ಮಂಗಳೂರು,ಮಾ 02: ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಪತ್ರಿಕಾ ಕಛೇರಿ ಹಾಗೂ ಬಿಜೈ ಬಳಿಯ ಪತ್ರಿಕಾ ಕಛೇರಿಗೆ ದುರ್ಷ್ಕಮಿಗಳ ತಂಡವೊಂದು ದಾಳಿ ನಡೆಸಿ ಲಕ್ಷಕ್ಕೂ ಹೆಚ್ಚಿನ ಸೋತ್ತುಗಳನ್ನು ನಾಶ ಪಡಿಸಿರುವ ಘಟನೆ ಇಂದು ರಾತ್ರಿ ಸುಮಾರು 9 ಗಂಟೆಯ ಹೊತ್ತಿಗೆ ನಡೆದಿದೆ.
ಸುಮಾರೂ 15 ಜನಗಳಿದ್ದ ಮುಸುಕುದಾರಿಗಳ ತಂಡವು ನಗರದ ಕೆ.ಎಸ್.ರಾವ್ ರಸ್ತೆಯ ಕನ್ನಡ ಫ್ರಭ ಮತ್ತು ಬಿಜೈ ಬಳಿಯ ಜಯಕಿರಣ ಪತ್ರಿಕಾ ಕಛೇರಿಗೆ ನುಗ್ಗಿ ಒರ್ವ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ದಾಂಧಲೆ ನಡೆಸಿದಲ್ಲದೇ, ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಉಪಯೋಗಿಸಿ ಪತ್ರಿಕಾ ಕಛೇರಿಯ 3 ಕಂಪ್ಯೂಟರ್ ಮತ್ತು ಪಿಠೋಪಕರಣಗಳು ಸೇರಿದಂತೆ ಸುಮಾರೂ ಒಂದು ಲಕ್ಷಕ್ಕೂ ಹೆಚ್ಚಿನ ಸೊತ್ತು ನಾಶಪಡಿಸಿದ್ದಾರೆ.
ಈ ಘಟನೆಯು ತಸ್ಲಿಮಾ ನಸ್ರೀನ್ ಅವರು ಬರೆದ ವಿವಾದಾತ್ಮಕ ಲೇಖನವನ್ನು ಪತ್ರಿಕೆಯಲ್ಲಿ ಪ್ರಕಟಣೆ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ನಡೆದಿದೆ ಎಂದು ಶಂಕಿಸಲಾಗಿದೆ.
ದುಷ್ಕರ್ಮಿಗಳ ಬಗ್ಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಪೊಲೀಸ್ವರಿಷ್ಠಾಧಿಕಾರಿ ಡಾ| ಸುಬ್ರಹ್ಮಣೇಶ್ವರ ರಾವ್ ಬೇಟಿ ನೀಡಿದ್ದಾರೆ. ನಗರಾದ್ಯಂತ ವ್ಯಾಪಕ ಬಂದೊಬಸ್ತು ಮಾಡಲಾಗಿದೆ. ಅಲ್ಲದೇ ಮುಂಜಾಗ್ರುತ್ತಾ ಕ್ರಮವಾಗಿ ನಾಕಬಂದಿ ನಡೆಸಿ ಕೆಲವರನ್ನು ಬಂದಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೀಗ ಮಂಗಳೂರಿನಲ್ಲಿ 2 ದಿನ ಕಾಲ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಘಟನೆ ವಿವರ:
ನಗರದ ಕೆ.ಎಸ್ರಾವ್ ರಸ್ತೆಯಲ್ಲಿರುವ ರಾಜ್ಯ ಮಟ್ಟದ ದಿನಪತ್ರಿಕೆ ಕಚೇರಿ ಮೇಲೆ ರಾತ್ರಿ 9.15ರ ವೇಳೆ ದಾಳಿ ನಡೆದಿದೆ.
