ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ’ಇಸ್ರೇಲ್ ಮಾದರಿ ಕೃಷಿ ಯಶಸ್ಸಿಗೆ ಮೂಲ’

ಬೆಂಗಳೂರು: ’ಇಸ್ರೇಲ್ ಮಾದರಿ ಕೃಷಿ ಯಶಸ್ಸಿಗೆ ಮೂಲ’

Thu, 29 Apr 2010 14:06:00  Office Staff   S.O. News Service
ಬೆಂಗಳೂರು, ಏ. ೨೯ (ಕರ್ನಾಟಕ ವಾರ್ತೆ)- ಸರ್ಕಾರ ನೆರವು ನೀಡಿದರೆ ಇಸ್ರೇಲ್ ಮಾದರಿಯಲ್ಲಿ ರಾಜ್ಯದ ರೈತರೂ ಕೃಷಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು ಎಂದು ಕೃಷಿ ಇಲಾಖೆಯ ವತಿಯಿಂದ ಇಸ್ರೇಲ್‌ಗೆ ಅಧ್ಯಯನ ಪ್ರವಾಸ ಕೈಗೊಂಡ ರೈತರು ಅಭಿಪ್ರಾಯಪಟ್ಟರು. ನಗರದ ಕೃಷಿ ಇಲಾಖೆ ಆಯುಕ್ತರ ಕಛೇರಿಯ ಸಭಾಂಗಣದಲ್ಲಿ ಇಂದು ಇಸ್ರೇಲ್ ಮತ್ತು ಚೀನಾ ಪ್ರವಾಸ ಕೈಗೊಂಡ ರೈತರೊಂದಿಗೆ ಕೃಷಿ ಇಲಾಖೆಯು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ರೈತರು ತಮ್ಮ ಪ್ರವಾಸದ ಅನುಭವಗಳನ್ನು ಹಂಚಿಕೊಂಡರು. ಹಾವೇರಿ ಜಿಲ್ಲೆಯ ಸಣ್ಣ ಹನುಮಂತಪ್ಪ, ಧಾರವಾಡ ಜಿಲ್ಲೆಯ ನಾಗಪ್ಪ, ಬೆಂಗಳೂರು ನಗರ ಜಿಲ್ಲೆಯ ಬಿಳೇಕಹಳ್ಳಿ ನಾರಾಯಣ, ದಾವಣಗೆರೆ ಜಿಲ್ಲೆಯ ಗೌಡ್ರ ಮಂಜಣ್ಣ, ಬಿಜಾಪುರ ಜಿಲ್ಲೆಯ ಮಹಾವೀರ ಬಿ. ಸಗ್ರಿ, ತುಮಕೂರು ಜಿಲ್ಲೆಯ ಸುಮಿತ್ರ ಮೊದಲಾದವರು ತಮ್ಮ ಅನುಭವಗಳನ್ನು, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಇದರ ಸಾರಾಂಶ ಹೀಗಿದೆ: ಇಸ್ರೇಲಿ ರೈತರಿಗೆ ಸರ್ಕಾರ ಜಮೀನನ್ನು ಲೀಸ್‌ಗೆ ನೀಡಿದ್ದು, ವಿದ್ಯುತ್, ನೀರಾವರಿ ವ್ಯವಸ್ಥೆಯನ್ನೂ ಮಾಡಿದೆ. ಹನಿ ನೀರಾವರಿಯ ಮೂಲಕ ನೀರಿನ ಗರಿಷ್ಠ ಸದ್ಬಳಕೆ ಮಾಡುವ ಮೂಲಕ ರೈತರು ಉತ್ತಮ ಫಸಲು ಪಡೆಯುತ್ತಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನದ ನೆರವು, ಯಂತ್ರೋಪಕರಣಗಳ ಬಳಕೆಯಿಂದ ಕೃಷಿ ಚಟುವಟಿಕೆಗಳು ಸುಲಭವಾಗಿವೆ. ಸಮುದಾಯ ಕೃಷಿಯ ಪರಿಕಲ್ಪನೆ ಮಾರುಕಟ್ಟೆಯಲ್ಲಿ ರೈತರೇ ಪ್ರಾಬಲ್ಯ ಸಾಧಿಸಲು ಪೂರಕವಾಗಿದೆ. ಹೈನುಗಾರಿಕೆಯಲ್ಲಿಯೂ ಇಸ್ರೇಲಿನ ಸಾಧನೆ ಅಗಾಧವಾದದ್ದು. ಪ್ರಯಾಣ ವೆಚ್ಚ ಭರಿಸಿದರೆ, ಅದೇ ಮಾದರಿ ಕೃಷಿಗೆ ನೆರವು ನೀಡುವುದಾಗಿ ಅಲ್ಲಿನ ಕೃಷಿ ತಜ್ಞರ ಭರವಸೆ. ರೈತರ ಶಿಸ್ತು, ಸಮಯ ಪ್ರಜ್ಞೆ ನಮಗೆ ಮಾದರಿ. ಇದು ನಮ್ಮನ್ನು ಆಶಾವಾದಿಗಳನ್ನಾಗಿಸುತ್ತದೆ. ಇಸ್ರೇಲ್‌ನಲ್ಲಿ ರೈತರೇ ಶ್ರೀಮಂತರು. ಸರ್ಕಾರ ಸಮರ್ಪಕ ವಿದ್ಯುತ್, ಸಕಾಲದಲ್ಲಿ ಬೀಜ, ಗೊಬ್ಬರ ಒದಗಿಸಿದರೆ ನಾವೂ ಉತ್ತಮ ಫಸಲು ಬೆಳೆಯಬಹುದು. ರೈತರೊಂದಿಗೆ ಪ್ರವಾಸಕ್ಕೆ ತೆರಳಿದ ವಿಧಾನ ಪರಿಷತ್ ಸದಸ್ಯ ಡಾ. ದೊಡ್ಡರಂಗೇಗೌಡ ಅವರೂ ಕವನವೊಂದರ ಮೂಲಕ ಇಸ್ರೇಲಿ ರೈತರ ಬದುಕನ್ನು ಬಿಡಿಸಿಟ್ಟರು. ಕೃಷಿ ಇಲಾಖೆಯ ಅಪರ ನಿರ್ದೇಶಕ ಶ್ರೀ ಧರ್ಮರಾಜ್, ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶ್ರೀ ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Share: