ಬೆಂಗಳೂರು, ಎ. 17: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಎರಡು ಕಡೆಗಳಲ್ಲಿ ಸಣ್ಣ ಪ್ರಮಾಣದ ಸ್ಫೋಟಕ ಸಿಡಿದು ಪೊಲೀಸರು, ಭದ್ರತಾ ಸಿಬ್ಬಂದಿ ಮತ್ತು ವಿಕ್ಷಕರು ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ.
ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಐಪಿಎಲ್ ಕ್ರಿಕೆಟ್ ಪಂದ್ಯ ಶನಿವಾರ ಸಂಜೆ 4 ಗಂಟೆಯ ಸುಮಾರಿಗೆ ಆರಂಭಗೊಳ್ಳಬೇಕಿತ್ತು. ಆದರೆ, ವಿಕ್ಷಕರು ಒಳಗೆ ಪ್ರವೇಶಿಸುತ್ತಿದ್ದ ಸಂದರ್ಭದಲ್ಲಿ ಕ್ರೀಡಾಂಗಣದ ಗೇಟ್ ಸಂಖ್ಯೆ-12ರ ಬಳಿ 3:15ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಅನಂತರ ಅನಿಲ್ ಕುಂಬ್ಳೆ ವೃತ್ತದಲ್ಲಿನ ಗಿಡಗಳ ಮಧ್ಯೆಯೂ ಸ್ಫೋಟ ಉಂಟಾಗಿದೆ.ಇದರ ಪರಿಣಾಮ ಪೊಲೀಸ್ ಪೇದೆ ಮತ್ತು ಭದ್ರತಾ ಸಿಬ್ಬಂದಿ ಶ್ರೀನಿವಾಸ್, ದಿವಾಕರ್, ರವಿ, ಪ್ರದೀಪ್ ಮತ್ತು ವಿಕ್ಷಕರಾದ ಬಾಲಾಜಿ, ಕೇಶವ್, ಮಹೇಶ್, ಮೆಹಬೂಬ್ ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ನಗರದ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
T
ಪೊಲೀಸ್ ಪೇದೆ ಶ್ರೀನಿವಾಸ್ ಎಂಬವರನ್ನು ಹೊರತುಪಡಿಸಿದರೆ ಉಳಿದವರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದ ಪ್ರವೇಶ ದ್ವಾರ-12ರ ಬಳಿಯ ಗೋಡೆಯ ಮೇಲೆ ಸ್ಫೋಟ ಸಂಭವಿಸಿದೆ. ಇದರಿಂದ ಸ್ಥಳದಲ್ಲೇ ಭದ್ರತೆ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಪೊಲೀಸರು ಮತ್ತು ಇಬ್ಬರು ಖಾಸಗಿ ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ.
ಈ ಸ್ಫೋಟ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಮಹಾತ್ಮಾ ಗಾಂಧಿ ರಸ್ತೆಯಲ್ಲಿನ ಅನಿಲ್ ಕುಂಬ್ಳೆ ವೃತ್ತದಲ್ಲಿ ಸ್ಫೋಟ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ, ಬಾಂಬ್ ಪತ್ತೆ ದಳ ಬಾಂಬ್ ನಿಷ್ಕ್ರಿಯದಳ, ಶ್ವಾನದಳ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಫೋಟ ಸಂಭವಿಸಿದ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ, ಜಂಟಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್, ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ಆರ್.ಪೂಜಾರ್, ಕೇಂದ್ರ ವಿಭಾಗದ ಡಿಸಿಪಿ ರಮೇಶ್ ಮತ್ತು ಚಂದ್ರಶೇಖರ್ ಮುಂತಾದ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ, ಪಂದ್ಯ ವೀಕ್ಷಣಗೆ ಬಂದಿರುವ ಪ್ರೇಕ್ಷಕರು ಮತ್ತು ಬೆಂಗಳೂರಿನ ಸಾರ್ವಜನಿಕರು ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಪ್ರವೇಶ ದ್ವಾರ 12 ಮತ್ತು ಅನಿಲ್‌ಕುಂಬ್ಲೆ ವೃತ್ತದಲ್ಲಿ ಸ್ಫೋಟ ಸಂಭವಿಸಿದ್ದು, 10ಮಂದಿ ಗಾಯಗೊಂಡಿದ್ದಾರೆ.
ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ವಹಿಸಲಾಗಿದೆ. ಸ್ಫೋಟಕ್ಕೆ ಕಾರಣರಾದ ಆರೋಪಿಗಳು ಎಲ್ಲೆ ಅಡಗಿದ್ದರೂ ಅವರನ್ನು ಶೀಘ್ರದಲ್ಲೆ ಬಂಧಿಸಿ ಕಾನೂನು ಕ್ರಮ ಜರಗಿಸಲಾಗಿವುದು. ನಾಗರಿಕರು ಮತ್ತು ವಿಕ್ಷಕರು ಸಹಕರಿಸಬೇಕು. ಆರೋಪಿಗಳು ‘ಪಾತಾಳ’ದಲ್ಲೆ ಅಡಗಿದ್ದರೂ ಬಿಡುವುದಿಲ್ಲ ಎಂದು ಶಂಕರ ಬಿದರಿ ಇದೇ ಸಂದರ್ಭದಲ್ಲಿ ಹೇಳಿದರು.ಕ್ರೀಡಾಂಗಣಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಕ್ರೀಡಾಂಗಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಾಂಬ್ ಪತ್ತೆದಳ, ಶ್ವಾನದಳ, ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ತಪಾಸಣೆ ಕೈಗೊಂಡಿದ್ದಾರೆ. ಯಾವುದೇ ಆತಂಕವಿಲ್ಲದೆ ಪಂದ್ಯ ನಡೆಯಲಿದೆ ಎಂದು ಶಂಕರ ಬಿದರಿ ಹೇಳಿದರು.ಸ್ಫೋಟದ ಆರೋಪಿ ನೀರು ಮಾರಾಟಗಾರ: ಸ್ಫೋಟಕವನ್ನು ಚಿನ್ನಸ್ವಾಮಿ ಕ್ರೀಡಾಂಗಣದ 12ನೆ ಪ್ರವೇಶ ದ್ವಾರದಲ್ಲಿ ಇರಿಸಿದ ಆರೋಪಿ ನೀರು ಮಾರಾಟ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಆರೋಪಿಯ ಮಾಹಿತಿ ಕ್ರೀಡಾಂಗಣದ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕ್ರೀಡಾಂಗಣದ ಪ್ರವೇಶ ದ್ವಾರ-8ರ ಬಳಿ ಒಂದು ಜೀವಂತ ಸ್ಫೋಟಕ ಪತ್ತೆಯಾಗಿದ್ದು, ಅಲ್ಲದೆ ಮಹಾತ್ಮಗಾಂಧಿ ರಸ್ತೆಯಲ್ಲಿನ ಅನಿಲ್ ಕುಂಬ್ಲೆ ವೃತ್ತದಲ್ಲಿಯೂ ಪ್ಯಾಸ್ಟಿಕ್ ಕವರ್‌ನಲ್ಲಿದ್ದ ಎರಡು ಸ್ಫೋಟಗಳು ಪತ್ತೆಯಾಗಿವೆ. ಐಪಿಎಲ್ ಪಂದ್ಯ ವೀಕ್ಷಣೆಗೆ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಅತೃಪ್ತಗೊಂಡ ವೀಕ್ಷಕರು ಅಮೋನಿಯಂ ನೈಟ್ರೆಟ್ ಬಳಿಸಿ ಸಣ್ಣ ಪ್ರಮಾಣದ ಸ್ಫೋಟ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.