ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಸಕ್ಕರೆ ಕಾರ್ಖಾನೆಗಳ ಶೇ ೬೦ ಲಾಭಾಂಶ ರೈತರಿಗೆ - ಸರ್ಕಾರದ ನೂತನ ಸೂತ್ರ ಪ್ರಕಟಣೆ

ಬೆಂಗಳೂರು: ಸಕ್ಕರೆ ಕಾರ್ಖಾನೆಗಳ ಶೇ ೬೦ ಲಾಭಾಂಶ ರೈತರಿಗೆ - ಸರ್ಕಾರದ ನೂತನ ಸೂತ್ರ ಪ್ರಕಟಣೆ

Sun, 18 Apr 2010 02:57:00  Office Staff   S.O. News Service

ಬೆಂಗಳೂರು,ಏ,೧೭,ಸಕ್ಕರೆ ಕಾರ್ಖಾನೆಗಳ ಲಾಭಾಂಶ ಹಂಚಿಕೊಳ್ಳುವ ನೂತನ ಸೂತ್ರವೊಂದನ್ನು ರಾಜ್ಯ ಸರ್ಕಾರ ರೂಪಿಸಿದ್ದು, ಅದರಂತೆ ಶೇಕಡಾ ೬೦ ರಷ್ಟನ್ನು ರೈತರಿಗೆ ಉಳದಿದ್ದು ಕಾರ್ಖಾನೆಗಳಿಗೆ ನೀಡಲು ಉದ್ದೇಶಿಸಲಾಗಿದೆ ಎಂದು ಸಕ್ಕರೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

 

 

ಸುದ್ಧಿಗಾರರ ಜತೆ ಮಾತನಾಡಿದ ಅವರು, ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರಾಜ್ಯದ ರೈತ ಮುಖಂಡರ ಜೊತೆ ಈ ಸಂಬಂಧ ಒಂದು ಸುತಿನ್ತ ಸಭೆ ನಡೆಸಲಾಗಿದೆ. ಇದೇ ೨೦ ರಂದು ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಮತ್ತೊಂದು ಸಭೆ ನಡೆಸಿ ಹೊಸ ಸೂತ್ರವನ್ನು ಜಾರಿಗೊಳಿಸಲಾಗುವುದು. ಇದರಿಂದ ರಾಜ್ಯದ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದರು.

 

ಕಬ್ಬಿನ ಬೆಲೆಯನ್ನು ನಿಗದಿಗೊಳಿಸುವ ವಿಷಯದಲ್ಲಿ ರೈತರು ಹಾಗೂ ಕಾರ್ಖಾನೆಗಳ ನಡುವೆ ಸದಾ ಕಾಲ ವಿವಾದ ನಡೆಯುತ್ತಲೇ ಬಂದಿದ್ದು ಈ ಗೊಂದಲವನ್ನು ಬಗೆಹರಿಸುವ ದೃಷ್ಟಿಯಿಂದ ಇಂತಹ ಸೂತ್ರವನ್ನು ರೂಪಿಸಲಾಗಿದೆ. ರೈತರು ಕಾರ್ಖಾನೆಗೆ ತಮ್ಮ ಕಬ್ಬನ್ನು ರವಾನೆ ಮಾಡಿದ ಎರಡು ವಾರಗಳಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಫ್‌ಆರ್‌ಪಿ ಟನ್‌ಗೆ ೧೨೩೫ ರೂ ನೀಡಲಿದ್ದು, ನಂತರ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯ ಪೂರ್ಣಗೊಂಡ ನಂತರ ಖರ್ಚ್ಚು ವೆಚ್ಚಗಳ ನಿರ್ವಹಣೆ ನಂತರ ಬರುವ ಲಾಭಾಂಶವನ್ನು ರೈತರಿಗೆ ಹೆಚ್ಚುವರಿಯಾಗಿ ನೀಡಲಾಗುವುದು.

 

ಈ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಸಕ್ಕರೆಗಿರುವ ದರ ಪರಿಗಣಿಸುವುದಲ್ಲದೆ ಖಾರ್ಕಾನೆಗಳು ತಾವು ಉತ್ಪಾದಿಸುವ ಉಪ ಉತ್ಪನ್ನಗಳಲ್ಲಿ ಬರುವ ಲಾಭದಲ್ಲೂ ಶೇ ೪ ರಷ್ಟನ್ನು ರೈತರಿಗೆ ನೀಡಬೇಕಾಗುತ್ತದೆ. ಸೂತ್ರಕ್ಕೆ ರೈತ ಪ್ರತಿನಿಧಿಗಳು ಸಮ್ಮತಿಸಿದಂತೆ ಕಂಡು ಬಂದಿದೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದರು.

 

 

ದಿನೇ ದಿನೇ ಸಕ್ಕರೆ ಬೆಲೆ ಹೆಚ್ಚಾಗುತ್ತಿರುವುದರಿಂದ ರಾಜ್ಯದಲ್ಲಿ ಕಬ್ಬು ಬೆಳೆಯುವ ಪ್ರದೇಶದ ವ್ಯಾಪ್ತಿ ಹೆಚ್ಚಿದೆ. ಕಳೆದ ವರ್ಷ ೩ ಲಕ್ಷ ಹೇಕ್ಟೇರ್ ಪ್ರದೇಶದಲ್ಲಿ ಕಬ್ಬು ಬಿತ್ತನೆಯಾಗಿದ್ದರೆ ಪ್ರಸಕ್ತ ವರ್ಷ ೪.೨೦ ಲಕ್ಷ ಹೇಕ್ಟರ್ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

 

 

ಪ್ರತಿ ತಾಲ್ಲೂಕಿನಲ್ಲೂ ಒಂದು ಕೋಟಿ ರೂ. ವೆಚ್ಚದಲ್ಲಿ ಸಂತೆ ಮಾರುಕಟ್ಟೆಗಳನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ಮಾರುಕಟ್ಟೆಗೆ ಅಗತ್ಯವಿರುವ ಭೂ ಸ್ವಾಧೀನಕ್ಕೆ ಇಲಾಖೆ ಮುಂದಾಗಿದೆ ಎಂದರು.

 

 

 


Share: