ಭಟ್ಕಳ, ಸೆಪ್ಟೆಂಬರ್ 26: ಇತ್ತೀಚೆಗೆ ನಗರದಲ್ಲಿ ಬೀದಿನಾಯಿಗಳ ಕಾಟ ವಿಪರೀತವಾಗಿದ್ದು ಹಲವರನ್ನು ಕಚ್ಚಿದ ಘಟನೆ ಪತ್ರಿಕೆಗಳಲ್ಲಿ ವರದಿಯಾಗಿತ್ತು.
ನಗರಸಭೆಯಾಗಲೀ ಸರ್ಕಾರಿಯೇತರ ಸಮಾಜಸೇವಾ ಸಂಸ್ಥೆಗಳಾಗಲೀ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಇಬ್ಬರು ಹೆಣ್ಣುಮಕ್ಕಳ ಪಾಲಿಗೆ ಭಾರಿಯಾಗಿ ಪರಿಣಮಿಸಿದೆ. ನಗರದ ಎರೆಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮೂರು ವರ್ಷದ ಹೆಣ್ಣುಮಕ್ಕಳನ್ನು ನಾಯಿಗಳು ಕಚ್ಚಿ ಗಾಯಗೊಳಿಸಿರುವುದು ವರದಿಯಾಗಿದೆ.
ಮೊನ್ನೆ ಮಧ್ಯಾಹ್ನ ಹಿಲಾಲ್ ಸ್ಟ್ರೀಟ್ ನಲ್ಲಿ ಮನೆಯಂಗಳದಲ್ಲಿ ತನ್ನ ಸ್ನೇಹಿತೆಯೊಂದಿಗೆ ಆಟವಾಡುತ್ತಿದ್ದ ಮೂರು ವರ್ಷದ ಇಸ್ರಾ ಅಂಜುಮ್ (ತಂದೆ-ಇರ್ಶಾದ್ ಅಹ್ಮದ್ ಬೆಲ್ಲಿ) ಳನ್ನು ಬೀದಿನಾಯಿಯೊಂದು ಮುಖಕ್ಕೇ ಕಚ್ಚಿತ್ತು. ಕೂಡಲೇ ಆಕೆಯನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಥಮ ಚಿಕಿತ್ಸೆ ನೀಡಿದ ಬಳಿಕ ವೈದ್ಯರು ಮಣಿಪಾಲದ ತಜ್ಞರ ಬಳಿ ಕರೆದೊಯ್ಯುವಂತೆ ಸಲಹೆ ಮಾಡಿದರು. ಅದರಂತೆ ಕೂಡಲೇ ಮಣಿಪಾಲಕ್ಕೆ ಕರೆದೊಯ್ದ ಬಳಿಕ ತಜ್ಞರು ಆಕೆಯ ಮುಖದ ಗಾಯವನ್ನು ಹದಿನಾಲ್ಕು ಹೊಲಿಗೆಗಳ ಮೂಲಕ ಚಿಕಿತ್ಸೆ ನೀಡಿದ್ದಾರೆ. ಈಗ ಆಕೆ ಅಪಾಯದಿಂದ ಪಾರಾಗಿದ್ದಾಳಾದರೂ ಹೊಲಿಗೆಯ ಗುರುತುಗಳು ಶಾಶ್ವತವಾಗಿ ಮುಖದ ಮೇಲೆ ಉಳಿಯುವ ಸಾಧ್ಯತೆಗಳಿವೆ.
ಇನ್ನೊಂದು ಪ್ರಕರಣದಲ್ಲಿ ಮಕ್ದೂಂ ಕಾಲೋನಿಯ ನ್ಯಾಶನಲ್ ರಸ್ತೆಯಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಅನುಶಾ (ತಂದೆ ಎಹ್ಸಾನ್ ಸಾದಾ) ಳನ್ನು ಬೀದಿನಾಯಿಯೊಂದು ಕೈಗೆ ಕಚ್ಚಿ ಗಾಯಗೊಳಿಸಿದೆ. ಕೂಡಲೇ ಮಗುವನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಈ ಎರಡು ಘಟನೆಗಳಿಂದ ಭಟ್ಕಳದ ಜನತೆ ವಿಚಲಿತರಾಗಿದ್ದು ಬೀದಿನಾಯಿಗಳ ಕುರಿತು ಕೂಡಲೇ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಆದರೆ ಈ ಬಗ್ಗೆ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದು ಆತಂಕ ಹೆಚ್ಚಿಸಲು ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಪ್ರವೃತ್ತರಾಗಲು ಅವರ ಮನೆಯ ಮಕ್ಕಳಿಗೇ ನಾಯಿ ಕಚ್ಚುವವರೆಗೆ ಕಾಯಬೇಕೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.