ಲೂ ಅಥವಾ ಎಂಸೀಲ್ ಹಾಕಿರುವುದು ಹಾಗೂ ಅಲ್ಲಿ ಕುಂಡಗಳಲ್ಲಿ ನೆಟ್ಟಿದ್ದ ಹೂಗಿಡಗಳನ್ನು ಧ್ವಂಸ ಮಾಡಿರುವುದು ಕಂಡು ಬಂತು.
ಧರ್ಮಗುರು ಕದ್ರಿ ಠಾಣೆಗೆ ಲಿಖಿತವಾಗಿ ದೂರು ನೀಡಿದರು.
ಆರೋಪಿಗಳ ಬಂಧನಕ್ಕೆ ಆಗ್ರಹ
ಮಂಗಳೂರು: ಈ ದುಷ್ಕೃತ್ಯವನ್ನು ಗಂಭೀರವಾಗಿ ಪರಿಗಣಿಸ ಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಿಡಿಗೇಡಿಗಳು ಚರ್ಚ್ ವಠಾರದಲ್ಲಿರುವ ಇತರ ಗೇಟುಗಳಿಗೆ ಮತ್ತು ಚರ್ಚ್ ಕಟ್ಟಡದ ಬಾಗಲಿನ ಬೀಗಗಳಿಗೂ ಇದೇ ರೀತಿ ಮಾಡಿ ಶಾಂತಿ ಭಂಗ ಉಂಟು ಮಾಡುವ ಸಾಧ್ಯತೆ ಇದೆ. ಪರಿಸರದ ಶಾಂತಿಯನ್ನು ಕದಡಲು ಕೆಲವು ವ್ಯಕ್ತಿಗಳು ಮತ್ತು ಸಂಘಟನೆಗಳು ಕೆಲವು ಸಮಯದಿಂದ ನಿರಂತರ ಪ್ರಯತ್ನ ನಡೆಸುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಧರ್ಮಗುರುಗಳು ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ವಿವರಿಸಿದ್ದಾರೆ.
ಪೊಲೀಸರು ಕೂಡಲೇ ಗಮನ ಹರಿಸಿ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಅವರ ವಿರುದ್ಧ ಸೂಕ್ತ ಕ್ರಮ ಜರಗಿಸ ಬೇಕು ಎಂದು ಚರ್ಚ್ನ ಕ್ರೈಸ್ತ ಮುಖಂಡ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸುಶಿಲ್ ನೊರೋನ್ಹಾ ಅವರು ಒತ್ತಾಯಿಸಿದ್ದಾರೆ.
ರವಿವಾರ ಅಪರಾಹ್ನ ಕದ್ರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶಾಲಾ ಆಡಳಿತದವರು ಎಂಸೀಲ್ ಹಾಕಿದ ಬೀಗಗಳನ್ನು ಒಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ಸ್ಪೆಕ್ಟರ್ ನಿರಂಜನ್ರಾಜ್ ಅರಸ್ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಗ್ಲೂ/ ಎಂಸೀಲ್: ಎಂಸೀಲ್ ಎಂದರೆ ಅದೊಂದು ಅಂಟು ದ್ರವ. ಅದನ್ನು ಬೀಗದ ತೂತಿಗೆ ಹಾಕಿದರೆ ಲೋಹದ ಹಾಗೆ ಗಟ್ಟಿಯಾಗಿ ರಂಧ್ರವು ಮುಚ್ಚಲ್ಪ ಡುತ್ತದೆ. ಲೋಹದ ತೂತು ಮುಚ್ಚವು ಇದನ್ನು ಉಪಯೋಗಿಸುತ್ತಾರೆ. ಗ್ಲೂ ಅಥವಾ ಎಂಸೀಲ್ ಹಾಕಿದ ಬೀಗವನ್ನು ಬಳಿಕ ಕೀ ಮೂಲಕ ತೆಗೆಯಲು ಸಾಧ್ಯ ವಿಲ್ಲ. ಬೀಗವನ್ನು ಒಡೆದೇ ತೆಗೆಯ ಬೇಕಾಗುತ್ತದೆ. ಸೈಂಟ್ ಜೋಸೆಫ್ ಶಾಲೆಯ ೧೦ ಬೀಗಗಳಿಗೆ ಕಿಡಟಿಗೇಡಿಗಳು ಈ ರೀತಿ ಎಂಸೀಲ್ ಹಾಕಿದ್ದಾರೆ.
ಉರೂಸ್ ಬ್ಯಾನರ್ಗಳಿಗೆ ಬೆಂಕಿ
ಮಂಗಳೂರು: ಉಳಾಯಿಬೆಟ್ಟು ಶಾಲೆ ಜುಮಾ ಮಸೀದಿಯಲ್ಲಿ ಫೆ. ೨೩ ರಿಂದ ೨೭ ರವರೆಗೆ ನಡೆಯಲಿರುವ ಉರೂಸ್ ಸಮಾರಂಭಕ್ಕೆ ಸಂಬಂಧಿಸಿ ವಾಮಂಜೂರು ಸಮೀಪದ ಪರಾರಿ ದ್ವಾರದ ಬಳಿ ರಸ್ತೆ ಬದಿ ಹಾಕಿದ್ದ ೨ ಬ್ಯಾನರ್ಗಳನ್ನು ಶನಿವಾರ ರಾತ್ರಿ ಕಿಡಿಗೇಡಿಗಳು ಬೆಂಕಿ ಕೊಟ್ಟು ಸುಟ್ಟು ಹಾಕಿದ್ದಾರೆ.
ಈ ಕುರಿತು ಉರೂಸ್ ಕಮಿಟಿಯ ಅಧ್ಯಕ್ಷ ಕೆ. ಮಹಮದ್ ಸಿರಾಜ್ ಅವರು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೇಸು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.