ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹಾವೇರಿಯಲ್ಲಿ ಭೀಕರ ರಸ್ತೆ ಅಪಘಾತ 13 ಮಂದಿ ಮೃತ್ಯು ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಟಿಟಿ ವಾಹನ

ಹಾವೇರಿಯಲ್ಲಿ ಭೀಕರ ರಸ್ತೆ ಅಪಘಾತ 13 ಮಂದಿ ಮೃತ್ಯು ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಟಿಟಿ ವಾಹನ

Sat, 29 Jun 2024 13:40:17  Office Staff   Vb

ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳ ಸಹಿತ 13 ಮಂದಿ ಮೃತಪಟ್ಟ ಘಟನೆ ಶುಕ್ರವಾರ ಮುಂಜಾನೆ 4 ಗಂಟೆ ಸುಮಾರಿಗೆ ಸಂಭವಿಸಿದೆ.

ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಹಿಂದಿನಿಂದ ಟಿಟಿ ವಾಹನ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದವರು ಎಂದು ತಿಳಿದು ಬಂದಿದೆ. ಇನ್ನೂ ನಾಲ್ವರು ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ಕಲಬುರಗಿ ಜಿಲ್ಲೆಯ ಚಿಂಚೋಳಿಯ ಮಾಯಮ್ಮ ದೇವಿ ದರ್ಶನ ಮುಗಿಸಿಕೊಂಡ ನಂತರ ಬೆಳಗಾವಿ ಜಿಲ್ಲೆಯ ಸವದತ್ತಿ ಎಲ್ಲಮ್ಮನಗುಡ್ಡಕ್ಕೆ ತೆರಳಿ ದರ್ಶನ ಮುಗಿಸಿಕೊಂಡು ಊರಿಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಅಪಘಾತದಲ್ಲಿ ಟಿಟಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನದಲ್ಲಿ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರ ತೆಗೆದು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.

ಟಿಟಿ ವಾಹನದಲ್ಲಿ ಒಟ್ಟು 17 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಂಶುಕುಮಾರ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ಬಗ್ಗೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: