ಕಾಸರಗೋಡು, ಅ.27: ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಮತ್ತು ಅಮಾಯಕರ ವಿರುದ್ಧ ಪೊಲೀಸರು ಸುಳ್ಳು ಮೊಕದ್ದಮೆಗಳನ್ನು ದಾಖಲಿಸುವುದನ್ನು ವಿರೋಧಿಸಿ ಮುಸ್ಲಿಂ ಲೀಗ್ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿವರೆಗೆ ನಡೆಸಿದ ಪ್ರತಿಭಟನಾ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿತು.
ಮೆರವಣಿಗೆಯ ವೇಳೆ ಕಲ್ಲು ತೂರಾಟ,ಲಾಠಿ ಪ್ರಹಾರ ಮತ್ತು ಅಶ್ರುವಾಯು ಪ್ರಯೋಗಕ್ಕೆ ಸಿಲುಕಿ ಪತ್ರಕರ್ತರು, ಪೊಲೀಸರು ಸೇರಿದಂತೆ ಹಲವರು ಗಾಯಗೊಂಡರು. ವಿದ್ಯಾ ನಗರ ಜಂಕ್ಷನ್ನಿಂದ ಹೊರಟ ಮೆರವಣಿಗೆಯನ್ನು ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಮೀಪ ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾನಿರತರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದರು ಎನ್ನಲಾಗಿದೆ. ಕೆಲವರು ಪೊಲೀಸ್ ತಡೆಯನ್ನು ಭೇದಿಸಲು ಯತ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಪ್ರತಿಭಟನಕಾರರನ್ನು ಹತೋಟಿಗೆ ತರಲು
ಅಶ್ರುವಾಯು ಬಳಸಬೇಕಾಯಿತು. ಸುಮಾರು ಒಂದು ತಾಸು ಕಾಲ ಸ್ಥಳದಲ್ಲಿ ಉದ್ವಿಗ್ನ ವಾತವರಣ ನಿರ್ಮಾಣಗೊಂಡಿತ್ತು. ಕಲ್ಲು ತೂರಾಟದಿಂದ ಗಾಯಗೊಂಡವ ರಲ್ಲಿ ಪತ್ರಕರ್ತ ಅಬ್ದುಲ್ಲ ಕುಂಞಿ, ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯದರ್ಶಿ ಕೆ.ಅಬ್ದುಲ್ಲ ಕುಂಞಿ ಸೇರಿದ್ದಾರೆ.
ಈ ಮೊದಲು ಪ್ರತಿಭಟನೆಯನ್ನು ಸಂಸದ ಇ.ಟಿ.ಅಹ್ಮದ್ ಬಶೀರ್ ಉದ್ಘಾಟಿಸಿದರು. ಯೂತ್ ಲೀಗ್ ಜಿಲ್ಲಾಧ್ಯಕ್ಷ ಅಬ್ದುಲ್ಲ ಕುಂಞಿ ಚೆರ್ಕಳ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ, ಶಾಸಕ ಸಿ.ಟಿ.ಅಹ್ಮದಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಖಮರುದ್ದೀನ್, ಉಪಾಧ್ಯಕ್ಷ ಪಿ.ಬಿ.ಅಬ್ದುರ್ರಝಾಕ್, ಟಿ.ಇ.ಅಬ್ದುಲ್ಲ, ಸಿ.ಎಚ್.ಮುಹಮ್ಮದ್ ಕುಂಞಿ, ಎಂ.ಎ.ಸಮದ್, ಎ.ಎ.ಜಲೀಲ್ ಮೊದಲಾದವರು ಪ್ರತಿಭಟನೆಯಲ್ಲಿ
ಪಾಲ್ಗೊಂಡಿದ್ದರು.