‘ಮುಸುಕುಧಾರಿಗಳು ಏಕಾಏಕಿ ನುಗ್ಗಿ ಪತ್ರಿಕಾ ಸಿಬ್ಬಂದಿ ಮೇಲೆ ಮುಗಿಬಿದ್ದರು. ನಂತರ ಪೆಟ್ರೋಲ್ ಬಾಂಬ್ ಎಸೆದರು. ಪರಿಣಾಮ ಪ್ರಿಂಟರ್ ಸುಟ್ಟುಹೋಗಿದ್ದು, ಮೂರು ಕಂಪ್ಯೂಟರ್ ಜಖಂಗೊಂಡಿವೆ. ಪೀಠೋಪಕರಣಗಳಿಗೂ ಹಾನಿಯಾಗಿದೆ.
ಒಳಗೆ ನಾಲ್ಕು ಮಂದಿ ದಾಂದಲೆ ನಡೆಸಿದ್ದರೆ, ಹೊರಭಾಗದಿಂದಲೂ ಕಿಡಿಗೇಡಿಗಳು ಕಲ್ಲು ತೂರಿದ್ದು, ಕಚೇರಿ ಕಿಟಕಿ ಗಾಜು ಪುಡಿಪುಡಿಯಾಗಿವೆ. 10 ಮಂದಿ ತಂಡದಲ್ಲಿದ್ದರು.
ದುಷ್ಕರ್ಮಿಗಳು ದಾಳಿ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು’ ಎಂದು ಪತ್ರಿಕಾ ಕಚೇರಿ ಸಿಬ್ಬಂದಿ ದೂರವಾಣಿ ಮೂಲಕ ತಿಳಿಸಿದರು.
‘ಪತ್ರಿಕಾಲಯದ ಹೆಚ್ಚಿನ ಸಿಬ್ಬಂದಿ ಒಳಗಿನ ಇನ್ನೊಂದು ಭಾಗದಲ್ಲಿದ್ದರು. ಹಾಗಾಗಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗುವುದು ತಪ್ಪಿತು. ಆದರೆ, ದಿಢೀರ್ ದಾಳಿಯಿಂದ ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ’ ಎಂದು ಅವರು ತಿಳಿಸಿದರು.
ಇನ್ನೊಂದು ಕಚೇರಿಗೂ ದಾಳಿ: ನಗರದ ಬಿಜೈ ಪ್ರದೇಶದಲ್ಲಿರುವ ಸಂಜೆ ಪತ್ರಿಕೆ ಕಚೇರಿಗೆ ಎಂಟು ಮಂದಿ ತಂಡ ನುಗ್ಗಿ ದಾಂದಲೆ ನಡೆಸಿದೆ. ರಾತ್ರಿ 9.30ರ ಸುಮಾರಿಗೆ ಕಚೇರಿಗೆ ನುಗ್ಗಿದ ಮುಸುಕುಧಾರಿಗಳು ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು. ಪತ್ರಿಕಾ ಸಿಬ್ಬಂದಿ ಸ್ವಲ್ಪದರಲ್ಲಿ ಪಾರಾದರು.
ದಾಳಿಕೋರರು ಕಂಪ್ಯೂಟರ್ ಹಾಗೂ ಪ್ರಿಂಟರ್ಗಳನ್ನು ಕಿತ್ತೆಸೆದರು. ಸೀಮೆಎಣ್ಣೆ ತುಂಬಿದ ಪ್ಯಾಕೆಟ್ಗಳನ್ನು ಕಂಪ್ಯೂಟರ್ನತ್ತ ಎತ್ತಿ ನೆಲಕ್ಕೆ ಕುಕ್ಕಿದರು. ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಕೇಕೆ ಹಾಕಿ ಪರಾರಿಯಾದರು ಎಂದು ಪತ್ರಿಕಾ ಸಿಬ್ಬಂದಿ ‘ಪ್ರಜಾವಾಣಿ’ಗೆ ವಿವರ ನೀಡಿದರು.
ದಾಳಿಯಿಂದ ನಾಲ್ಕು ಕಂಪ್ಯೂಟರ್ ಹಾಗೂ ಪ್ರಿಂಟರ್ ಧ್ವಂಸಗೊಂಡಿವೆ. ಕಿಟಕಿ ಹಾಗೂ ಕ್ಯಾಬಿನ್ ಗಾಜು ಹಾಗೂ ಹೂಕುಂಡಗಳು ಧ್ವಂಸಗೊಂಡಿವೆ.
‘ದಾಳಿಕೋರರು ಬೈಕ್ ಹಾಗೂ ಆಟೋರಿಕ್ಷಾದಲ್ಲಿ ಬಂದಿದ್ದರು. ಹೆಚ್ಚಿನವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದು, ಕೆಲವರು ಹೆಲ್ಮೆಟ್ ಧರಿಸಿದ್ದರು. ಹಾಗಾಗಿ ದಾಳಿ ನಡೆಸಿದ ವ್ಯಕ್ತಿಗಳನ್ನು ಗುರುತು ಹಿಡಿಯಲು ಸಾಧ್ಯವಾಗಿಲ್ಲ’ ಎಂದು ಅವರು ಹೇಳಿದರು.
15 ನಿಮಿಷ ಅಂತರ: ಎರಡು ಪತ್ರಿಕಾ ಕಚೇರಿಗಳ ಮೇಲೆ 15 ನಿಮಿಷಗಳ ಅಂತರದಲ್ಲಿ ದಾಳಿ ನಡೆದಿದೆ. ಕೆ.ಎಸ್. ರಾವ್ ರಸ್ತೆಯಲ್ಲಿರುವ ರಾಜ್ಯ ಮಟ್ಟದ ಪತ್ರಿಕಾ ಕಚೇರಿಗೆ ದಾಳಿ ನಡೆದ 15 ನಿಮಿಷ ತರುವಾಯ ಬಿಜೈನಲ್ಲಿರುವ ಸಂಜೆ ಪತ್ರಿಕೆ ಕಚೇರಿಗೆ ದಾಳಿ ನಡೆದಿದೆ. ಎರಡೂ ಕಡೆ ಒಂದೇ ತಂಡ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕನ್ನಡ ಪತ್ರಿಕೆಯೊಂದರಲ್ಲಿ ತಸ್ಲೀಮಾ ನಸ್ರೀನ್ ಅವರ ಅನುವಾದಿತ ಲೇಖನ ಪ್ರಕಟವಾದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿದೆ. ದಾಳಿ ಹಿನ್ನೆಲೆಯಲ್ಲಿ ನಗರದ ಎಲ್ಲಾ ಪತ್ರಿಕಾ ಕಚೇರಿಗಳಿಗೂ ಪೊಲೀಸ್ ಕಾವಲು ಒದಗಿಸಲಾಗಿದೆ.
ಶಿವಮೊಗ್ಗ/ದಾವಣಗೆರೆ/ಹಾಸನ ವರದಿ:
ಕನ್ನಡ ದಿನಪತ್ರಿಕೆಯೊಂದರಲ್ಲಿ ಅವಹೇಳನಕಾರಿ ಲೇಖನ ಪ್ರಕಟವಾಗಿದೆ ಎಂದು ಆರೋಪಿಸಿ ಸೋಮವಾರ ಶಿವಮೊಗ್ಗ ಮತ್ತು ಹಾಸನ ನಗರಗಳಲ್ಲಿ ಉಂಟಾಗಿದ್ದ ಪ್ರಕ್ಷುಬ್ಧ ವಾತಾವರಣ ಮಂಗಳವಾರ ಬಹುತೇಕ ತಿಳಿಯಾಗಿದ್ದಂತೆ ಕಂಡುಬಂದರೂ ಶಿವಮೊಗ್ಗದಲ್ಲಿ ಮಾತ್ರ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದೆ.
ಶಿವಮೊಗ್ಗ ನಗರದಲ್ಲಿ ಕರ್ಫ್ಯೂ ಇದ್ದರೂ ಅದನ್ನು ಭೇದಿಸಿ ಗಲಭೆ, ಲೂಟಿ ಮತ್ತು ಕಲ್ಲು ತೂರಾಟದ ಘಟನೆಗಳು ವ್ಯಾಪಕವಾಗಿ ನಡೆದಿವೆ. ಸಂಜೆ ನಗರದ ಹೊರವಲಯದ ಕೆಲವೆಡೆ ವಾಹನಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಡಿದ ಘಟನೆಗಳು ವರದಿಯಾಗಿವೆ .ಚಾಕು ಇರಿತದಿಂದ ಮತ್ತೊಬ್ಬ ಮೃತಪಟ್ಟಿದ್ದಾರೆಂಬ ಸುದ್ದಿ ರಾತ್ರಿ ವೇಳೆ ಹಬ್ಬಿತ್ತು. ಆದರೆ, ಇದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಮುರುಗನ್ ನಿರಾಕರಿಸಿದ್ದಾರೆ.
ಅನುಪಿನಕಟ್ಟೆ, ಶ್ರೀರಾಂಪುರ, ನಂಜಪ್ಪ ಲೇಔಟ್ನಲ್ಲಿ ಕಿಡಿಗೇಡಿಗಳು ಮೂರು ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಬೈಪಾಸ್ ರಸ್ತೆಯಲ್ಲಿನ ಮುಸ್ಲಿಂ ಸಮಾಜದ ಮನೆಯೊಂದಕ್ಕೆ ನುಗ್ಗಿ ಎರಡು ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿದ್ದಾರೆ. ಅದೇ ರೀತಿ, ಸೋಮಿನಕೊಪ್ಪದಲ್ಲಿ ಗುಡಿಸಲಿಗೆ ಬೆಂಕಿ ಹಚ್ಚಲಾಗಿದೆ.
ಕಾಲೇಜ್ ಮೇಲೆ ಕಲ್ಲು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಒಡೆತನದ ಮೈತ್ರಿ ನರ್ಸಿಂಗ್ ಕಾಲೇಜಿನ ಮೇಲೂ ಕಲ್ಲು ತೂರಾಡಿದ ಘಟನೆ ನಡೆದಿದೆ. ಅಂತೆಯೇ ಕಿಡಿಗೇಡಿಗಳು ಶಿವಮೊಗ್ಗ ರಸ್ತೆಯ ಆಟೋ ಕಾಂಪ್ಲೆಕ್ಸ್ ಬಳಿ ಗುಜರಿ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಟಿಪ್ಪು ನಗರದಲ್ಲಿ ಬಾಗಿಲು ಹಾಕಿದ ಅಂಗಡಿಗಳಿಗೆ ಕಲ್ಲು ತೂರಿದ್ದಾರೆ.
ಅಂತ್ಯಕ್ರಿಯೆ: ಸೋಮವಾರ ಗಲಭೆಯಲ್ಲಿ ಮೃತಪಟ್ಟ ಅಬ್ದುಲ್ ಲತೀಫ್ (45), ಸಾದಿಕ್ (23) ಅವರ ಅಂತ್ಯಕ್ರಿಯೆ ಪೊಲೀಸ್ ಸರ್ಪಗಾವಲಿನಲ್ಲಿ ನಡೆಯಿತು.
ಮಂಗಳವಾರ ನಗರಕ್ಕೆ ಎಂಟು ಕೆಎಸ್ಆರ್ಪಿ, ಒಂದು ಕ್ಷಿಪ್ರ ಕಾರ್ಯಾಚರಣೆ ಪಡೆಯ ತುಕಡಿಗಳು, ಎರಡು ಸಾವಿರ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಹೊರಗಿನಿಂದ ಕರೆಸಿಕೊಳ್ಳಲಾಗಿದೆ. ಮುಸ್ಲಿಂ ಬಾಂಧವರು ಸೋಮವಾರ ಮಧ್ಯಾಹ್ನ ನಡೆಸಿದ ಪ್ರತಿಭಟನೆಗೆ ಪೂರ್ವಾನುಮತಿ ಪಡೆದಿರಲಿಲ್ಲ. ಈ ಬಗ್ಗೆ ಯಾವುದೇ ಮಾಹಿತಿಯನ್ನು ಅವರು ನಮಗೆ ನೀಡಿರಲಿಲ್ಲ. ಇಲಾಖೆ ಕರೆದಿದ್ದ ಶಾಂತಿಸಭೆಯನ್ನೂ ಧಿಕ್ಕರಿಸಿ ಅವರು ಪ್ರತಿಭಟನೆ ನಡೆಸಿದ್ದಾರೆ ಎಂದು ಮುರುಗನ್ ಸ್ಪಷ್ಟಪಡಿಸಿದರು.
ಶಿವಮೊಗ್ಗದಲ್ಲಿ ಇದುವರೆಗೂ ಗಲಭೆಗೆ ಸಂಬಂಧಿಸಿದಂತೆ 90 ಜನರನ್ನು ಬಂಧಿಸಿಲಾಗಿದೆ.
ದಾವಣಗೆರೆ ವರದಿ: ದಾವಣಗೆರೆಯಲ್ಲಿ ಬುಧವಾರ ಮಧ್ಯರಾತ್ರಿ 12ಗಂಟೆವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ. ಸಮೀಪದ ಮಾಗಾನಹಳ್ಳಿ ಮಂಗಳವಾರ ಬಳಿ ಬೆಳಿಗ್ಗೆ ಕಿಡಿಗೇಡಿಗಳ ಗುಂಪೊಂದು ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿತು.
ಬಸ್ಸಿನ ಗಾಜುಗಳು ಪುಡಿಯಾಗಿದ್ದು, ಪ್ರಯಾಣಿಕರಿಬ್ಬರು ಗಾಯಗೊಂಡಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಪರಿಸ್ಥಿತಿ ಶಾಂತಿಯುತವಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಪಾಟೀಲ್ ’ಪ್ರಜಾವಾಣಿ’ಗೆ ತಿಳಿಸಿದರು.
ಹಾಸನ ವರದಿ: ಶ್ರೀರಾಮ ಸೇನೆ ಕಾರ್ಯಕರ್ತರು ಮಂಗಳವಾರ ಕರೆ ನೀಡಿದ್ದ ಹಾಸನ ಬಂದ್ ಸಂಪೂರ್ಣ ಯಶಸ್ವಿಯಾಗಿತ್ತು. ಏತನ್ಮಧ್ಯೆ ನಗರದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಯು ಪಥ ಸಂಚಲನ ನಡೆಸಿತು.
ಬಂದ್ಗೆ ಕರೆ ನೀಡಿದ್ದ ಶ್ರೀರಾಮ ಸೇನೆ ಕಾರ್ಯಕರ್ತರು ಜಿಲ್ಲಾಡಳಿತ ಕಚೇರಿಗೆ ಆಗಮಿಸಿ ಶಾಂತಿ ಸಭೆ ನಡೆಸಲು ಯತ್ನಿಸಿದರೂ ಪೊಲೀಸರು ಅವಕಾಶ ನೀಡಲಿಲ್ಲ. ಮುಸ್ಲಿಂ ಸಂಘಟನೆಗಳ ಮುಖಂಡರು, ಧರ್ಮ ಗುರುಗಳು ನಗರದಲ್ಲಿ ಶಾಂತಿ ಕಾಪಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.
ಶಾಂತಿಸಭೆ
ಈ ನಡುವೆ ವಿವಿಧ ರಾಜಕೀಯ ಪಕ್ಷ, ಸಂಘಟನೆ, ಧರ್ಮಗಳ ಮುಖಂಡರು ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಶಾಂತಿ ಸಭೆ ನಡೆಸಿದರು. ದಕ್ಷಿಣ ವಲಯ ಐಜಿಪಿ ಜೀವನಕುಮಾರ್ ಗಾಂವಕರ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.