ಬೆಂಗಳೂರು, ಫೆಬ್ರವರಿ ೨೪,ರಾಜ್ಯ ಪರಿಶಿಷ್ಟ ಜಾತಿಗಳ ಸಂವಿಧಾನಿಕ ಸೌಲಭ್ಯಗಳು ಮತ್ತು ಅವುಗಳ ಹಂಚಿಕೆಯಲ್ಲಿ ತಾರತಮ್ಯ ಪರಿಶೀಲನೆಗಾಗಿ ರಚಿಸಲಾದ ನ್ಯಾಯಮೂರ್ತಿ ಎ.ಜೆ. ಸದಾಶಿವ ವಿಚಾರಣಾ ಆಯೋಗವು ಕೈಗೆತ್ತಿಕೊಂಡಿರುವ ಪರಿಶಿಷ್ಟ ಜಾತಿ ಕುಟುಂಬ ಸಮೀಕ್ಷೆಗೆ ರಾಜ್ಯ ಸರ್ಕಾರವು ಈಗಾಗಲೇ ಒಟ್ಟು ೫.೮೮ ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ನ್ಯಾ. ಎ.ಜೆ. ಸದಾಶಿವ ಆಯೋಗವು ಇಂದು ನಗರದ ಕರ್ನಾಟಕ ಆಡಳಿತ ಸೇವಾ ಮತ್ತು ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ತರಬೇತಿ ಕಾರ್ಯಾಗಾರವನ್ನು ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಉದ್ಘಾಟಿಸಿದ ಸಮಾಜ ಕಲ್ಯಾಣ ಸಚಿವ ಡಿ. ಸುಧಾಕರ್ ಅವರು ಮುಖ್ಯಮಂತ್ರಿಗಳ ಭಾಷಣವನ್ನು ಓದಿದರು.
ಸಂವಿಧಾನ ಮತ್ತು ಇತರ ಕಾನೂನುಗಳಡಿ ಪರಿಶಿಷ್ಟ ಜಾತಿಯವರಿಗೆ ವಿವಿಧ ಸೌಲಭ್ಯಗಳನ್ನು ಸರ್ಕಾರ ನೀಡುತ್ತ ಬಂದಿದೆ. ಆದರೆ ಕಳೆದ ೧೫ ವರ್ಷಗಳಿಂದ ಸರ್ಕಾರದ ಸೌಲಭ್ಯಗಳ ಹಂಚಿಕೆಯಲ್ಲಿ ತಾರತಮ್ಯ ನಡೆಯುತ್ತಿದೆ ಎಂಬ ಅಭಿಪ್ರಾಯ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳ ನಡುವೆ ಮೂಡಿರುವುದು ವಿಪರ್ಯಾಸ. ಈ ಹಿನ್ನೆಲೆಯಲ್ಲಿ ಸರ್ಕಾರದ ಸೌಲಭ್ಯಗಳು ಪರಿಶಿಷ್ಟ ಜಾತಿಯ ಎಲ್ಲರನ್ನೂ ತಲುಪುತ್ತಿವೆ ಎಂಬುದರ ಅಧ್ಯಯನ ನಡೆಸಲು ನ್ಯಾ. ಎ.ಜೆ. ಸದಾಶಿವ ಆಯೋಗ ಈ ಕುಟುಂಬ ಸಮೀಕ್ಷೆ ನಡೆಸುತ್ತಿದ್ದು ರಾಜ್ಯ ಸರ್ಕಾರ ಎಲ್ಲ ರೀತಿಯ ಬೆಂಬಲ ನೀಡಲು ಸಿದ್ಧವಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಪ್ರಾಸ್ತಾವಿಕ ನುಡಿಗಳನ್ನಾಡಿದ ಆಯೋಗದ ಮುಖ್ಯಸ್ಥ ನ್ಯಾ. ಎ.ಜೆ. ಸದಾಶಿವ ಅವರು, ಈ ಸಮೀಕ್ಷೆಯನ್ನು ಯಶಸ್ವಿಗೊಳಿಸಲು ಅಧಿಕಾರಿಗಳ ಸಹಕಾರ ಅಗತ್ಯವೆಂದರು. ಶತಶತಮಾನಗಳಿಂದ ತುಳಿತಕ್ಕೊಳಗಾಗಿರುವ ಪರಿಶಿಷ್ಟ ಜಾತಿಯ ಜನರ ಬದುಕಿನಲ್ಲಿ ವಿಶ್ವಾಸ ಮೂಡಿಸಿ, ಇತರ ವರ್ಗಗಳ ಮೇಲಿನ ನಂಬಿಕೆ ಹೆಚ್ಚುವಂತೆ ಮಾಡಬೇಕು. ಇದರಲ್ಲಿ ಅಧಿಕಾರಿಗಳ ಪಾತ್ರ ಮಹತ್ವಪೂರ್ಣವಾದುದು ಎಂದು ಅವರು ತಿಳಿಸಿದರು.
ಸಮೀಕ್ಷೆಯ ಹಿನ್ನೆಲೆಯನ್ನು ವಿವರಿಸಿದ ಅವರು, ರಾಜ್ಯದಲ್ಲಿರುವ ಪ್ರತಿಯೊಂದು ಪರಿಶಿಷ್ಟ ಜಾತಿಯ ಎಲ್ಲಾ ಕುಟುಂಬಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ವಿವರಗಳ ಬಗ್ಗೆ ಅಧ್ಯಯನ ನಡೆಸುವುದು ಈ ಸಮೀಕ್ಷೆಯ ಉದ್ದೇಶವಾಗಿದೆ. ಇದು ಅತ್ಯಂತ ಸವಾಲಿನ ಕೆಲಸ. ಆದರೆ ಅಸಾಧ್ಯವಲ್ಲ. ಈ ಸಮೀಕ್ಷೆಯ ಯಶಸ್ಸಿಗೆ ಎಲ್ಲ ಅಧಿಕಾರಿಗಳೂ ಶ್ರಮಿಸುವಂತೆ ಅವರು ಸಲಹೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಎಂ. ಮಂಜುನಾಥ ಪ್ರಸಾದ್ ಅವರು ರಾಜ್ಯ ಹಿಂದುಳಿದ ವರ್ಗಗಳ ಆಯೋಗವೂ ಇಂತಹುದೇ ಸಮೀಕ್ಷೆ ನಡೆಸಲು ಉದ್ದೇಶಿಸಿದ್ದು, ಇವೆರಡನ್ನೂ ಜೊತೆಯಾಗಿ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಶೀಘ್ರವೇ ಉನ್ನತ ಮಟ್ಟದ ಸಭೆ ಕರೆದು ಈ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ನ್ಯಾ. ಎ.ಜೆ. ಸದಾಶಿವ ಆಯೋಗದ ಕಾರ್ಯದರ್ಶಿ ಶ್ರೀ ಬಿ.ಬಿ. ಮುತ್ತಣ್ಣ ಸ್ವಾಗತಿಸಿದರು. ರಾಜ್ಯದ ಜಿಲ್ಲೆಗಳ ಅಪರ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ನಗರ ಪಾಲಿಕೆಗಳ ಆಯುಕ್ತರು ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಜಂಟಿ ಅಧಿವೇಶನ - ರಾಜ್ಯಪಾಲರಿಂದ ಭಾಷಣ
ಬೆಂಗಳೂರು, ಫೆ. ೨೪ ರಾಜ್ಯಪಾಲರಾದ ಹನ್ಸ್ರಾಜ್ ಭಾರಧ್ವಾಜ್ ಅವರು ನಾಳೆ ಅಪರಾಹ್ನ ೧೨-೦೦ ಗಂಟೆಗೆ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ರಾಜ್ಯಪಾಲರಾಗಿ ನಿಯೋಜನೆಗೊಂಡ ನಂತರ ಇದು ಎಚ್.ಆರ್.ಭಾರದ್ವಾಜ್ ಅವರ ಚೊಚ್ಚಲ ಭಾಷಣವಾಗಿದೆ.