ಹಾಸನ, ಫೆಬ್ರವರಿ.೨೩- ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ ನಿರ್ಮಿಸಿರುವ ಮನೆಗಳಿಗೆ ಫಲಾನುಭವಿಗಳ ಕಟ್ಟಿದ್ದ ಹೊಂದಿಕೆ ಹಣವನ್ನು ವಾಪಸ್ ನೀಡುವಂತೆ ಒತ್ತಾಯಿಸಿ ನೂರಾರು ಫಲಾನುಭವಿಗಳು ಮಂಗಳವಾರ ಹಾಸನದಲ್ಲಿ ಪ್ರತಿಭಟನೆ ನಡೆಸಿದರು.
ಹಾಸನದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದ ಪ್ರತಿಭಟನಾಕಾರರು ಕೊಳಚೆ ನಿರ್ಮೂಲನ ಮಂಡಳಿ ವಿರುದ್ಧ ಘೋಷಣೆ ಕೂಗಿದರು.
ಕೇಂದ್ರ ಸರ್ಕಾರದ ಯೋಜನೆಯಡಿ ಕೊಳಚೆ ಪ್ರದೇಶದ ವಸತಿ ಹೀನ ಪರಿಶಿಷ್ಟ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲು ಕೊಳಚೆ ನಿರ್ಮೂಲನಾ ಮಂಡಳಿ ಕಾರ್ಯಕ್ರಮ ರೂಪಿಸಿತ್ತು. ಫಲಾನುಭವಿಗಳಿಂದ ಹೊಂದಾಣಿಕೆ ಹಣವಾಗಿ ೧೩,೫೦೦ ರೂಪಾಯಿಗಳನ್ನು ಪಡೆದಿತ್ತು. ಆದರೆ ಆ ಹೊಂದಿಕೆ ಹಣವನ್ನು ನಗರಸಭೆಯ ವತಿಯಿಂದ ಶೇ.೧೮ರ ಅನುದಾನಡಿಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಗೆ ಪಾವತಿಸಲಾಗಿದೆ.
ನಗರಸಭೆಯಿಂದ ಹಣ ಸಂದಾಯವಾಗಿ ೮ ತಿಂಗಳು ಕಳೆದಿದ್ದರೂ, ಫಲಾನುಭವಿಗಳಿಗೆ ಈವರೆಗೆ ಹಣ ವಾಪಸ್ ಆಗಿಲ್ಲ. ವಾಪಸ್ ನೀಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೆಲಕಾಲ ಧರಣಿ ಸತ್ಯಾಗ್ರಹ ನಡೆಸಿದ ಪ್ರತಿಭಟನಾಕಾರರು, ಕೂಡಲೇ ಅಧಿಕಾರಿಗಳು ಫಲಾನುಭವಿಗಳಿಗೆ ಹಣ ವಾಪಸ್ ನೀಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕ್ರಾಂತಿಪ್ರಸಾದ್ ತ್ಯಾಗಿ, ಬಿ.ಎಸ್.ಪಿ. ಮಹಿಳಾ ಘಟಕದ ಅಧ್ಯಕ್ಷೆ ಶಿವಮ್ಮ ಇತರರು ನೇತೃತ್ವ ವಹಿಸಿದ್ದರು.