ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಖಾಸಗಿ ವಿ.ವಿ. – ವೀದೇಶಿ ವಿ.ವಿ. ಗಳಿಗೆ ಅವಕಾಶ ಎಸ್ಸೆಫೈನಿಂದ ಪ್ರತಿಭಟನೆ

ಬೆಂಗಳೂರು: ಖಾಸಗಿ ವಿ.ವಿ. – ವೀದೇಶಿ ವಿ.ವಿ. ಗಳಿಗೆ ಅವಕಾಶ ಎಸ್ಸೆಫೈನಿಂದ ಪ್ರತಿಭಟನೆ

Fri, 30 Apr 2010 05:32:00  Office Staff   S.O. News Service
ಬೆಂಗಳೂರು, ಏಪ್ರಿಲ್ ೩೦: ರಾಜ್ಯದಲ್ಲಿ ಖಾಸಗಿ ವಿ.ವಿ ಸ್ಥಾಪನೆಗೆ ಅವಕಾಶ ನೀಡಲು ಮುಂದಾಗುತ್ತಿರುವ ರಾಜ್ಯ ಸರ್ಕಾರದ ಕ್ರಮ ಮತ್ತು ವಿದೇಶಿ ವಿ.ವಿ.ಗಳ ಸ್ಥಾಪನೆಗೆ ಅವಕಾಶ ನೀಡಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ “ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ “ರಾಜ್ಭವನ್ ಚಲೋ” ಕಾರ್ಯಕ್ರಮ ನಡೆಸುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಬೆಂಗಳೂರು ರೈಲು ನಿಲ್ದಾಣದಿಂದ ಮೆರವಣಿಗೆ ಹೊರಟು ಸ್ವಾತಂತ್ರ್ಯ ಉದ್ಯಾನವನದ ರಸ್ತೆಯಲ್ಲಿ ಬಹಿರಂಗ ಸಭೆ ನಡೆಸಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್ಎಫ್ಐನ ರಾಜ್ಯ ಅಧ್ಯಕ್ಷರಾದ ಹೆಚ್.ಆರ್.ನವೀನ್ಕುಮಾರ್ರವರು ರಾಜ್ಯ ಸರ್ಕಾರ ಸ್ಥಾಪಿಸಲು ಹೊರಟಿರುವ ಖಾಸಗಿ ವಿ.ವಿ.ಗಳು ಈ ನಾಡಿನ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಯ ವಿರೋಧಿಗಳಾಗಿವೆ. ರಾಜ್ಯದ ವಿದ್ಯಾರ್ಥಿಗಳಿಗೆ ಕೇವಲ ಶೇ.25 ರಷ್ಟು ಸೀಟುಗಳಿಗೆ ಪ್ರವೇಶ ನೀಡಲಿವೆ. ರಾಜ್ಯಪಾಲರನ್ನು ಸಂದರ್ಶಕರನ್ನಾಗಿಸಿ ಸರ್ಕಾರದ ನಿಯಂತ್ರವನ್ನು ತಪ್ಪಿಸಿ ಖಾಸಗಿ ವ್ಯಕ್ತಿಗಳು, ಕಂಪನಿಗಳಿಗೆ ಸರ್ವಾಧಿಕಾರವನ್ನು ನೀಡುವ ಕಾಯಿದೆ ಇದಾಗಿದೆ. ಪ್ರವೇಶ ಶುಲ್ಕ, ಪಠ್ಯಕ್ರಮ, ಆಡಳಿತ ನೇಮಕ ಇತ್ಯಾದಿಗಳನ್ನು ಕಂಪನಿಯ ಪ್ರಯೋಜಕ ಮಂಡಳಿಯು ನಿರ್ಧರಿಸಲಿದೆ ಎಂದು ಹೇಳುವ ಈ ಮಸೂದೆಯಲ್ಲಿ ಕಂಪನಿ ಅಧ್ಯಕ್ಷರೇ ಜೀವನಪರ್ಯಂತ ಕುಲಾಧಿಪತಿಗಳಾಗಿ ಇರಲಿದ್ದಾರೆ ಎಂಬ ಅಂಶ ಗಮನಿಸಿದರೆ ಇದು ಶಿಕ್ಷಣವನ್ನು ಸಂಪೂರ್ಣವಾಗಿ ಮಾರಾಟದ ಸರಕನ್ನಾಗಿಸುವ ನಿರ್ಧಾರವಾಗಿದ್ದು ಶಿಕ್ಷಣ ರಂಗದಲ್ಲಿ ಅನಾರೋಗ್ಯಕರ ಪ್ರವೃತ್ತಿಗೆ ಕಾರಣವಾಗಲಿದೆ. ಆದ್ದರಿಂದ ರಾಜ್ಯದಲ್ಲಿ ಈ ನೀತಿ ಜಾರಿಯಾಗದಂತೆ ತಡೆಯಲು ಬಲಿಷ್ಠ ಚಳುವಳಿ ಕಟ್ಟೋಣ ಎಂದರು. ಭಾರತ 70 ರಷ್ಟು ಜನ ಕೃಷಿ ಅವಲಂಬಿಸಿದ್ದಾರೆ. ಅದರ ಈ ವಿ.ವಿ.ಗಳಲ್ಲಿ ಈ ಕುರಿತು ಕೋರ್ಸ್ ಪ್ರಾರಂಭಿಸುವ ಕುರಿತು ಪ್ರಸ್ತಾಪಿಸಿದ ಸರ್ಕಾರ ಕೇವಲ ಕಂಪನಿ ವ್ಯವಹಾರದ ಕೋರ್ಸ್ ಗಳ ಪ್ರಾರಂಭಿಸಿರುವ ಈ ಕಾಯಿದೆಯಲ್ಲಿ, ವಿದ್ಯಾರ್ಥಿ, ಪ್ರಾಧ್ಯಾಪಕರ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯದ ಕುರಿತು ಪ್ರಸ್ತಾಪಿಸದ ನೀತಿ ಜನವಿರೋಧಿಯಾಗಿದೆ. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ವಿದೇಶಿ ವಿ.ವಿ.ಗಳನ್ನು ಸ್ವಾಗತಿಸಲು ಮಸೂದೆಯೊಣದನ್ನು ತರಲು ಹೊರಟಿದೆ. ಇದು ದೇಶದ ಬೌದ್ಧಿಕ ಸ್ವಾವಲಂಬನೆಗೆ ಸವಾಲಾಗಿ ನಮ್ಮನ್ನು ವಿದೇಶೀಯರಿಗೆ ಗುಲಾಮರನ್ನಾಗಿಸುವ ಕುತಂತ್ರವಾಗಿದೆ. ಸಾಮ್ರಾಜ್ಯಶಾಹಿಗಳ ವಿರುದ್ಧ ಹೋರಾಡಿ ಪಡೆದ ಸ್ವಾತಂತ್ರ್ಯವನ್ನು ಹರಣ ಮುಂದೆ ವಿದೇಶಿ ವಿ.ವಿ.ಗಳನ್ನು ಸ್ವಾಗತಿಸುತ್ತಿರುವುದು ಶಿಕ್ಷಣ ನೀಡುವ ಜವಾಬ್ದಾರಿಯಿಂದ ತಪ್ಪಿಸಿಕೊಂಡು ಶಿಕ್ಷಣ ವ್ಯಾಪಾರ ಮಾಡುವುದಾಗಿದೆ ಎಂದರು. ಬೇಡಿಕೆಗಳು : ಈ ಕೆಳಕಾಣಿಸಿದ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ.ರಾಜ್ಯದಲ್ಲಿ ಅಜೀಂ ಪ್ರೇಂಜಿ ಖಾಸಗಿ ವಿ.ವಿ. ಸ್ಥಾಪನೆಗೆ ನೀಡಿರುವ ಅನುಮತಿ ವಾಪಸ್ಸು ಪಡೆಯಬೇಕು. ಸದನ ಸಮಿತಿಗೆ ಒಪ್ಪಿಸಿರುವ ಅಲಯನ್ಸ್ ಖಾಸಗಿ ವಿ.ವಿ. ಸ್ಥಾಪನೆ ಪ್ರಸ್ತಾಪ ಕೈಬಿಡಬೇಕು.ದೇಶದ ಬೌದ್ಧಿಕ ಸ್ವಾವಲಂಬನೆಗೆ ಸವಾಲಾಗಿರುವ, ನಮ್ಮನ್ನು ವಿದೇಶೀಯರಿಗೆ ಗುಲಾಮರನ್ನಾಗಿಸುವ ವಿದೇಶಿ ವಿ.ವಿ. ಸ್ಥಾಪನೆಗೆ ಅವಕಾಶ ಬೇಡ.ಸರ್ಕಾರಿ ವಿ.ವಿ.ಗಳಿಗೆ ಅಗತ್ಯವಾದ ಎಲ್ಲಾ ರೀತಿಯ ನೆರವು ನೀಡಿ, ಮೂಲಭೂತ ಸೌಲಭ್ಯ ಒದಗಿಸಿ, ಗುಣಮಟ್ಟದ ಶಿಕ್ಷಣ ನೀಡುವಂತಾಗಲು ಕ್ರಮ ವಹಿಸಬೇಕು.ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಿಸುವಂತಾಗಲು ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಬೇಕು.ಖಾಸಗಿ ವಿದೇಶಿ ವಿ.ವಿ.ಗಳ ಸ್ಥಾಪನೆಯ ಅಪಾಯ ಕುರಿತು ಚೆರ್ಚಿಸಲು ಮತ್ತು ಸರ್ಕಾರಿ, ವಿ.ವಿ.ಗಳ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಸಮಾಲೋಚಿಸಲು ಎಸ್ಎಫ್ಐ ಸೇರಿದಂತೆ ಪ್ರಗತಿಪರ ವಿದ್ಯಾರ್ಥಿ ಸಂಘಟನೆ, ಶಿಕ್ಷಣ ತಜ್ಞರು ಮತ್ತು ಸರ್ಕಾರದ ಅಧಿಕಾರಿಗಳ ಜಂಟಿ ಸಭೆ ಕರೆಯಬೇಕು.ಪಠ್ಯ ಕ್ರಮದಲ್ಲಿನ ದೋಷ, ಫಲಿತಾಂಶ ವಿಳಂಬ, ವಿದ್ಯಾರ್ಥಿಗಳಿಗೆ ಕಿರುಕುಳ ತಪ್ಪಿಸಬೇಕು. ಅಗತ್ಯ ಹಾಸ್ಟೆಲ್ ಸೌಲಭ್ಯ ಒದಗಿಸಬೆಕು. ಶುಲ್ಕ ಏರಿಕೆ ಪ್ರಸ್ತಾಪ ಕೈಬಿಡಬೇಕು. ಎಸ್ಎಫ್ಐನ ರಾಜ್ಯ ನಿಯೋಗ ರಾಜಭವನಕ್ಕೆ ತೆರಳಿ ಬೇಡಿಕೆ ಪತ್ರವನ್ನು ಸಲ್ಲಿಸಿತು. ಹೋರಾಟವನ್ನು ಬೆಂಬಲಿಸಿ ಡಿವೈಎಫ್ಐನ ರಾಜ್ಯ ಅಧ್ಯಕ್ಷ ಭರತ್ರಾಜ್, ಡಿವೈಎಫ್ಐನ ರಾಜ್ಯ ಕಾರ್ಯದರ್ಶಿ ಬಿ.ರಾಜಶೇಖರಮೂರ್ತಿ ಮಾತನಾಡಿದರು. ಎಸ್ಎಫ್ಐ ರಾಜ್ಯ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು. ವಿವಿಧ ಜಿಲ್ಲೆ, ವಿ.ವಿ.ಗಳ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ನೀತಿಗಳ ವಿರುದ್ಧ ಹೋರಾಟ ಬಲಿಷ್ಠಗೊಳಿಸಲು ತೀರ್ಮಾನಿಸಿ ಅಂತಿಮಗೊಳಿಸಲಾಯಿತು. ವರದಿ : ಅನಂತನಾಯ್ಕ್. ಎನ್ ಸೌಜನ್ಯ: ಜನಶಕ್ತಿ

Share: