ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ರಾ.ಹೆದ್ದಾರಿ ಅಗಲೀಕರಣ ಕುರಿತ ವಿಚಾರ ಸಂಕಿರಣ - ಆಯೋಜಿಸಿದ ಭಟ್ಕಳ ತಾಲ್ಲೂಕು ವರ್ತಕರ ಸಂಘ

ಭಟ್ಕಳ: ರಾ.ಹೆದ್ದಾರಿ ಅಗಲೀಕರಣ ಕುರಿತ ವಿಚಾರ ಸಂಕಿರಣ - ಆಯೋಜಿಸಿದ ಭಟ್ಕಳ ತಾಲ್ಲೂಕು ವರ್ತಕರ ಸಂಘ

Tue, 02 Feb 2010 18:23:00  Office Staff   S.O. News Service

ಭಟ್ಕಳ, ಫೆಬ್ರವರಿ ೨: ಭಟ್ಕಳ ತಾಲೂಕಾ ವರ್ತಕರ ಸಂಘವು ಸೋಮವಾರದಂದು ಸಂಜೆ ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ೧೭ ರ ಅಗಲೀಕರಣ, ಬೈಪಾಸ್ ರಸ್ತೆ ನಿರ್ಮಾಣದ ಕುರಿತಂತೆ ಅದರ ಸಾಧಕ ಬಾಧಕಗಳನ್ನು ಚರ್ಚಿಸಲು ವಿವಿಧ ಸಂಘ ಸಂಸ್ಥೆಗಳ ಮುಖಂಡರ ಹಾಗೂ ಗಣ್ಯರನ್ನೊಳಗೊಂಡಂತೆ ಸಭೆಯನ್ನು ಆಯೋಸಿತ್ತು. ತಂಝೀಮ್, ಅಂಜುಮನ್ ಹಾಮಿಯೆ ಮುಸ್ಲಿಮೀನ್, ಸೇವಾ ವಾಹಿನಿ, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಮುಖಂಡರು ಇದರಲ್ಲಿ ಭಾಗವಹಿಸಿದ್ದರು.

 

 

2-bkl4.jpg 

 

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ಜೆ.ಡಿ. ನಾಯ್ಕ ಕೇಂದ್ರ ಸರಕಾರ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರದೇಶದಲ್ಲಿ ೬ ಲೈನ್ ಹೆದ್ದಾರಿಯನ್ನು ನಿರ್ಮಿಸಲಿದ್ದು, ಅದಕ್ಕಾಗಿ ರಸ್ತೆಯ ಎಡ ಹಾಗೂ ಬಲಗಡೆಯ ೬೦ ಮೀಟರ್ ಸ್ಥಳವನ್ನು ವಿಸ್ತರಿಸಲಿದೆ. ಭಟ್ಕಳ ನಗರದಲ್ಲೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ೬೦ ಮೀಟರ್ ವಿಸ್ತರಿಸಿದಲ್ಲಿ ಹೆದ್ದಾರಿ ಬದಿಯಲ್ಲಿನ ಮನೆ,ಕಟ್ಟಡಗಳು ಖುಲ್ಲಾಪಡಿಸಬೇಕಾದ ಅನಿವಾರ್ಯತೆ ಬರಲಿದೆ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಭಟ್ಕಳದಲ್ಲಿ ಬೈಪಾಸ್ ರಸ್ತೆಯನ್ನೇ ನಿರ್ಮಿಸುವುದು ಉತ್ತಮ. ಈ ಬಗ್ಗೆ ನಡೆಯುವ ಯಾವುದೇ ಹೋರಾಟಕ್ಕೆ ತಮ್ಮ ಬೆಂಬಲ ಸದಾ ಇದೆ ಎಂದರು. ಈ ಭಾಗದಲ್ಲಿ ಇನ್ನೂ ಸರ್ವೆ ಕಾರ್ಯ ಅಧಿಕೃತವಾಗಿ ಆರಂಭಗೊಳ್ಳದೇ ಇರುವುದರಿಂದ ಈಗಿಂದಲೇ ಬೈಪಾಸ್ ರಸ್ತೆ ನಿರ್ಮಿಸಬೇಕೆಂದು ಒತ್ತಡ ಹೇರಬೇಕಾದ ಅಗತ್ಯತೆ ಇದೆ. ಕೂಡಲೇ ಹೋರಾಟದ ಬಗ್ಗೆ ಸಮಿತಿಯೊಂದನ್ನು ರಚಿಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಾರ್ಯಪ್ರವೃತ್ತರಾಗಬೇಕಿದೆ. ಭಟ್ಕಳದಲ್ಲಿ ಬೈಪಾಸ್ ರಸ್ತೆ ನಿರ್ಮಿಸುವಂತೆ ಹೆದ್ದಾರಿ ನಿಗಮದ ಅಧ್ಯಕ್ಷರಿಗೆ ಹಾಗೂ ಕೇಂದ್ರ ಭೂಸಾರಿಗೆ ಸಚಿವರ ಬಳಿ ನಿಯೋಗ ಒಯ್ದು ಒತ್ತಡ ಹೇರಿದರೆ ಇನ್ನಷ್ಟು ಅನುಕೂಲ ಎಂದ ಅವರು ಈ ಬಗ್ಗೆ ತಮ್ಮಿಂದಾಗುವ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಅವರು ಭರವಸೆ ನೀಡಿದರು. ತಾಲೂಕು ವರ್ತಕರ ಸಂಘದ ಅಧ್ಯಕ್ಷ ವೆಂಕಟೇಶ ಪ್ರಭು ಮಾತನಾಡಿ ಭಟ್ಕಳವು ಜನದಟ್ಟಣೆಯ ಪ್ರದೇಶವಾಗುತ್ತಿರುವುದುಕ್ಕೆ ಇಲ್ಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವ್ಯಾಸಂಗವನ್ನು ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಿಂದಲೆ ತಿಳಿದು ಬರುತ್ತದೆ.ಪ್ರತಿದಿನ ೨೦ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಈ ರಾ.ಹೆ.೧೭ರಲ್ಲಿ ಸಂಚರಿಸುತ್ತಾರೆ. ೨೦,೮೫೦ ದ್ವಚಕ್ರ ವಾಹನಗಳು ಇಲ್ಲಿ ನೊಂದಣಿಗೊಂಡಿವೆ ಅಲ್ಲದೆ ಇತರ ವಾಹನಗಳು ಇಲ್ಲಿ ನಿತ್ಯವೋ ಓಡಾಡುತ್ತವೆ ಇದರಿಂದ ನಮಗೆ ಇಲ್ಲಿ ಯಾವ ಪ್ರಮಾಣದಲ್ಲಿ ತೊಂದರೆ ಸಂಭವಿಸುವುದೆಂಬ ಅರಿವು ನಮಗಿಲ್ಲ ಎಂದ ಅವರು ಹೆದ್ದಾರಿ ಅಗಲೀಕರಣಗೊಳಿಸುವುದರಿಂದ ಭಟ್ಕಳದಿಂದ ಶಿರಾಲಿಯ ವರೆಗಿನ ಹೆದ್ದಾರಿ ಸನಿಹದ ದೇವಸ್ಥಾನಗಳು, ಮಸೀದಿಗಳು ಸೇರಿದಂತೆ ಸಾವಿರಾರು ಮನೆಗಳು, ಅಂಗಡಿಗಳು ಖುಲ್ಲಾಪಡಿಸಬೇಕಾಗುತ್ತದೆ. ಹೀಗಾದರೆ ಇಡೀ ಭಟ್ಕಳವೇ ಹಾಳು ಕೊಂಪೆಯಾಗುವ ಸಾಧ್ಯತೆ ಇದೆ. ಊರಿನ ಹಿತದೃಷ್ಟಿಯಿಂದ ಕೇಂದ್ರ ಸರಕಾರ ಭಟ್ಕಳದಲ್ಲಿ ಬೈಪಾಸ್ ರಸ್ತೆಯನ್ನು ನಿರ್ಮಿಸಿ ಅಭಿವೃದ್ದಿ ಪಥದಲ್ಲಿರುವ ಭಟ್ಕಳ ನಗರವನ್ನು ಉಳಿಸಬೇಕು ಎಂದರು.

 

ಪುರಸಭಾ ಅಧ್ಯಕ್ಷ ಪರ್ವೇಜ ಕಾಶೀಂ ಜಿ ಬೈಪಾಸ್ ರಸ್ತೆ ನಿರ್ಮಾಣದಿಂದ ಸಾಧಕ,ಬಾಧಕಗಳ ಕುರಿತು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಅಂಜುಮಾನ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಿ ಎಚ್ ಶಬ್ಬರ್ ಭಟ್ಕಳ ನಗರದೊಳಗೆ ಹೆದ್ದಾರಿಯಾದರೆ ಎಲ್ಲವೂ ನಾಶವಾಗಲಿದೆ. ಇದರಿಂದ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ, ಅಂಗಡಿಕಾರರಿಗೆ ಎಲ್ಲರಿಗೂ ತೊಂದರೆಯಾಗಲಿದೆ. ಹೈವೆ ಊರ ಹೊರಗೆ ಹೋಗುವುದೇ ಎಲ್ಲಾ ರೀತಿಯಿಂದಲೂ ಉತ್ತಮ ಎಂದರು. ಸೇವಾವಾಹಿನಿಯ ಅಧ್ಯಕ್ಷ ಸುರೇಂದ್ರ ಶ್ಯಾನುಭಾಗ ಮಾತನಾಡಿ ಹೆದ್ದಾರಿ ಅಗಲೀಕರಣ ಇನ್ನೂ ಆರಂಭಗೊಳ್ಳದೇ ಇರುವುದರಿಂದ ಈಗಲೇ ಎಲ್ಲರೂ ಒಟ್ಟಾಗಿ ಬೈಪಾಸ್ ರಸ್ತೆಗೆ ಒತ್ತಾಯಿಸಬೇಕು. ರಸ್ತೆ ನಗರದಲ್ಲೇ ನಿರ್ಮಿಸಿದರೆ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ ಎಂದ ಅವರು ಊರಿನ ಹಿತದೃಷ್ಟಿಯಿಂದ, ಭಟ್ಕಳವನ್ನು ಉಳಿಸಬೇಕಾದಲ್ಲಿ ಬೈಪಾಸ್ ರಸ್ತೆ ಆಗಲೇಬೇಕು ಎಂದು ಹೇಳಿದರು.

 

ತಂಜೀಂ ಸಂಸ್ಥೆಯ ಪರವಾಗಿ ಮಾತನಾಡಿದ ಕಾರ್ಯದರ್ಶಿ ಇನಾಯುತುಲ್ಲಾ ಶಾಬಂದ್ರಿ ಬೈಪಾಸ್ ರಸ್ತೆಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಆಗಬೇಕು. ಬೈಪಾಸ್ ರಸ್ತೆಯಾದರೆ ನಮ್ಮ ಭಟ್ಕಳವನ್ನು ಹೊರಗಿನ ಜನರು ನೋಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು. ಭಟ್ಕಳ ತಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಸತೀಶಕುಮಾರ ರಾ.ಹೆ. ೧೭ ನಗರದ ಮಧ್ಯೆ ಹಾದು ಹೋದರೆ ಭಟ್ಕಳ ಎರಡು ಪಾಲಾಗುವುದು ನಿಶ್ಚಿತ. ಬೈಪಾಸ್ ರಸ್ತೆಯಾದಲ್ಲಿ ಊರಿನ ಅಭಿವೃದ್ದಿಗೆ ಯಾವುದೇ ರೀತಿಯಲ್ಲಿ ಕುಂಠಿತವಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಅಂಜುಮಾನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹೀಮ ಜುಕಾಕೋ,ಮುಹಮ್ಮದ್ ಮೊಹೆತೆಶಮ್ ರಾಬಿತಾ ಸೊಸೈಟಿಯ ಎಸ್ ಜೆ ಹಾಷೀಮ್, ನ್ಯಾಯವಾದಿ ಎಸ್.ಎಂ. ಖಾನ್, ಮುಂತಾದವರು ಮಾತನಾಡಿದರು. ಸಭೆಯಲ್ಲಿ ಎಲ್ಲರೂ ಭಟ್ಕಳದ ಸಾರ್ವಜನಿಕರ ಹಿತದೃಷ್ಟಿಯಿಂದ ಬೈಪಾಸ್ ರಸ್ತೆ ನಿರ್ಮಿಸುವುದೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಮುಂದಿನ ಕಾರ್ಯುಯೋಜನೆಯ ಬಗ್ಗೆ ರೂಪುರೇಷೆ ಸಿದ್ದಪಡಿಸುವಂತೆ ಸಲಹೆ ಸೂಚನೆ ನೀಡಿದರು. ರಾಜೇಶ ನಾಯಕ, ತಂಝೀಂ ಅಧ್ಯಕ್ಷ ಡಾ.ಬದ್ರುಲ ಹಸನ್ ಮು‌ಅಲ್ಲಿಮ್, ಪ್ರಧಾನ ಕಾರ್ಯದರ್ಶಿ ಎಸ್. ಜೆ. ಖಾಲೀದ್, ಇಕ್ಬಾಲ್ ಸಾಬ್ ,ಭಟ್ಕಳ ಮುಸ್ಲಿಮ್ ಯುತ್ ಫೆಡರೇಷನ್ ಅಬ್ದುಲ ರಖೀಬ್ ಎಮ್.ಜೆ. ಸಿದ್ದೀಖ್ ಇಸ್ಮಾಹಿಲ್,ಮಂಜುನಾಥ ಪ್ರಭು ಸೇರಿದಂತೆ ಭಟ್ಕಳ,ಶಿರಾಲಿ ಭಾಗದ ಮುಖಂಡರು ಪಾಲ್ಗೊಂಡಿದ್ದರು.


Share: