ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / 'ದಾರಿ ತಪ್ಪಿಸುವ ಜಾಹೀರಾತು' ಸಾರ್ವಜನಿಕ ಕ್ಷಮಾಪಣೆ ಕೇಳಲು ರಾಮ್‌ದೇವ್‌ಗೆ 1 ವಾರದ ಗಡುವು

'ದಾರಿ ತಪ್ಪಿಸುವ ಜಾಹೀರಾತು' ಸಾರ್ವಜನಿಕ ಕ್ಷಮಾಪಣೆ ಕೇಳಲು ರಾಮ್‌ದೇವ್‌ಗೆ 1 ವಾರದ ಗಡುವು

Wed, 17 Apr 2024 16:30:54  Office Staff   Vb

ಹೊಸದಿಲ್ಲಿ: ಅಲೋಪತಿ ವೈದ್ಯಕೀಯ ಪದ್ಧತಿಯ ವಿರುದ್ಧ ಅಪಪ್ರಚಾರ ಮಾಡದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಯೋಗ ಗುರು ರಾಮ್‌ದೇವ್ ಮತ್ತು ಪತಂಜಲಿ ಆಯುರ್ವೇದ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಬಾಲಕೃಷ್ಣ ಆಚಾರ್ಯರಿಗೆ ಎಚ್ಚರಿಕೆ ನೀಡಿದೆ ಹಾಗೂ ಪತಂಜಲಿ ಆಯುರ್ವೇದ ನೀಡಿದೆ ಎನ್ನಲಾದ ದಾರಿ ತಪ್ಪಿಸುವ ಜಾಹೀರಾತು'ಗಳಿಗೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸಾರ್ವಜನಿಕ ಕ್ಷಮಾಪಣೆ ಕೋರಲು ಅವರಿಗೆ ಒಂದು ವಾರದ ಕಾಲಾವಕಾಶ ನೀಡಿದೆ.

ತಮ್ಮ ವರ್ತನೆಗಾಗಿ ಮಾಧ್ಯಮಗಳಲ್ಲಿ ಸಾರ್ವಜನಿಕ ಕಮಾಪಣೆ ಕೋರುವುದು ಸೇರಿದಂತೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಅವಕಾಶ ನೀಡಬೇಕು ಎಂಬುದಾಗಿ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಆದಾಗ್ಯೂ, ಮಾನನಷ್ಟ ಮೊಕದ್ದಮೆಯ ಆರೋಪಿಗಳಾದ ರಾಮ್‌ದೇವ್ ಮತ್ತು ಬಾಲಕೃಷ್ಣರಿಗೆ ಕ್ಷಮೆ ನೀಡಬೇಕೇ, ಬೇಡವೇ ಎಂಬ ಬಗ್ಗೆ ತಾವಿನ್ನು ನಿರ್ಧರಿಸಿಲ್ಲ ಎಂದು ನ್ಯಾಯಮೂರ್ತಿ ಹಿಮಾ ಕೊಹ್ಲಿ ನೇತೃತ್ವದ ಹಾಗೂ ನ್ಯಾ. ಅಹ್ವಾನುದ್ದೀನ್ ಅಮಾನುಲ್ಲಾರನ್ನು ಒಳಗೊಂಡ ಇಬ್ಬರು ನ್ಯಾಯಾಧೀಶರ ಪೀಠವು ಸವಷ್ಟಪಡಿಸಿತು.

ಇದರ ಬಗ್ಗೆ ನಾವು ಮುಂದೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈ ಪ್ರಕರಣದ ವಿಚಾರಣೆಯನ್ನು ನಾವು ಏಪ್ರಿಲ್ 23ರಂದು ಮುಂದುವರಿಸುತ್ತೇವೆ'' ಎಂದು ನ್ಯಾ. ಕೊಹ್ಲಿ ಹೇಳಿದರು. ಮುಂದಿನ ವಿಚಾರಣೆಯ ದಿನಾಂಕದಂದು ನ್ಯಾಯಾಲಯದಲ್ಲಿ ಸ್ವತಃ ಹಾಜರಿರುವಂತೆ ಸುಪ್ರೀಂ ಕೋರ್ಟ್ ರಾಮ್‌ದೇವ್ ಮತ್ತು ಬಾಲಕೃಷ್ಣರಿಗೆ ಸೂಚಿಸಿತು. ಅದೇ ವೇಳೆ, “ನೀವೇ ಕೋರಿರುವಂತೆ ನಿಮ್ಮನ್ನು ನೀವ ಸುಧಾರಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಈ ಅವಧಿಯಲ್ಲಿ ತೆಗೆದುಕೊಳ್ಳಬಹುದು'' ಎಂಬುದಾಗಿಯೂ ನ್ಯಾಯಾಲಯ ಹೇಳಿತು.

ರಾಮ್‌ದೇವ್ ಮತ್ತು ಬಾಲಕೃಷ್ಣ ಈಗಲೂ ಅಪರಾಧದಿಂದ ಮುಕ್ತರಾಗಿಲ್ಲ ಎಂದು ಹೇಳಿದ ನ್ಯಾಯಾಲಯ, ಅವರ ಕ್ಷಮಾಪಣೆಗಳನ್ನು ಸ್ವೀಕರಿಸುವ ಬಗ್ಗೆ ನಾವು ಯೋಚನೆ ಮಾಡುತ್ತೇವೆ ಎಂದು ಹೇಳಿತು. “ಇದು ಬೇಜವಾಬ್ದಾರಿಯುತ ನಡವಳಿಕೆ. ನಿಮ್ಮ ಇತಿಹಾಸ ಆಕ್ಷೇಪಾರ್ಹವಾಗಿದೆ. ನಿಮ್ಮ ಕ್ಷಮಾಪಣೆಯನ್ನು ಸ್ವೀಕರಿಸಬೇಕೋ, ಬೇಡವೋ ಎನ್ನುವುದನ್ನು ನಾವು ಮತ್ತೆ ನಿರ್ಧರಿಸುತ್ತೇವೆ'' ಎಂದು ನ್ಯಾಯಮೂರ್ತಿ ಕೊಹ್ಲಿ ಹೇಳಿದರು.

“ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ಆದರೆ ನೀವು ಅಲೋಪತಿ ವೈದ್ಯ ಪದ್ಧತಿಯನ್ನು ಹೀಯಾಳಿಸಬಾರದು'' ಎಂದು ನ್ಯಾಯಾಲಯ ಹೇಳಿತು.

'ದಾರಿ ತಪ್ಪಿಸುವ ಜಾಹೀರಾತುಗಳ ಬಗ್ಗೆ ರಾಮ್‌ದೇವ್ ಮತ್ತು ಬಾಲಕೃಷ್ಣ ಈಗಾಗಲೇ ನ್ಯಾಯಾಲಯದಲ್ಲಿ 'ಬೇಷರತ್ತು'' ಕ್ಷಮೆ ಕೋರಿದ್ದಾರೆ. ಆದರೆ, ಸುಪ್ರೀಂ ಕೋರ್ಟ್ ಅವರ ಕ್ಷಮಾಪಣೆಯನ್ನು ಸ್ವೀಕರಿಸಿಲ್ಲ.


Share: