ಬೆಂಗಳೂರು: ತಿರುಪತಿ ತಿಮ್ಮಪ್ಪನಿಗೆ 32 ಕೋಟಿ ರೂಪಾಯಿಯ ವಜ್ರ ಖಚಿತ ಕಿರೀಟವಿಟ್ಟು (ಕೃಷ್ಣದೇವರಾಯನ ನಂತರ ಇವರೇ ಅಂತೆ) ಗಣಿಗಳ್ಳ ಸಚಿವ ಜನಾರ್ಧನರೆಡ್ಡಿ ಕಂಪನಿಯ ಕಣ್ಣು ವಿಜಯನಗರದ ಕೃಷ್ಣದೇವರಾಯನ ಸಿಂಹಾಸನದತ್ತ ಹೊರಳಿದೆ. ಕೃಷ್ಣದೇವರಾಯ ನಿಗೆ ಪಟ್ಟಾಭಿಷೇಕವಾಗಿ 500 ವರ್ಷಗಳಾಗಿದೆಯೆಂಬ ಜಾತಕದ ಸಂಶೋದನೆಯಿಂದ ಪುಳಕಗೊಂಡ ಅವರು ಅದರ ಆಚರಣೆಗೆ ರೂಪಿಸಿದ ಸ್ಕೀಮು ಈಗ ಜಾರಿಯಾಗುತ್ತಿದೆ. ಸಹಜವಾಗಿಯೇ ಪಾಳೆಗಾರಿಕೆ, ರಾಜರ ವೈಭವೀಕರಣ ಮತ್ತು ಕೋಮುವಾದಿ ದೃಷ್ಟಿಕೋನದಿಂದ ಇತಿಹಾಸ ತಿರುಚಿ ಬಣ್ಣ ಹಚ್ಚುವ ಸಂಘ ಪರಿವಾರ ಜೊತೆಗೂಡಿದೆ. ಪಕ್ಕದ ಬಳ್ಳಾರಿಯ ನೆರೆ ಸಂತ್ರಸ್ಥರನ್ನು ಈಗಲೂ ಬೀದಿಯಲ್ಲಿ ನಿಲ್ಲಿಸಿ `ಕಾಸಿಲ್ಲ ಕಾಸಿಲ್ಲ' ಎನ್ನುವ ಬಿಜೆಪಿ ಸರ್ಕಾರ ಅಂತಹ ಆಚರಣೆಗೆ 30 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
ರಾಜವೈಭವೀಕರಣ, ವಿಜಯನಗರವನ್ನು ಹಿಂದೂ ರಾಜ್ಯವೆಂಬ ಕೋಮುವಾದೀಕರಣದ ತಿರುಚಿದ ಸುಳ್ಳು ಇತಿಹಾಸ ಊದಿ ಎರಡು ರಾಜರುಗಳ, ಸಾಮ್ರಾಜ್ಯಗಳ ವಿಸ್ತರಣೆಯ ಕದನವನ್ನು ಹಿಂದೂ, ಮುಸ್ಲಿಂರ ಯುದ್ಧವೆಂದು ಮತೀಯ ಲೇಪನ ನೀಡಲು ಈ ಸಂದರ್ಭ ಬಳಸಲಾಗುತ್ತಿದೆ. ವಿಜಯನಗರ ಸಾಮ್ರಾಜ್ಯದಲ್ಲಿ `ಮುತ್ತು ರತ್ನ ಅಳೆದು ಮಾರಿದ' ಸಮೃದ್ಧ ರಾಜ್ಯವೆಂಬುದೇ ಹುಸಿ. ಅಳೆದು ಮಾರಿದ ವ್ಯಾಪಾರಿಗಳು ಆಗಲೂ ಇದ್ದಂತೆ ಈಗಲೂ ಇದ್ದಾರೆ. ಹಾಗೆ ಭಿಕಾರಿಗಳೂ ಇದ್ದಾರೆ. ಹಂಪಿಯಲ್ಲಿನ ಒಂದು ಶಾಸನವೇ ಹೇಳುವಂತೆ `ತೆರಿಗೆಗಳನ್ನು ನೀಡದ ರೈತರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ರಾಜಾಜ್ಞೆ' ಇತ್ತು. ಅಂದರೆ ಇಂತಹ ಸಮೃದ್ಧಿ ಸಾಮ್ರಾಜ್ಯದಲ್ಲಿ, ತೆರಿಗೆಗಳನ್ನು ಕೊಡಲಾಗದ ರೈತಾಪಿ, ದುಡಿವ ಜನರಿದ್ದರು ಎಂಬುದು ವಾಸ್ತವ. ತೆರಿಗೆ ಕೊಟ್ಟದ್ದರಿಂದ, ಇಂತಹವರ ದುಡಿಮೆಯೇ ಸಮೃದ್ಧಿಗೆ ಆಧಾರ. ಅದೇ ರೀತಿ ಅನೇಕ ಮನೆಗಳಿಗೆ ಬಾಗಿಲುಗಳೇ ಇಲ್ಲದಿದ್ದದ್ದು, ಯಾಕೆ? ಏನಾದರೂ ಮನೆಯಲ್ಲಿದ್ದರೆ ತಾನೇ ಬಾಗಿಲಿಡಲು, ಕಾವಲು ಕಾಯಲು!
ಆದ್ದರಿಂದ ಇಂತಹ ಸಾಮ್ರಾಜ್ಯಗಳು ದುಡಿವ ಜನರ ಪಾಲಿಗೆ ಪೀಡಕವೋ, ಪೋಷಕವೋ? `ಎಲ್ಲರೂ ಜಿಗಣಿಗಳೇ ನನ್ನ ನೆತ್ತರಿಗೆ' ಎಂಬ ಕುವೆಂಪು ಸಾಲುಗಳು ಯಾವುದೇ ಸಾಮ್ರಾಜ್ಯದಲ್ಲಿಯೂ ಜನರ ಸ್ಥಿತಿಯನ್ನು ದ್ವನಿಸುತ್ತವೆ.
ಇಂತಹದ್ದರ ಆಚರಣೆ ವೈಭವೀಕರಣಕ್ಕೆ ಅರ್ಥವಾದರೂ ಏನು?
ಹೇಳಿ ಕೇಳಿ ಸಂಘ ಪರಿವಾರ ಇಂತಹ ಪಾಳೇಗಾರಿ ಶಕ್ತಿಗಳ ಆರಾಧಕ. ಇಂತಹ ವೈಭವೀಕರಣದಲ್ಲಿ ಕ್ರೂರ ವಾಸ್ತವಗಳನ್ನು ಮರೆಸುವುದು ಒಂದು ಅಜೆಂಡಾ. ಇದು ಹಿಂದುತ್ವ'ದ ಧೋರಣೆಗೆ ಸರಿಹೊಂದುತ್ತದೆ. ಆದರೆ ನಾವಿಂದು ಪ್ರಜಾಪ್ರಭುತ್ವ ಯುಗದಲ್ಲಿದ್ದೇವೆ ಸ್ವತ: ಯಡಿಯೂರಪ್ಪನವರಾಗಲೀ, ರೆಡ್ಡಿಗಳೇ ಆಗಲಿ ಈ ಪ್ರಜಾಪ್ರಭುತ್ವದ ಫಲದಿಂದಲೇ ಅದರ ಫಲವನ್ನೂ ಉಣ್ಣುತ್ತಿರುವುದು, ಉಡುತ್ತಿರುವುದು, ಈ ಪ್ರಜಾಪ್ರಭುತ್ವ ಎಂಬುದು ರಾಜಶಾಹೀ ಪಾಳೆಗಾರಿ ಶಕ್ತಿಗಳ ವಿರುದ್ಧ ಸೆಣಸಾಡಿ ಅದನ್ನು ಸೋಲಿಸಿ ಗೆದ್ದದ್ದು. ಉದಾಹರಣೆಗೆ ಬ್ರಿಟೀಶರ ಆಳ್ವಿಕೆಯಲ್ಲಿಯೂ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೈಸೂರಿನ ಮಹಾರಾಜರು ತಮ್ಮ ಪ್ರಭುತ್ವ ಬಿಟ್ಟುಕೊಡದೇ ನಿರಾಕರಿಸಿ, ಪ್ರಜಾಪ್ರಭುತ್ವದ ವಿರೋಧಿಗಳಾಗಿದ್ದರು. ಆಗ ಜನತೆ `ಮೈಸೂರು ಚಲೋ' ನಡೆಸಿ ರಾಜಶಾಹೀ ವಿರುದ್ಧ ಸಂಘರ್ಷ ಸಾರಿದರು. ಹೀಗೆ ಗೆದ್ದ ಪ್ರಜಾಪ್ರಭುತ್ವದಲ್ಲಿ ಅದರ ಶತ್ರುಗಳಾಗಿರುವ ಪಾಳೇಗಾರಿ ಶಕ್ತಿಗಳನ್ನು ವಿಜೃಂಭಿಸುವುದು ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗುತ್ತದೆ.
ಈ ಉತ್ಸವದ ನೆಪದಲ್ಲಿಯೇ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಕೃಷ್ಣದೇವರಾಯನ ಹೆಸರಿಟ್ಟು ಪುನರ್ ನಾಮಕರಣ ಮಾಡುವುದು ಅವೈಜ್ಞಾನಿಕ, ಅಸಂಬದ್ಧ.
ಕನ್ನಡಬೆಂಬುದು ವಿಸ್ತಾರವಾದ, 3500 ಸಾವಿರ ವರುಷಗಳ ಇತಿಹಾಸವಿರುವ, ಸಂಸ್ಕೃತಿ, ಭಾಷೆಯಾಗಿದೆ. ವಿಜಯನಗರ ಅರಸರ ರಾಜ್ಯದ ಇತಿಹಾಸ 500 ವರ್ಷಗಳ ಹಿಂದಿನದು. ಆಡಳಿತವೂ ಇಂದಿನ ಕರ್ನಾಟಕದ ಒಂದು ಭಾಗಕ್ಕಷ್ಟೇ ಸೀಮಿತವಾಗಿತ್ತು. ಹಂಪಿ, ವಿ.ವಿ.ಯು ಭಾಷೆ, ಸಂಸ್ಕೃತಿ, ಬದುಕು ಶೋಧನೆ, ಬೆಳವಣಿಗೆಗೆ ಮೀಸಲಾಗಿರುವ ಭಾಷಾ ಅನನ್ಯತೆಯ ವಿಶ್ವವಿದ್ಯಾಲಯ. ಇದಕ್ಕೆ ಕನ್ನಡ ವಿ.ವಿ. ಎಂಬುದೇ ಸೂಕ್ತ. ಅದನ್ನು ಬಿಟ್ಟು ಕೃಷ್ಣದೇವರಾಯನ ಹೆಸರಿಡುವುದು ಸರಿಯೇ ಅಲ್ಲ. ಇದರೊಂದಿಗೆ ವಿಶ್ವವಿದ್ಯಾಲಯದ ವ್ಯಾಪ್ತಿಯ 300 ಎಕರೆಯಷ್ಟು ಜಮೀನನ್ನು ಕೃಷ್ಣ ದೇವರಾಯನ ಹೆಸರಿನ ಪೀಠಕ್ಕೆ ಸ್ವಾದೀನಪಡಿಸಿಕೊಳ್ಳುವ ಉದ್ದೇಶವೂ ಪ್ರಕಟವಾಗಿದೆ. ಬೆಳೆದು ವಿಸ್ತರಿಸಬೇಕಿರುವ ವಿಶ್ವವಿದ್ಯಾಲಯವನ್ನು, ಅಧಿಕಾರವಿದೆ ಎಂಬ ಮಾತ್ರಕ್ಕೆ ಬೇಕಾಬಿಟ್ಟಿ ಎಳೆದಾಡುವುದು ಹಾನಿಕರ. ಆದ್ದರಿಂದ ವಿ.ವಿ. ಹೆಸರು ಬದಲಾಯಿಸುವ; ಅಲ್ಲಿನ ಭೂಸ್ವಾದೀನ ಪಡಿಸಿಕೊಳ್ಳುವ ಪ್ರಯತ್ನ ಕೈಬಿಡಲೇಬೇಕು.
ಸರ್ಕಾರದ ಇಂತಹ ದುರುದ್ದೇಶಗಳು ಇನ್ನೂ ಹಲವು ಇವೆ. ವಿವೇಕಾನಂದರ ಜಯಂತಿ ಜೊತೆಗೆ ಪಟ್ಟಾಭಿಷೇಕ ಮಹೋತ್ಸವವನ್ನು ತಳುಕು ಹಾಕಿದ ಸರ್ಕಾರ ಭಾಷಣಕ್ಕೆ ಸಂಘ ಪರಿವಾರದ ಕಂಠಗಳನ್ನೇ ಕರೆಸಿತು. ಅದರಲ್ಲೂ ಎ.ಬಿ.ವಿ.ಪಿ ನಾಯಕನಿಂದ ವಿಶೇಷ ಉಪನ್ಯಾಸ. ಆ ಆಶ್ರಮದ ರವಿಶಂಕರ್ ಗುರೂಜಿ ಆಶೀರ್ವಚನ! ಇಲ್ಲಿ ಇತಿಹಾಸ ಶೋಧಿಸಿದ, ಅಭ್ಯಸಿಸಿದವರಾರೂ ಇರಲಿಲ್ಲವೇ?
ಉದ್ದೇಶ ಸ್ಪಷ್ಟ. ಹಿಂದೆಲ್ಲಾ ಮಾಡುತ್ತಾ ಬಂದಂತೆ, ಇತಿಹಾಸವನ್ನು ತಿರುಚಿ ಕೋಮುವಾದೀಕರಿಸುವುದು. ಹಿಂದಿನ ಸೀಟಿನಲ್ಲಿ ಕೂತು ವಾಹನ ಚಲಿಸುವ ಸಂಘ ಪರಿವಾರದ ಇಂತಹ ವರಸೆಗಳನ್ನು ಜನ ಅರ್ಥ ಮಾಡಿಕೊಳ್ಳಬೇಕು. ಈಗಾಗಲೇ ಚಿ.ಮೂ. ರವರ ಹಂಪಿ ಶುದ್ದೀಕರಣ ಚಳುವಳಿ ಮತ್ತೆ ಚಾಲನೆಗೆ ಬರುತ್ತಿದೆ. ಅಲ್ಲಿ ಹಲವಾರು ದಶಕಗಳಿಂದಲೂ ಬದುಕುತ್ತಿರುವ, ಪ್ರವಾಸೋದ್ಯಮಕ್ಕೆ ನೆರವಾಗುತ್ತಿರುವ ಸ್ಥಳೀಯ ವಾಸಿಗಳ ಮೇಲೆ ಕೆಲವರು ಏರಿ ಹೊರಟಿದ್ದಾರೆ. ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಿಸುವ ಯೋಜನೆಗಳು ಹೊರಬರುತ್ತಿವೆ. ವರ್ತಮಾನದ ಬದುಕಿಗಿಂತಲೂ ಗತಕಾಲದ ವೈಭವೀಕರಣದ ನಿಶೆಗೆ ದೂಡಿ ಹಾಕುವುದರ ವಿರುದ್ಧ ದನಿಎತ್ತಬೇಕಲ್ಲವೇ?
ಸೌಜನ್ಯ: ಜನಶಕ್ತಿ